

ಮುಂಬೈ: ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ (BMC)ಅಚ್ಚರಿ ರೀತಿಯಲ್ಲಿ ಬದ್ಧ ವೈರಿಗಳಾದ ಬಿಜೆಪಿ ಹಾಗೂ ಶಿವಸೇನಾ (UBT)ಮೈತ್ರಿಯ ಸಾಧ್ಯತೆ ಬಗ್ಗೆ ಊಹಾಪೋಹಗಳು ಹೆಚ್ಚಾಗುತ್ತಿವೆ.ಮುಂಬೈ ಮೇಯರ್ ಸ್ಥಾನ ಮತ್ತು ಪ್ರಮುಖ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವಂತೆ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಒತ್ತಡ ಹಾಕುತ್ತಿರುವಂತೆಯೇ ಅವರನ್ನು ಬದಿಗೊತ್ತಿ ಶಿವಸೇನಾ (ಯುಬಿಟಿ) ಜೊತೆಗೆ ಕೈ ಜೋಡಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.
ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ 100 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ಕುತೂಹಲ ಕೆರಳಿಸಿದೆ. ಏಷ್ಯಾದ ಶ್ರೀಮಂತ ನಾಗರಿಕ ಸಂಸ್ಥೆಯಲ್ಲಿ ಬಿಜೆಪಿ, ಶಿವಸೇನೆ (UBT) ಮತ್ತು MNS ಒಗ್ಗೂಡುವ ಚರ್ಚೆಯನ್ನು ಹುಟ್ಟುಹಾಕಿದೆ.
ಬಾಳಾಸಾಹೇಬರು ಕೆಲವೊಮ್ಮೆ ರಾಜಕೀಯದಲ್ಲಿ ಹೊಂದಿಕೊಳ್ಳುವ ನಿಲುವು ತಳೆಯಬೇಕಾದಾಗಲೂ, ಮರಾಠಿ ಜನರ ಮೇಲಿನ ಅವರ ಪ್ರೀತಿ ಸ್ವಲ್ಪವೂ ಕಡಿಮೆಯಾಗಿರಲಿಲ್ಲ. ಬದಲಾಗಿ, ಅದು ಬಲವಾಯಿತು. ಇವುಗಳು ನಮ್ಮಲ್ಲಿ ತುಂಬಿದ ಮೌಲ್ಯಗಳಾಗಿವೆ. ನಾನು ಈ ಮಾತನ್ನು ಮತ್ತೆ ಹೇಳುತ್ತಿದ್ದೇನೆ. ಈ ರಾಜಕಾರಣದಲ್ಲಿ ನಾನು ಸ್ವಲ್ಪ ಹೊಂದಿಕೊಳ್ಳಬಹುದಾದ ನಿಲುವು ತೆಗೆದುಕೊಂಡರೆ ಅದು ನನ್ನ ವೈಯಕ್ತಿಕ ಲಾಭವಾಗಿರುವುದಿಲ್ಲ ಎಂದಿದ್ದಾರೆ.
227 ಸದಸ್ಯ ಬಲದ BMC ಯಲ್ಲಿ ಬಿಜೆಪಿ 89 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಂತರ ಶಿವಸೇನೆ (ಯುಬಿಟಿ) 66 ಸ್ಥಾನಗಳನ್ನು ಹೊಂದಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ 21 ಸ್ಥಾನಗಳನ್ನು ಗಳಿಸಿದೆ. ಮ್ಯಾಜಿಕ್ ನಂಬರ್ 114 ಆಗಿದ್ದು, ಯಾವುದೇ ಪಕ್ಷಕ್ಕೆ ಬಹುಮತವಿಲ್ಲ, ಮೈತ್ರಿ ಅನಿವಾರ್ಯವಾಗಿದೆ-ಬಹುತೇಕ ಬಿಜೆಪಿ ಮತ್ತು ಶಿವಸೇನೆ (ಯುಬಿಟಿ) ನಡುವೆ ಮೈತ್ರಿಯಾಗುವ ಸಾಧ್ಯತೆಯಿದೆ.
BMC ಯಲ್ಲಿನ ವಿಶ್ವಾಸ ಮತ ವೇಳೆ ಶಿವಸೇನೆ (UBT) ಗೈರುಹಾಜರಾಗಬಹುದು ಎಂಬ ಊಹಾಪೋಹವಿದೆ. ಇದರಿಂದಾಗಿ ಮೇಯರ್ ಸ್ಥಾನ ಮತ್ತು ಸ್ಥಾಯಿ ಮತ್ತು ಸುಧಾರಣಾ ಸಮಿತಿಗಳ ಅಧ್ಯಕ್ಷ ಸ್ಥಾನಗಳನ್ನು ಪಡೆಯುವ ಬಿಜೆಪಿಯ ಹಾದಿಯನ್ನು ಸುಗಮಗೊಳಿಸಬಹುದು ಎನ್ನಲಾಗಿದೆ.
ಈ ಮಧ್ಯೆ ಮಾತನಾಡಿರುವ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್, ತಮ್ಮ ಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಪರಿಗಣಿಸಬಹುದಾದರೂ ಎಂದಿಗೂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಹೇಳಿದ್ದಾರೆ. ಶಿಂಧೆಯನ್ನು "ದೇಶದ್ರೋಹಿ" ಎಂದು ಕರೆದ ರಾವತ್ "ಯಾವುದೇ ಕಾರಣಕ್ಕೂ ದೇಶದ್ರೋಹಿಗಳೊಂದಿಗೆ"ರಾಜಿ ಇಲ್ಲ ಎಂದಿದ್ದಾರೆ. ಕಲ್ಯಾಣ್-ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಶಿಂಧೆ ನೇತೃತ್ವದ ಸೇನೆಯೊಂದಿಗೆ ಎಂಎನ್‌ಎಸ್ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ನಡುವೆ ರಾಜ್ ಠಾಕ್ರೆ ಮಧ್ಯವರ್ತಿ ಪಾತ್ರವನ್ನು ವಹಿಸಬಹುದೆಂದು ಮೂಲಗಳು ತಿಳಿಸಿವೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕಾಣಿಸಿಕೊಳ್ಳುತ್ತಿರುವ ಮಹಾರಾಷ್ಟ್ರ ರಾಜಕಾರಣದಲ್ಲಿ ಏನು ಬೇಕಾದರೂ ಸಂಭವಿಸುವ ಸಾಧ್ಯತೆಯಿದೆ.
Advertisement