

ಚೆನ್ನೈ: ಎಐಎಡಿಎಂಕೆ ಮತ್ತು ಡಿಎಂಕೆ ಸೇರಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರೆ, ಟಿವಿಕೆ ಪಕ್ಷದ 107 ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹಗಳ ನಡುವೆ, ಟಿವಿಕೆ ಮುಖಂಡರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸ್ಪಷ್ಟನೆ ನೀಡಿದ್ದಾರೆ.
ಟಿಎನ್‌ಐಇ ಜೊತೆ ಮಾತನಾಡಿದ ಟಿವಿಕೆ ಹಿರಿಯ ನಾಯಕರೊಬ್ಬರು, ಪಕ್ಷವು ಪ್ರಸ್ತುತ ಸರ್ಕಾರ ರಚಿಸಲು ಹಕ್ಕು ಮಂಡಿಸುವ ಸಾಧ್ಯತೆಗಳ ಬಗ್ಗೆ ಯೋಚಿಸುತ್ತಿದೆ ಎಂದು ಹೇಳಿದರು.
"ನಾವು ಇದೀಗ ಎರಡು ವಿಷಯಗಳನ್ನು ಮಾತ್ರ ಅನ್ವೇಷಿಸುತ್ತಿದ್ದೇವೆ. ವಿಸಿಕೆ, ಸಿಪಿಐ ಮತ್ತು ಸಿಪಿಎಂನ ಬೆಂಬಲವನ್ನು ನಾವು ಕೋರಿದ್ದೇವೆ, ಅವರ ಒಟ್ಟು ಆರು ಸ್ಥಾನಗಳ ಬಲವು 118ರ ಬಹುಮತವನ್ನು ತಲುಪಲು ನಮಗೆ ಸಾಕಾಗುತ್ತದೆ. ಇದರ ಜತೆಗೆ ಪ್ರಮಾಣವಚನ ಸ್ವೀಕರಿಸುವುದಕ್ಕೆ ಮತ್ತು ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಲು ಅವಕಾಶ ನೀಡುವಂತೆ ರಾಜ್ಯಪಾಲರಿಗೆ ನಿರ್ದೇಶನ ಕೋರಿ ಕೋರ್ಟ್ ಮೆಟ್ಟಿಲೇರುವ ಬಗ್ಗೆಯೂ ಚರ್ಚಿಸುತ್ತಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಸಾಮೂಹಿಕ ರಾಜೀನಾಮೆಗಳ ಕುರಿತ ಊಹಾಪೋಹಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ನಾಯಕ, "ಇದು ಆಧಾರರಹಿತ. ಜನರು ಜನಾದೇಶ ನೀಡಿದಾಗ, ನಾವು 108 ಸ್ಥಾನಗಳಿಗೆ ರಾಜೀನಾಮೆ ನೀಡಿ ಮತ್ತೆ ಅದೇ ಕ್ಷೇತ್ರಗಳಲ್ಲಿ ಏಕೆ ಸ್ಪರ್ಧಿಸಬೇಕು" ಎಂದು ಪ್ರಶ್ನಿಸಿದರು.
ಟಿವಿಕೆ ಪಕ್ಷವು 107 ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್ ತನ್ನ ಐದು ಶಾಸಕರೊಂದಿಗೆ ಬೆಂಬಲವನ್ನು ಘೋಷಿಸಿದೆ. ಇದರೊಂದಿಗೆ ಒಟ್ಟು ಸಂಖ್ಯೆ 112 ಕ್ಕೆ ತಲುಪಿದೆ. ಟಿವಿಕೆ ಬೆಂಬಲ ಕೋರಿರುವ ಎಡಪಕ್ಷಗಳು ಮತ್ತು ವಿಸಿಕೆ ಉನ್ನತ ಮಟ್ಟದ ಸಭೆ ನಡೆಸುತ್ತಿದ್ದು, ಸಭೆ ಮುಗಿದ ನಂತರ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.
Advertisement