

ಚೆನ್ನೈ: ತಮಿಳುನಾಡಿನಲ್ಲಿ ಕಳೆದುಹೋದ ವೈಭವವನ್ನು ಮರಳಿ ಪಡೆಯಲು ತಮ್ಮ ಮಗನ ಪಕ್ಷವಾದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಜೊತೆ ಮೈತ್ರಿ ಮಾಡಿಕೊಳ್ಳುವಂತೆ ನಟ ವಿಜಯ್ ಅವರ ತಂದೆ, ನಿರ್ಮಾಪಕ ಎಸ್ ಎ ಚಂದ್ರಶೇಖರ್ ಅವರು ಗುರುವಾರ ಕಾಂಗ್ರೆಸ್ ಗೆ ಒತ್ತಾಯಿಸಿದ್ದಾರೆ.
ಇಂದು ತಿರುವರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ, ಕಾಂಗ್ರೆಸ್‌ಗೆ ಬೆಂಬಲ ನೀಡುವ ಬಗ್ಗೆ ಯೋಚಿಸುತ್ತಿದೆ ಎಂದು ಬಹಿರಂಗಪಡಿಸಿದರು.
"ಕಾಂಗ್ರೆಸ್‌ಗೆ ಒಂದು ಇತಿಹಾಸ ಮತ್ತು ಪರಂಪರೆ ಇದೆ... ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಹೋರಾಡಿತ್ತು. ಆದರೆ ಈಗ ಕ್ಷೀಣಿಸುತ್ತಿರುವ ಪಕ್ಷವಾಗಿದೆ. ಅವರು ಇತರ ಪಕ್ಷಗಳಿಗೆ ಬೆಂಬಲ ನೀಡುತ್ತಿದ್ದಾರೆ ಮತ್ತು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದಾರೆ. ಅವರು ವಿಜಯ್ ಅವರಿಗೆ ಬೆಂಬಲ ನೀಡಿದ್ರೆ ಹಳೆಯ ವೈಭವವನ್ನು ಮರಳಿ ಪಡೆಯಬಹುದು. ಈ ಅವಕಾಶವನ್ನು ಬಳಸಿಕೊಳ್ಳುವುದು ಕಾಂಗ್ರೆಸ್‌ಗೆ ಬಿಟ್ಟದ್ದು" ಎಂದು ಹೇಳಿದ್ದಾರೆ.
ಆದಾಗ್ಯೂ, ಖ್ಯಾತ ನಟ ವಿಜಯ್ ಅವರಿಗೆ ರಾಜಕೀಯ ಭವಿಷ್ಯ ಉಜ್ವಲವಾಗಿದೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲದೆ ಸ್ಪರ್ಧಿಸುವಂತೆ ಜನರು ಟಿವಿಕೆಗೆ ಸಲಹೆ ನೀಡುತ್ತಿದ್ದಾರೆ. ಏಕೆಂದರೆ ಅವರ ಗೆಲುವು ಖಚಿತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಏತನ್ಮಧ್ಯೆ, ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಕೆ ಸೆಲ್ವಪೆರುಂಥಗೈ ಅವರು, ಚಂದ್ರಶೇಖರ್ ಅವರ ಬೇಡಿಕೆಯನ್ನು ತಳ್ಳಿಹಾಕಿದ್ದು, ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಪಕ್ಷಕ್ಕೆ ಅಗತ್ಯವಿರುವ ಎಲ್ಲಾ "ಉತ್ತೇಜನ" ನೀಡುತ್ತಿದ್ದಾರೆ ಎಂದು ಹೇಳಿದರು.
Advertisement