

ಚೆನ್ನೈ: ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ತಮಿಳು ನಾಡು ವಿಧಾನಸಭೆ ಚುನಾವಣೆಗೆ ಸ್ಥಾನ ಹಂಚಿಕೆ ಮಾತುಕತೆಯಲ್ಲಿ ಉಂಟಾದ ಸ್ಥಗಿತದ ನಡುವೆ, ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹಾಗೂ ತಮಿಳುನಾಡು ಕಾಂಗ್ರೆಸ್ ಸಮಿತಿ (TNCC) ಅಧ್ಯಕ್ಷ ಕೆ. ಸೆಲ್ವಪೆರುಂಥಗೈ ಅವರು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಅಡೆತಡೆ ನಿವಾರಿಸಲು ಪ್ರಯತ್ನಿಸಿದರು. ಡಿಎಂಕೆ ಸಂಸದ ಕನ್ಹಿಮೋಳಿ ಕರುಣಾನಿಧಿ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.
ಮೂಲಗಳ ಪ್ರಕಾರ, ಕಾಂಗ್ರೆಸ್ ಬೇಡಿಕೆಯಾದ 34 ವಿಧಾನಸಭಾ ಸ್ಥಾನಗಳನ್ನು ಒಪ್ಪಲು ಡಿಎಂಕೆ ನಾಯಕತ್ವ ಸಮ್ಮತಿಸದಿದ್ದರೂ, 29 ಸ್ಥಾನಗಳವರೆಗೆ ಹಾಗೂ ಹೆಚ್ಚುವರಿಯಾಗಿ ಎರಡು ರಾಜ್ಯಸಭಾ ಸ್ಥಾನಗಳನ್ನು ನೀಡಲು ಮುಂದಾಗಿದೆ. ಡಿಎಂಕೆಯ ಸ್ಥಾನ ಹಂಚಿಕೆ ಸಮಿತಿ ಇಂದು ಎರಡನೇ ಸುತ್ತಿನ ಮಾತುಕತೆಗೆ ಕಾಂಗ್ರೆಸ್ ನ್ನು ಆಹ್ವಾನಿಸಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
ಮುಂದಿನ ದ್ವೈವಾರ್ಷಿಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಂದು ರಾಜ್ಯಸಭಾ ಸ್ಥಾನ ಸಿಗಲಿದೆ; ಇನ್ನೊಂದು 2028ರಲ್ಲಿ ನೀಡಲಾಗುತ್ತದೆ ಎಂದು ಮೂಲವೊಂದು ತಿಳಿಸಿದೆ. ರಾಜ್ಯಸಭಾ ಸ್ಥಾನವನ್ನು ತಮಿಳುನಾಡಿನ ಕಾಂಗ್ರೆಸ್ ನಾಯಕರಿಗೇ ನೀಡಬೇಕು ಎಂಬುದು ಡಿಎಂಕೆಯ ಅಭಿಪ್ರಾಯವೆಂದು ತಿಳಿದುಬಂದಿದೆ.
ಆದರೆ, ಟಿಎನ್ ಸಿಸಿ ಅಧ್ಯಕ್ಷ ಸೆಲ್ವಪೆರುಂತಗೈ ಈ ಭೇಟಿಯನ್ನು ಸೌಜನ್ಯ ಭೇಟಿ ಎಂದು ಬಣ್ಣಿಸಿದ್ದಾರೆ. ಇದು ಸೌಜನ್ಯ ಭೇಟಿ. ಮೈತ್ರಿ ದೃಢವಾಗಿದೆ; ಸ್ಥಾನ ಹಂಚಿಕೆ ಮಾತುಕತೆ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎಂದು ಅವರು ಹೇಳಿದರು. ಡಿಎಂಕೆಯಿಂದ ಯಾವುದೇ ಗಡುವು ನಿಗದಿಯಾಗಿಲ್ಲವೆಂದೂ ಹೇಳಿದರು.
ಎಐಸಿಸಿ ತಮಿಳುನಾಡು ಪ್ರಭಾರಿಯಾದ ಗಿರೀಶ್ ಚೋಡಂಕರ್ ನೇತೃತ್ವದ ಮಾತುಕತೆ ಫಲಿತಾಂಶ ನೀಡದ ಹಿನ್ನೆಲೆಯಲ್ಲಿ, ಹಿರಿಯ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ ಸಿ ವೇಣುಗೋಪಾಲ್ ಅವರ ಸಭೆಯಲ್ಲಿ ಚಿದಂಬರಂ ಅವರನ್ನು ನಿಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಅವರನ್ನು ಭೇಟಿಯಾಗುವ ಮೊದಲು ಚಿದಂಬರಂ ದೆಹಲಿ ನಾಯಕತ್ವದೊಂದಿಗೆ ವರ್ಚುವಲ್ ಸಮಾಲೋಚನೆ ನಡೆಸಿದ್ದರೆಂದು ತಿಳಿದುಬಂದಿದೆ.
ಭಾನುವಾರ ಕಾಂಗ್ರೆಸ್ ಸ್ಥಾನ ಹಂಚಿಕೆ ಸಮಿತಿ ಸದಸ್ಯರು ಹೈಕಮಾಂಡ್‌ಗೆ ಡಿಎಂಕೆ ಗರಿಷ್ಠ 25 ಸ್ಥಾನಗಳು ಹಾಗೂ ಒಂದು ರಾಜ್ಯಸಭಾ ಸ್ಥಾನ ಮಾತ್ರ ನೀಡಲು ಸಿದ್ಧವಿದ್ದು, ಮುಖ್ಯಮಂತ್ರಿಯವರೊಂದಿಗೆ ಚರ್ಚೆಯ ನಂತರ ಅದನ್ನು 28 ಸ್ಥಾನಗಳವರೆಗೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಭಾನುವಾರ ರಾತ್ರಿ ತಮಿಳುನಾಡು ಶಾಸಕರೊಂದಿಗೆ ಸಮಾಲೋಚನೆ ನಡೆಸಿ, ಡಿಎಂಕೆಯೊಂದಿಗೆ ಮೈತ್ರಿಯನ್ನು ಮುಂದುವರಿಸುವ ಪರವಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದರ ನಡುವೆ, ಪುಡುಕ್ಕೋಟೈಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಡಿಎಂಕೆ ನಾಯಕ ಹಾಗೂ ಪ್ರಕೃತಿ ಸಂಪನ್ಮೂಲಗಳ ಸಚಿವ ಎಸ್ ರಘುಪತಿ, ಡಿಎಂಕೆ ನೇತೃತ್ವದ ಮೈತ್ರಿಯ ಮೂಲಕವೇ ಕಾಂಗ್ರೆಸ್ ವಿಧಾನಸಭೆಗೆ ಪ್ರವೇಶಿಸಬಹುದು. ಇದು ಕಾಂಗ್ರೆಸ್‌ಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದರು.
Advertisement