

ಕೋಲ್ಕತ್ತಾ: ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 830 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಅಲ್ಲದೆ ಕೋಲ್ಕತ್ತಾವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಮೂರು ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು.
ಇಂದು ಹೂಗ್ಲಿ ಜಿಲ್ಲೆಯ ಸಿಂಗೂರಿನಲ್ಲಿ ನಡೆದ ಸಮಾರಂಭದಲ್ಲಿ, ಪ್ರಧಾನಿ ಮೋದಿ, ಜಯರಾಂಬಟಿ-ಬರೋಗೋಪಿನಾಥಪುರ-ಮೇನಾಪುರ ರೈಲು ಮಾರ್ಗವನ್ನು ಉದ್ಘಾಟಿಸಿದರು ಮತ್ತು ಮೇನಾಪುರ ಹಾಗೂ ಜಯರಾಂಬಟಿ ನಡುವಿನ ರೈಲಿಗೆ ಹಸಿರು ನಿಶಾನೆ ತೋರಿದರು.
ಹೂಗ್ಲಿ ಜಿಲ್ಲೆಯ ಬಾಲಗಢದಲ್ಲಿ ಒಳನಾಡಿನ ಜಲ ಸಾರಿಗೆ(ಐಡಬ್ಲ್ಯೂಟಿ) ಟರ್ಮಿನಲ್ ಮತ್ತು ರಸ್ತೆ ಮೇಲ್ಸೇತುವೆ ಸೇರಿದಂತೆ ವಿಸ್ತೃತ ಬಂದರು ದ್ವಾರ ವ್ಯವಸ್ಥೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.
ಸರಿಸುಮಾರು 900 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಬಾಲಗಢವನ್ನು ವಾರ್ಷಿಕ ಸುಮಾರು 2.7 ಮಿಲಿಯನ್ ಟನ್‌ಗಳ (ಎಂಟಿಪಿಎ) ಸಾಮರ್ಥ್ಯದೊಂದಿಗೆ ಆಧುನಿಕ ಸರಕು ನಿರ್ವಹಣಾ ಟರ್ಮಿನಲ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ.
ಕೋಲ್ಕತ್ತಾವನ್ನು ನವದೆಹಲಿ, ವಾರಣಾಸಿ ಮತ್ತು ಚೆನ್ನೈನೊಂದಿಗೆ ಸಂಪರ್ಕಿಸುವ ಮೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಮೋದಿ ಹಸಿರು ನಿಶಾನೆ ತೋರಿದರು. ಈ ರೈಲುಗಳು ಹೌರಾ-ಆನಂದ್ ವಿಹಾರ್ ಟರ್ಮಿನಲ್, ಸೀಲ್ಡಾ-ಬನಾರಸ್ ಮತ್ತು ಸಂತ್ರಗಚಿ-ತಾಂಬರಂ ಮಾರ್ಗಗಳಲ್ಲಿ ಚಲಿಸುತ್ತವೆ.
ಬಳಿಕ ಸಿಂಗೂರಿನಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೋದಿ, ಈ ಎಲ್ಲಾ ಕೇಂದ್ರ ಯೋಜನೆಗಳು ಪಶ್ಚಿಮ ಬಂಗಾಳದ ಅಭಿವೃದ್ಧಿಯನ್ನು, ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸುತ್ತವೆ. ಅಭಿವೃದ್ಧಿ ಹೊಂದಿದ ಪೂರ್ವ ಭಾರತದ ಗುರಿ ಸಾಧಿಸಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ" ಎಂದರು.
ನಿನ್ನೆ ಮಾಲ್ಡಾ ಟೌನ್ ನಿಲ್ದಾಣದಿಂದ ಹೌರಾ ಮತ್ತು ಗುವಾಹಟಿ(ಕಾಮಾಖ್ಯ) ನಡುವಿನ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದ್ದರು.
Advertisement