

ಮುಂಬೈ: ಇತ್ತೀಚಿಗೆ ವಿಮಾನ ಪತನದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಶನಿವಾರ ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಇಂದು ಸಂಜೆ 5 ಗಂಟೆಗೆ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಸುನೇತ್ರಾ ಪವಾರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಇದಕ್ಕು ಮುನ್ನ ಸುನೇತ್ರಾ ಪವಾರ್ ಅವರನ್ನು ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು.
ಇಂದು ಮುಂಬೈನಲ್ಲಿ ನಡೆದ ಎನ್ ಸಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ, ಎನ್‌ಸಿಪಿ ನಾಯಕ ಛಗನ್ ಭುಜಬಲ್ ಅವರು ರಾಜ್ಯಸಭಾ ಸದಸ್ಯೆಯಾಗಿರುವ ಸುನೇತ್ರಾ ಪವಾರ್ ಅವರ ಹೆಸರನ್ನು ಶಾಸಕಾಂಗ ಪಕ್ಷದ ನಾಯಕಿ ಸ್ಥಾನಕ್ಕೆ ಪ್ರಸ್ತಾಪಿಸಿದರು ಮತ್ತು ಇತರ ಹಿರಿಯ ನಾಯಕರು ಅದನ್ನು ಅನುಮೋದಿಸಿದರು.
2024ರಲ್ಲಿ ಎನ್ ಸಿಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಸುನೇತ್ರಾ ಪವಾರ್ ಅವರನ್ನು ಜೂನ್ 18, 2024 ರಂದು ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು.
ಇದೀಗ ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸುನೇತ್ರಾ ಅವರು, ಪತಿ ಅಜಿತ್ ಪವಾರ್ ಅವರು ವಹಿಸಿಕೊಂಡಿದ್ದ ಹಣಕಾಸು, ಅಬಕಾರಿ ಹಾಗೂ ಕ್ರೀಡಾ ಸೇರಿದಂತೆ ಪ್ರಮುಖ ಖಾತೆಗಳನ್ನು ವಹಿಸಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Advertisement