

ಜೈಪುರ: ಜೈಲಿನಲ್ಲಿ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆದೇಶದ ನಂತರ ಸಾಮಾಜಿಕ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಜೋಧ್‌ಪುರದ ಏಮ್ಸ್‌ಗೆ ಕರೆದೊಯ್ಯಲಾಗಿದೆ.
ಇಂದು ಮುಂಜಾನೆ 6.30 ರ ಸುಮಾರಿಗೆ ಜೋಧ್‌ಪುರ ಕೇಂದ್ರ ಕಾರಾಗೃಹದಿಂದ ಏಮ್ಸ್‌ನ ತುರ್ತು ವಿಭಾಗಕ್ಕೆ ಪೊಲೀಸರು ವಾಂಗ್‌ಚುಕ್‌ನನ್ನು ಕರೆತಂದರು. ಸುಮಾರು ಒಂದೂವರೆ ಗಂಟೆಗಳ ಕಾಲ ಅವರ ಮೇಲೆ ನಿಗಾ ವಹಿಸಲಾಗಿತ್ತು. ಗ್ಯಾಸ್ಟ್ರೋಎಂಟರಾಲಜಿಸ್ಟ್‌ನಿಂದ ಪರೀಕ್ಷಿಸಲಾಯಿತು.
ವಾಂಗ್ ಚುಕ್ ಅವರು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದು, ದೇಹದ ಹಲವು ಭಾಗಗಳಲ್ಲಿ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ. ನಿನ್ನೆಯೂ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಏಮ್ಸ್ ಗೆ ಕರೆದೊಯ್ಯಲಾಗಿತ್ತು. ಪರೀಕ್ಷೆಯ ನಂತರ ಅವರನ್ನು ಬಿಗಿ ಭದ್ರತೆಯಲ್ಲಿ ಜೋಧ್‌ಪುರ ಕೇಂದ್ರ ಕಾರಾಗೃಹಕ್ಕೆ ವಾಪಸ್ ಕಳುಹಿಸಲಾಗಿತ್ತು ಎಂದು AIIMS ಮೂಲಗಳು ಹೇಳಿವೆ.
ವಾಂಗ್‌ಚುಕ್ ಅವರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರ ಪತ್ನಿ, ಹಿರಿಯ ವಕೀಲ ಕಪಿಲ್ ಸಿಬಲ್ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಗುರುವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ. ವರಾಳೆ ಅವರು ವಾಂಗ್ ಚುಕ್ ಅವರನ್ನು ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರಿಂದ ಪರೀಕ್ಷಿಸುವಂತೆ ಜೈಲು ಆಡಳಿತಕ್ಕೆ ಸೂಚಿಸಿದರು.
ಅವರು ಜೈಲಿನಲ್ಲಿ ಕುಡಿದ ನೀರಿನಿಂದ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪದೇ ಪದೇ ದೂರು ನೀಡಿದರೂ ಚಿಕಿತ್ಸೆಗೆ ತಜ್ಞ ವೈದ್ಯರಿಲ್ಲ. ವಾಂಗ್‌ಚುಕ್‌ಗೆ ವಾರಕ್ಕೊಮ್ಮೆ ವೈದ್ಯಕೀಯ ತಪಾಸಣೆ ನಡೆಸಬೇಕು ಮತ್ತು ಅವರ ಕುಟುಂಬದಿಂದ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು ಎಂದು ಕಪಿಲ್ ಸಿಬಲ್ ವಾದಿಸಿದರು.
ಫೆಬ್ರವರಿ 2 ರೊಳಗೆ ವಾಂಗ್‌ಚುಕ್ ಅವರ ವೈದ್ಯಕೀಯ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ.
Advertisement