

ಜೈಪುರ: ರಾಜಸ್ಥಾನದ ಜೈಪುರದಲ್ಲಿ ಮಂಗಳವಾರ ಬೆಳಗ್ಗೆ ಅತೀ ವೇಗವಾಗಿ ಬಂದ ಟಿಪ್ಪರೊಂದು ಫುಟ್‌ಪಾತ್‌ನಲ್ಲಿ ಕುಳಿತಿದ್ದ ಕುಟುಂಬದ ಮೇಲೆ ಹರಿದಿದ್ದು, ಭೀಕರ ಅಪಘಾತದಲ್ಲಿ ತಂದೆ ಹಾಗೂ ಮೂವರು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಮತ್ತು ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಮಕ್ಕಳ ದೇಹಗಳು ಛಿದ್ರ ಛಿದ್ರವಾಗಿವೆ.
ಇಂದು ಬೆಳಗ್ಗೆ ಶ್ಯಾಮ್ ನಗರ ಪೊಲೀಸ್ ಠಾಣೆ ಪ್ರದೇಶದ 200 ಅಡಿ ಬೈಪಾಸ್‌ನಲ್ಲಿರುವ ಕಮಲಾ ನೆಹರು ನಗರದಲ್ಲಿ ಈ ಅಪಘಾತ ಸಂಭವಿಸಿದೆ. ಮೃತರನ್ನು ಚಂದ್ರಪ್ರಕಾಶ್ ಮತ್ತು ಅವರ ಪುತ್ರರಾದ ರಮೇಶ್ (11), ದೀಪಕ್ (8) ಹಾಗೂ ರತನ್ (10) ಎಂದು ಗುರುತಿಸಲಾಗಿದೆ.
ಚಂದ್ರಪ್ರಕಾಶ್ ಅವರ ಪತ್ನಿ ಕೈಲಾಶಿ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಎಸ್‌ಎಂಎಸ್ ಆಸ್ಪತ್ರೆಯ ಆಘಾತ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜೈತ್ಪುರಕ್ಕೆ ಹೋಗುವ ವಾಹನಕ್ಕಾಗಿ ಈ ಕುಟುಂಬ ಕಾಯುತ್ತಿದ್ದಾಗ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರೇಲರ್(ಟಿಪ್ಪರ್) ಚಾಲಕನ ನಿಯಂತ್ರಣ ತಪ್ಪಿ ಐವರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ನಂತರ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಶ್ಯಾಮ್ ನಗರ ಪೊಲೀಸ್ ಠಾಣೆಯ ಪೊಲೀಸರು, ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.