

ಕೋಝಿಕ್ಕೋಡ್: ರಾಜ್ಯಸಭಾ ಸಂಸದೆ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಡಾ. ಪಿ.ಟಿ. ಉಷಾ ಅವರ ಪತಿ ವಿ. ಶ್ರೀನಿವಾಸನ್ (64ವ) ಇಂದು ಶುಕ್ರವಾರ ನಸುಕಿನ ಜಾವ ನಿಧನರಾದರು. ಅವರು ತಿಕ್ಕೋಡಿ ಪೆರುಮಾಳ್‌ಪುರಂನಲ್ಲಿರುವ ಅವರ ನಿವಾಸದಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕುಸಿದು ಬಿದ್ದರು. ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಯ ಸಮಯದಲ್ಲಿ ಉಷಾ ಮನೆಯಲ್ಲಿ ಇರಲಿಲ್ಲ. ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸಲು ದೆಹಲಿಯಲ್ಲಿದ್ದ ಅವರು ಸುದ್ದಿ ತಿಳಿದ ತಕ್ಷಣ ಊರಿಗೆ ತೆರಳಿದ್ದಾರೆ. ಶ್ರೀನಿವಾಸನ್ ಪೊನ್ನಾನಿಯ ಕುಟ್ಟಿಕ್ಕಾಡ್‌ನಲ್ಲಿರುವ ವೆಂಗಲಿ ಥರಾವದ್‌ನ ನಾರಾಯಣನ್ ಮತ್ತು ಸರೋಜಿನಿ ದಂಪತಿಯ ಪುತ್ರರಾಗಿದ್ದು, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ನಿವೃತ್ತ ಡೆಪ್ಯೂಟಿ ಎಸ್‌ಪಿಯಾಗಿದ್ದರು.
1991 ರಲ್ಲಿ ತಮ್ಮ ದೂರದ ಸಂಬಂಧಿ ಪಿ.ಟಿ. ಉಷಾ ಅವರನ್ನು ವಿವಾಹವಾದರು. ದಂಪತಿಗೆ ಡಾ. ಉಜ್ವಲ್ ವಿಘ್ನೇಶ್ ಎಂಬ ಪುತ್ರನಿದ್ದಾರೆ.
ಪ್ರಧಾನಿ ಮೋದಿ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಅವರು ಪಿ.ಟಿ. ಉಷಾ ಅವರಿಗೆ ದೂರವಾಣಿ ಕರೆ ಮಾಡಿ ಸಂತಾಪ ಸೂಚಿಸಿದ್ದಾರೆ.
Advertisement