

ಇಂದೋರ್: ಮಧ್ಯಪ್ರದೇಶದ ಇಂದೋರ್ ಗೆ ಶನಿವಾರ ಆಗಮಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ನಗರದಲ್ಲಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಅಲ್ಲದೇ ಇಂದೋರ್ ನ ಬಾಂಬೆ ಆಸ್ಪತ್ರೆಗೆ ಭೇಟಿ ನೀಡಿ, ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವವರು ಹಾಗೂ ಅವರು ಕುಟುಂಬಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬುವ ಹಾಗೂ ನೆಲದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಗುರಿಯೊಂದಿಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ನಾಳೆ ಭಾಗೀರಥಪುರಕ್ಕೂ ಭೇಟಿ ನೀಡಲಿದ್ದು, ಕಲುಷಿತ ನೀರು ಕುಡಿದು ಅಸ್ವಸ್ಥರಾದ ಕುಟುಂಬದವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿದೆ.
ಈ ಮಧ್ಯೆ ರಾಜ್ಯದಲ್ಲಿನ ಬಿಜೆಪಿ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ವಾಗ್ದಾಳಿ ನಡೆಸಿದ್ದಾರೆ. ANI ಜೊತೆ ಮಾತನಾಡಿದ ಅವರು, 20 ವರ್ಷಗಳಿಂದ ಮಧ್ಯಪ್ರದೇಶವನ್ನು ಆಳಿದ ಬಿಜೆಪಿಗೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ರಾಹುಲ್ ಗಾಂಧಿ ಅರ್ಥಮಾಡಿಕೊಳ್ಳುತ್ತಾರೆ ಎಂದರು.
ಇಂದೋರ್‌ನಲ್ಲಿ ವಿಷಯುಕ್ತ ನೀರು ಸೇವನೆಯಿಂದ 24-25 ಜನರು ಸಾವನ್ನಪ್ಪಿದ್ದಾರೆ, ಮಧ್ಯಪ್ರದೇಶ ಸರ್ಕಾರ, ಮಧ್ಯಪ್ರದೇಶದ ಮಂತ್ರಿ ಮತ್ತು ನಮ್ಮ ಮುಖ್ಯಮಂತ್ರಿಗಳು ಆರೋಪ ಮತ್ತು ಪ್ರತ್ಯಾರೋಪದ ರಾಜಕೀಯದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ 20 ವರ್ಷಗಳಿಂದ ಬಿಜೆಪಿ ಆಡಳಿತವಿದೆ. ಸುಮಾರು 25 ವರ್ಷಗಳಿಂದ ಇಂದೋರ್ ನಗರದಲ್ಲಿ ಬಿಜೆಪಿ ನೇತೃತ್ವದ ಮುನ್ಸಿಪಲ್ ಕಾರ್ಪೊರೇಷನ್ ಆಡಳಿತ ನಡೆಸುತ್ತಿದ್ದು, 30 ವರ್ಷಗಳಿಂದ ಬಿಜೆಪಿ ಶಾಸಕರಿದ್ದಾರೆ. ಆದರೆ ಜನರಿಗೆ ಶುದ್ಧ ನೀರು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆಯನ್ನು ತಳಮಟ್ಟದಲ್ಲಿ ಮತ್ತು ಅದರ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ರಾಹುಲ್ ಗಾಂಧಿ ಇಂದೋರ್‌ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಶುದ್ಧ ಗಾಳಿ ಮತ್ತು ಕುಡಿಯುವ ನೀರಿನ ಖಾತ್ರಿ ಹಾಗೂ ನ್ಯಾಯ ಮತ್ತು ಪರಿಹಾರಗಳನ್ನು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ಮಧ್ಯಪ್ರದೇಶ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಹೇಳಿದ್ದಾರೆ.
ಇಂದೋರ್‌ನ ಭಾಗೀರಥ್‌ಪುರದಲ್ಲಿ ಕಲುಷಿತ ನೀರು ಸೇವನೆಯಿಂದ ಜನರು ಅಸ್ವಸ್ಥರಾದ ಘಟನೆ ವ್ಯಾಪಕ ಟೀಕೆಗೆ ಕಾರಣವಾಗಿದೆ. ಈ ಹಿಂದೆ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಆರ್ಥಿಕ ನೆರವು ಮತ್ತು ಎಲ್ಲಾ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ಘೋಷಿಸಿದ್ದರು.
Advertisement