

ನವದೆಹಲಿ: ಕರ್ನಾಟಕದ 8 ಮಂದಿ ಸೇರಿದಂತೆ ದೇಶಾದ್ಯಂತ 131 ಮಂದಿ ಸಾಧಕರನ್ನು ಕೇಂದ್ರ ಸರ್ಕಾರ ಭಾನುವಾರ ಪದ್ಮ ಪ್ರಶಸ್ತಿಗಳಿಗಾಗಿ ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಐವರಿಗೆ ಪದ್ಮವಿಭೂಷಣ, 13 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ.
ಕಲೆ, ಸಾರ್ವಜನಿಕ ವ್ಯವಹಾರ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಮಾಜ ಸೇವೆ, ವ್ಯಾಪಾರ ಮತ್ತು ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಲಾದ ಅಸಾಧಾರಣ ಸೇವೆಗಳನ್ನು ಗುರುತಿಸಿ ಪ್ರಶಸ್ತಿಗೆ ಈ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಈ ವರ್ಷದ ಪುರಸ್ಕೃತರ ಪಟ್ಟಿಯಲ್ಲಿ 19 ಮಹಿಳಾ ಪುರಸ್ಕೃತರು, ವಿದೇಶಿಯರು, NRI, PIO, OCI ವರ್ಗದಿಂದ 6 ಮಂದಿ ಹಾಗೂ 16 ಮರಣೋತ್ತರ ಪ್ರಶಸ್ತಿಗಳು ಸೇರಿವೆ.
ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣಕ್ಕೆ ಆಯ್ಕೆಯಾದವರಲ್ಲಿ ಹಿರಿಯ ನಟ ಧರ್ಮೇಂದ್ರ ಸಿಂಗ್ ಡಿಯೋಲ್ (ಮರಣೋತ್ತರ), ಕೇರಳದ ಮಾಜಿ ಮುಖ್ಯಮಂತ್ರಿ ವಿ ಎಸ್ ಅಚ್ಯುತಾನಂದನ್ (ಮರಣೋತ್ತರ), ಶಾಸ್ತ್ರೀಯ ಪಿಟೀಲು ವಾದಕ ಎನ್ ರಾಜಮ್, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಕೆ.ಟಿ. ಥಾಮಸ್ ಮತ್ತು ಪ್ರಸಿದ್ಧ ಬರಹಗಾರ ಪಿ ನಾರಾಯಣನ್ ಸೇರಿದ್ದಾರೆ. ಪ್ರಶಸ್ತಿಯು ಅಸಾಧಾರಣ ಮತ್ತು ವಿಶಿಷ್ಟ ಸೇವೆಯನ್ನು ಗುರುತಿಸುತ್ತದೆ.
ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಹರ್ಮನ್ ಪ್ರೀತ್ ಕೌರ್ ಹಾಗೂ ಸವಿತಾ ಪುನಿಯಾ ಅವರಿಗೆ ಪದ್ಮಶ್ರಿ ಪ್ರಶಸ್ತಿ ಘೋಷಿಸಲಾಗಿದೆ.
ಇನ್ನೂ ಈ ಬಾರಿ ಕರ್ನಾಟಕದಿಂದ ಎಂಟು ಮಂದಿ ಸಾಧಕರು ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶತವಧಾನಿ ಆರ್. ಗಣೇಶ್ ಅವರು ಕಲಾ ವಿಭಾಗದಿಂದ ಪದ್ಮ ಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ನು ಉಳಿದಂತೆ ಸಮಾಜ ಕಾರ್ಯ ವಿಭಾಗದಿಂದ ಪುಸ್ತಕ ಪ್ರೇಮಿ ಅಂಕೇಗೌಡ, ಎಸ್. ಜಿ. ಸುಶೀಲಮ್ಮ, ಶಶಿ ಶೇಖರ್ ವೆಂಪತಿ (ಸಾಹಿತ್ಯ) ಡಾ. ಸುರೇಶ್ ಹಂಗನವಾಡಿ (ವೈದ್ಯಕೀಯ) ಜಿ.ಟಿ.ಜಗನ್ನಾಥನ್ (ವ್ಯಾಪಾರ ಮತ್ತು ಕೈಗಾರಿಕೆ) ಶುಭಾ ವೆಂಕಟೇಶ ಅಯ್ಯಂಗಾರ್ (ವಿಜ್ಞಾನ ಮತ್ತು ಎಂಜಿನಿಯರಿಂಗ್ ) ಮತ್ತು ಪ್ರಭಾಕರ್ ಕೊರೆ ಅವರನ್ನು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ. ಈ ಬಾರಿ ತಳ್ಳಮಟ್ಟದ ಸೇವೆ ಹಾಗೂ ಸಾಮಾಜಿಕ ಪ್ರಭಾವವನ್ನು ಪರಿಗಣಿಸಿ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
2026ರ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿಗಳು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
Advertisement