ಕರೂರು ಕಾಲ್ತುಳಿತ ಸ್ಥಳಕ್ಕೆ ತಮಿಳು ನಾಡು ಸಿಎಂ ವಿಜಯ್ ಭೇಟಿ: ಸಂತ್ರಸ್ತರ 32 ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ಸ್ಮಾರಕ ನಿರ್ಮಾಣ-Video

ಕರೂರಿಗೆ ನೀಡಿದ ಮೊದಲ ಭೇಟಿ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ವಿಜಯ್, ಇಂದು ಸಂಪೂರ್ಣ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ದುರಂತವನ್ನು ಭಾವುಕರಾಗಿ ಸ್ಮರಿಸಿದ ಅವರು, ಆ ಘಟನೆಯ ನೋವು ಇನ್ನೂ ತಮ್ಮನ್ನು ಕಾಡುತ್ತಿದೆ ಎಂದು ಹೇಳಿದರು.
Tamil Nadu CM Vijay
ತಮಿಳು ನಾಡು ಸಿಎಂ ವಿಜಯ್
Updated on

ಕರೂರು: 41 ಮಂದಿಯ ಸಾವಿಗೆ ಕಾರಣವಾಗಿದ್ದ ಹಾಗೂ ತಮಿಳು ನಾಡು ವಿಧಾನಸಭಾ ಚುನಾವಣೆಯ ಮೇಲೂ ಭಾರೀ ಪರಿಣಾಮ ಬೀರಿದ್ದ ಕರೂರು ಕಾಲ್ತುಳಿತ ದುರಂತದ ಒಂಬತ್ತು ತಿಂಗಳ ಬಳಿಕ, ಮುಖ್ಯಮಂತ್ರಿ ವಿಜಯ್ ಇಂದು ಶುಕ್ರವಾರ ನಗರಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ದುರಂತಕ್ಕೆ ಪೊಲೀಸರು ತಮ್ಮ ದಾರಿತಪ್ಪಿಸಿದ್ದು ಕಾರಣ ಎಂದು ಪೊಲೀಸ್ ವ್ಯವಸ್ಥೆಯನ್ನು ಪ್ರಶ್ನಿಸಿದರೆ, ಅಂದಿನ ಡಿಎಂಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಯಾದ ಬಳಿಕ ಕರೂರಿಗೆ ನೀಡಿದ ಮೊದಲ ಭೇಟಿ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ವಿಜಯ್, ಇಂದು ಸಂಪೂರ್ಣ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ದುರಂತವನ್ನು ಭಾವುಕರಾಗಿ ಸ್ಮರಿಸಿದ ಅವರು, ಆ ಘಟನೆಯ ನೋವು ಇನ್ನೂ ತಮ್ಮನ್ನು ಕಾಡುತ್ತಿದೆ ಎಂದು ಹೇಳಿದರು. ಕರೂರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಸ್ಮರಣಾರ್ಥ ಸ್ಮಾರಕ ನಿರ್ಮಿಸಲಾಗುವುದು; ರಾಜಕೀಯ ಲಾಭಕ್ಕಾಗಿ ಇಂತಹ ದುರಂತಗಳು ಮತ್ತೆ ಮರುಕಳಿಸಬಾರದು ಎಂದರು.

ಕರೂರು ಕಾಲ್ತುಳಿತ ದುರಂತ ಅಪಾರ ದುಃಖವನ್ನುಂಟು ಮಾಡಿದೆ. ನಮ್ಮ ಸಹೋದರಿಯರ ಮಕ್ಕಳನ್ನು ನಾವು ಕಳೆದುಕೊಂಡಿದ್ದೇವೆ ಎಂದು ಹೇಳಿದರು.

ವೆಲುಸಾಮಿಪುರಂನಲ್ಲಿ ನಡೆದ ವಿಜಯ್ ಅವರ ಚುನಾವಣಾ ಪ್ರಚಾರ ಸಭೆಯ ವೇಳೆ ಸಾವಿರಾರು ಟಿವಿಕೆ (TVK) ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೇರಿದ್ದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 41 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಈ ಘಟನೆಗೆ ತಮ್ಮ ಪಕ್ಷ ಹೊಣೆ ಎಂಬ ಆರೋಪವನ್ನು ವಿಜಯ್ ತಳ್ಳಿಹಾಕಿದರು. ಜನಸಂದಣಿಯನ್ನು ನಿಯಂತ್ರಿಸುವುದು ಪೊಲೀಸರ ಜವಾಬ್ದಾರಿಯಾಗಿತ್ತು ಎಂದರು.

ಜನಸಂದಣಿಯನ್ನು ನಿಯಂತ್ರಿಸಲು ನಾನು ಪೊಲೀಸರನ್ನು ನಂಬಿದ್ದೆ. ಆದರೆ ಸಾವಿಗೆ ನನ್ನನ್ನೇ ಹೊಣೆಗಾರನನ್ನಾಗಿ ಮಾಡಲಾಯಿತು ಎಂದರು. ರ್ಯಾಲಿಯಲ್ಲಿ ಕೈಗೊಂಡಿದ್ದ ಭದ್ರತಾ ವ್ಯವಸ್ಥೆಯನ್ನು ಪ್ರಶ್ನಿಸಿದ ಅವರು, ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ತಮ್ಮ ತಂಡಕ್ಕೆ ಅಧಿಕಾರಿಗಳು ಮುಂಚಿತವಾಗಿ ಮಾಹಿತಿ ನೀಡಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು. ಅದರ ಬದಲು ನಾಟಕ ಮಾಡಿ ಹೊಣೆಯನ್ನು ಇತರರ ಮೇಲೆ ಹೊರಿಸಲು ಅಧಿಕಾರಿಗಳು ಪ್ರಯತ್ನಿಸಿದರು ಎಂದು ಅವರು ಆರೋಪಿಸಿದರು.

ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ

ಕಾಲ್ತುಳಿತ ದುರಂತದಿಂದ ಬಾಧಿತಗೊಂಡ 32 ಕುಟುಂಬಗಳ ಸದಸ್ಯರಿಗೆ ಮುಖ್ಯಮಂತ್ರಿ ವಿಜಯ್ ನೇಮಕಾತಿ ಆದೇಶಗಳನ್ನು ವಿತರಿಸಿದರು. ಈ ಮಧ್ಯೆ, ರಾಜ್ಯ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ, ಸರ್ಕಾರದ ಕ್ರಮಕ್ಕೆ ತಡೆ ನೀಡಲು ನಿರಾಕರಿಸಿದೆ.

ಇದರ ಜೊತೆಗೆ, ಕೃಷ್ಣರಾಯಪುರಂ ತಾಲ್ಲೂಕಿನ ಮಾನವಾಸಿ ಗ್ರಾಮದಲ್ಲಿ ಎವರ್‌ವಾನ್ ಕೊಠಾರಿ ಫುಟ್‌ವೇರ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸ್ಥಾಪಿಸಲಾಗಲಿರುವ ಚರ್ಮರಹಿತ ಪಾದರಕ್ಷೆಗಳ ಉತ್ಪಾದನಾ ಕಾರ್ಖಾನೆಗೆ ಮುಖ್ಯಮಂತ್ರಿ ವಿಜಯ್ ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 1,700 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಿಂದ 13,500 ಮಂದಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು, ಮುಖ್ಯಮಂತ್ರಿ 'ಮಕ್ಕಳ್ ಸಂತಿಪ್ಪು' ಕಾರ್ಯಕ್ರಮದಲ್ಲಿ ಭಾಗವಹಿಸಿ, ಟಿವಿಕೆ ಪಕ್ಷದ ಕಾರ್ಯಕರ್ತರು ಹಾಗೂ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿಯಾದರು.

ವಿಜಯ್ ಅವರು ಕೊನೆಯದಾಗಿ 2025ರ ಸೆಪ್ಟೆಂಬರ್‌ನಲ್ಲಿ ಕರೂರಿಗೆ ಭೇಟಿ ನೀಡಿ, ವೆಲುಸಾಮಿಪುರಂನಲ್ಲಿ ಟಿವಿಕೆ ಪಕ್ಷದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಆದರೆ ಆ ಸಭೆ ಕಾಲ್ತುಳಿತ ದುರಂತದಲ್ಲಿ ಅಂತ್ಯಗೊಂಡಿತ್ತು.

ಆ ವೇಳೆ ಅಂದಿನ ಡಿಎಂಕೆ ಸರ್ಕಾರ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಘೋಷಿಸಿತ್ತು. ಇದರ ಜೊತೆಗೆ ವಿಜಯ್ ಅವರು ಕೂಡ ಮೃತರ ಕುಟುಂಬಗಳಿಗೆ ತಲಾ 20 ಲಕ್ಷ ನೆರವು ನೀಡಿದ್ದರು. ಬಳಿಕ 2025ರ ಅಕ್ಟೋಬರ್‌ನಲ್ಲಿ, ಚೆನ್ನೈ ಸಮೀಪದ ಹೋಟೆಲ್‌ನಲ್ಲಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಅವರು ಭೇಟಿ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com