

ಚೆನ್ನೈ: ಇತ್ತೀಚಿಗೆ ಅಂತಿಮಗೊಂಡ ಭಾರತ-ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಭಾರತವೇ 'ಬಿಗ್ ವಿನ್ನರ್' ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ (US Trade Representative) ಜೇಮಿಸನ್ ಗ್ರೀರ್ ಒಪ್ಪಿಕೊಂಡಿದ್ದಾರೆ. ಆದರೆ, ಭಾರತ ಹಾಗೂ ಅಮೆರಿಕ ನಡುವಣ ಮುಕ್ತ ವ್ಯಾಪಾರ ಒಪ್ಪಂದ ಹಲವು ದಿನಗಳಿಂದ ನನೆಗುದಿಗೆ ಬಿದ್ದಿದೆ.
ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಗ್ರೀರ್, ಭಾರತ-EU ಒಪ್ಪಂದ ತನ್ನ ರಫ್ತುದಾರರಿಗೆ ಯುರೋಪಿಯನ್ ಮಾರುಕಟ್ಟೆಗೆ ವ್ಯಾಪಕ ಪ್ರವೇಶವನ್ನು ಒದಗಿಸುವ ಮೂಲಕ ಮತ್ತು ಕಡಿಮೆ-ವೆಚ್ಚದ ಉತ್ಪಾದನೆ ಮತ್ತು ಸೇವೆಗಳ ಕೇಂದ್ರವಾಗಿ ದೇಶದ ಪ್ರಯೋಜನವನ್ನು ಬಲಪಡಿಸುವ ಮೂಲಕ ಭಾರತಕ್ಕೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಣ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ದೀರ್ಘಕಾಲದಿಂದ ಸ್ಥಗಿತ, ರಷ್ಯಾದ ತೈಲ ಖರೀದಿ ಮೇಲೆ ಹೆಚ್ಚುವರಿ ಸುಂಕ ಮತ್ತಿತರ ಕಾರಣಗಳಿಂದ ಉಭಯ ರಾಷ್ಟ್ರಗಳ ನಡುವಣ ಸಂಬಂಧ ಅಷ್ಟಕಷ್ಟೇ ಎನ್ನುತ್ತಿರುವಾಗಲೇ ಗೀರ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಭಾರತದ ವ್ಯಾಪಾರ ತಂತ್ರ ಪ್ರಮುಖ ಆರ್ಥಿಕತೆಯ ರಾಷ್ಟ್ರಗಳೊಂದಿಗೆ ಸಮಗ್ರ ಒಪ್ಪಂದಗಳನ್ನು ಭದ್ರಪಡಿಸಿಕೊಳ್ಳುವಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಿದ್ದು, ಅಮೆರಿಕದಲ್ಲಿ ಭಾರತದ ಖ್ಯಾತಿ ಹೆಚ್ಚುತ್ತಿರುವುದು ಗೀರ್ ಅವರ ಹೇಳಿಕೆಯಿಂದಲೇ
ತಿಳಿದುಬರುತ್ತದೆ. ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದ ಮಾತುಕತೆಗಳು ವೇಗ ಪಡೆಯುವಲ್ಲಿ ವಿಫಲವಾಗಿದೆ. ಆದರೆ ಯುರೋಪಿಯನ್ ಒಕ್ಕೂಟದೊಂದಿಗೆ ವ್ಯಾಪಾರ ಒಪ್ಪಂದ ಅಂತಿಮಗೊಳಿಸುವ ಮೂಲಕ ಭಾರತವು ವಿಶ್ವದ ಅತಿದೊಡ್ಡ ಗ್ರಾಹಕ ಮಾರುಕಟ್ಟೆಗಳಲ್ಲಿ ತನ್ನ ನೆಲೆಯನ್ನು ಬಲಪಡಿಸಿಕೊಂಡಿದೆ. ಪ್ರಮುಖ ವಲಯಗಳಲ್ಲಿ ಅಮೆರಿಕ ಸೇರಿದಂತೆ ಎದುರಾಗಳಿಗೆ ಸೂಕ್ತ ಪೈಪೋಟಿ ನೀಡಲು ಭಾರತೀಯ ರಫ್ತುದಾರರಿಗೆ ಅವಕಾಶ ನೀಡಲಾಗಿದೆ.
ಅಧಿಕಾರಿಗಳ ಪ್ರಕಾರ, ಭಾರತ-EU ಒಪ್ಪಂದದಿಂದ ಅನೇಕ ಸರಕುಗಳ ಸುಂಕಗಳ ಕಡಿಮೆಯಾಗಲಿದೆ ಅಥವಾ ರದ್ದುಗೊಳ್ಳಲಿದೆ. ನಿಯಂತ್ರಣ ವಿಧಾನಗಳು ಸರಳಗೊಳ್ಳಲಿವೆ. ಸೇವೆಗಳು ಮತ್ತು ಹೂಡಿಕೆಗೆ ಅನುಕೂಲವಾಗಲಿದೆ. ಫಾರ್ಮಾಸ್ಯುಟಿಕಲ್ಸ್, ಜವಳಿ, ವಾಹನ ಘಟಕಗಳು, ರಾಸಾಯನಿಕಗಳು, ಮಾಹಿತಿ ತಂತ್ರಜ್ಞಾನ ಮತ್ತು ನವೀಕರಿಸಬಹುದಾದ ಇಂಧನ ಉಪಕರಣಗಳಂತಹ ವಲಯಗಳಲ್ಲಿ ಭಾರತಕ್ಕೆ ಹೆಚ್ಚಿನ ಉಪಯೋಗ ಆಗಲಿದೆ ಎಂದು ಹೇಳಿದ್ದಾರೆ.
Advertisement