

ತಿರುವಣ್ಣಾಮಲೈ: ದೇವಾಲಯಗಳಿಗೆ ಭಕ್ತರಿಂದ ಆಗಾಗ್ಗೆ ಅನಿರೀಕ್ಷಿತವಾಗಿ ಭಾರೀ ಪ್ರಮಾಣದಲ್ಲಿ ಕಾಣಿಕೆ ಹರಿದು ಬರುತ್ತದೆ. ಅದರಂತೆ ಇದೀಗ ಚೆನ್ನೈನಿಂದ ಸುಮಾರು 190 ಕಿ.ಮೀ ದೂರದಲ್ಲಿರುವ ತಿರುವಣ್ಣಾಮಲೈನ ಶ್ರೀ ಅರುಣಾಚಲೇಶ್ವರ ದೇವಾಲಯಕ್ಕೆ ಬರೋಬ್ಬರಿ 5.06 ಕೋಟಿ ರೂಪಾಯಿ ನಗದು, 160 ಗ್ರಾಂ ಚಿನ್ನ ಮತ್ತು 1,540 ಗ್ರಾಂ ಬೆಳ್ಳಿ ಕಾಣಿಕೆಯಾಗಿ ಬಂದಿದೆ.
ತಮಿಳು ತಿಂಗಳಾದ 'ಐಪ್ಪಸಿ'ಯ ಸಂದರ್ಭದಲ್ಲಿ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಇತ್ತೀಚೆಗೆ ದೇವಾಲಯದ ಹುಂಡಿಯನ್ನು ತೆರೆದು, ಅದರಲ್ಲಿರುವ ಹಣ ಮತ್ತು ಕಾಣಿಕೆಗಳನ್ನು ಎಣಿಕೆ ಮಾಡಿದೆ.
ಹಿರಿಯ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಈ ವೇಳೆ ನಗದು ನೋಟುಗಳನ್ನು ಎಣಿಕೆ ಮಾಡಲಾಗಿದ್ದು, ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ.
ಮೂಲಗಳ ಪ್ರಕಾರ, ಅರುಲ್ಮಿಗು ದಂಡಾಯುಧಪಾಣಿ ಸ್ವಾಮಿ ದೇವಾಲಯಕ್ಕೆ 2.26 ಕೋಟಿ ರೂಪಾಯಿ ನಗದು, 286 ಗ್ರಾಂ ಚಿನ್ನ, 10.752 ಕೆಜಿ ಬೆಳ್ಳಿ ಮತ್ತು 393 ವಿದೇಶಿ ಕರೆನ್ಸಿ ನೋಟುಗಳು ಕಾಣಿಕೆಯಾಗಿ ಬಂದಿವೆ. ಹಾಗೆಯೇ, ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಾಲಯಕ್ಕೆ ಇತ್ತೀಚೆಗೆ ನಡೆಸಿದ ಮಾಸಿಕ ಹುಂಡಿ ಎಣಿಕೆಯ ವೇಳೆ 1.21 ಕೋಟಿ ರೂಪಾಯಿ ನಗದು, 14 ಗ್ರಾಂ ಚಿನ್ನ, 1.405 ಕೆಜಿ ಬೆಳ್ಳಿ ಮತ್ತು 191 ವಿದೇಶಿ ಕರೆನ್ಸಿ ನೋಟುಗಳು ಕಾಣಿಕೆಯಾಗಿ ಬಂದಿವೆ.