

ಧಾರ್: ಮಧ್ಯಪ್ರದೇಶದ ಧಾರ್ ಜಿಲ್ಲೆಯ 11 ನೇ ಶತಮಾನದ ವಿವಾದಿತ ಭೋಜ್ ಶಾಲಾ- ಕಮಲಾ ಮೌಲಾ ಮಸೀದಿ ಆವರಣದಲ್ಲಿ ಶುಕ್ರವಾರ ಬಸಂತ್ ಪಂಚಮಿ ಹಬ್ಬ ಹಿನ್ನೆಲೆಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಿದ್ದರೆ, ಮುಸ್ಲಿಮರು ಬೇರೆ ಸ್ಥಳದಲ್ಲಿ ನಮಾಜ್ ಮಾಡಿದರು.
ಭಾರಿ ಭದ್ರತೆಯಲ್ಲಿ ಪೂಜೆ ಆರಂಭಗೊಂಡಿದ್ದು, ಸೂರ್ಯಾಸ್ತದವರೆಗೂ ನಡೆಯಲಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಮುಸ್ಲಿಮರು ಮಧ್ಯಾಹ್ನ 1 ರಿಂದ 3 ರ ನಡುವೆ ಅವರಿಗೆ ನಿಗದಿಪಡಿಸಿದ ಸ್ಥಳದಲ್ಲಿ ನಮಾಜ್ ಮಾಡಿದರು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವುದೇ ಅಹಿತಕರ ಅಥವಾ ಶಾಂತಿಗೆ ಭಂಗ ತರುವಂತಹ ಘಟನೆ ವರದಿಯಾಗಿಲ್ಲ. ನಗರದಲ್ಲಿ ಸುಮಾರು 8,000 ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಇಂದು ಬಸಂತ್ ಪಂಚಮಿ ಹಿನ್ನೆಲೆಯಲ್ಲಿ ಸಂಭಾವ್ಯ ಘರ್ಷಣೆಯನ್ನು ತಡೆಯಲು ಸುಪ್ರೀಂ ಕೋರ್ಟ್ ಗುರುವಾರ ಸಮಯ ಹಂಚಿಕೆ ಸೂತ್ರವನ್ನು ಹೊರಡಿಸಿತ್ತು.
ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹಿಂದೂ ಸಮುದಾಯಕ್ಕೆ ಪ್ರಾರ್ಥನೆ ಮಾಡಲು ಮತ್ತು ಮುಸ್ಲಿಮರು ಮಧ್ಯಾಹ್ನ 1 ರಿಂದ 3 ಗಂಟೆಯ ನಡುವೆ ನಮಾಜ್ ಮಾಡಲು ಅವಕಾಶ ನೀಡಲಾಗಿದೆ. ಸೂರ್ಯೋದಯದ ವೇಳೆಗೆ ಕೇಸರಿ ಧ್ವಜಗಳು ಮತ್ತು ಹೂವುಗಳಿಂದ ಅಲಂಕರಿಸಲ್ಪಟ್ಟ ಐತಿಹಾಸಿಕ ಸ್ಥಳದಲ್ಲಿ ಭಕ್ತರು ಸೇರಲು ಪ್ರಾರಂಭಿಸಿದರು.
ಸ್ಥಳೀಯ ಸಂಸ್ಥೆಯಾದ ಭೋಜ್ ಉತ್ಸವ ಸಮಿತಿಯ ಸದಸ್ಯರು ವೇದ ಮಂತ್ರಗಳ ಪಠಣ ಮತ್ತು ಅಖಂಡ ಪೂಜೆ ((ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿರಂತರ ಪ್ರಾರ್ಥನೆ) ನಡುವೆ ಮಾ ವಾಗ್ದೇವಿ ಎಂದೂ ಕರೆಯಲ್ಪಡುವ ಸರಸ್ವತಿ ದೇವಿಯ ಭಾವಚಿತ್ರ ಪ್ರತಿಷ್ಠಾಪಿಸುವ ಮೂಲಕ ಪೂಜೆ ಪ್ರಾರಂಭಿಸಿದರು. ವಿವಾದಿತ ಮಸೀದಿಯ ಪ್ರತಿಯೊಂದು ಮೂಲೆಯಲ್ಲೂ ಭದ್ರತಾ ಸಿಬ್ಬಂದಿ ನಿಂತಿದ್ದರು. ಬಿಗಿ ಭದ್ರತೆಯ ನಡುವೆ ಹಿಂದೂ ಸಮುದಾಯದ ಪ್ರಾರ್ಥನೆಗಳು ಸುಗಮವಾಗಿ ನಡೆಯುತ್ತಿವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಿಯಾಂಕ್ ಮಿಶ್ರಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರ ಪ್ರಾರ್ಥನೆ ಯಾವುದೇ ಅಡೆತಡೆಯಿಲ್ಲದೆ ನಡೆಸಲು ವ್ಯವಸ್ಥೆ ಮಾಡಿದ್ದೇವೆ ಎಂದು ಅವರು ಹೇಳಿದರು. ಇಡೀ ನಗರದಲ್ಲಿ ಬಂದೋಬಸ್ತ್ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಯಾಂಕ್ ಅವಸ್ತಿ ತಿಳಿಸಿದ್ದಾರೆ.
Advertisement