

ನವದೆಹಲಿ: ದೇಶದ ಐಐಟಿಗಳಲ್ಲಿ ಪ್ರವೇಶ ಪಡೆಯಲು ಬಯಸುತ್ತಿರುವ ವಿದ್ಯಾರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮತ್ತೊಂದು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಬರೆಯಲು ಮೂರು ಪ್ರಯತ್ನಗಳಿಗೆ ಅವಕಾಶ ಕಲ್ಪಿಸುವಂತೆ ಸರ್ಕಾರವನ್ನು ಆಗ್ರಹಿಸಿ ಒಟ್ಟು 13,349 ಅಭ್ಯರ್ಥಿಗಳು ಅರ್ಜಿಗೆ ಸಹಿ ಹಾಕಿದ್ದಾರೆ. ಇದೇ ರೀತಿಯ ಪ್ರಸ್ತಾವನೆಗೆ ಎರಡು ವರ್ಷಗಳ ಹಿಂದೆ ಅನುಮೋದನೆ ದೊರೆತಿದ್ದರೂ, ಕೇವಲ ಹದಿನೈದು ದಿನಗಳೊಳಗೆ ಅದನ್ನು ಹಿಂಪಡೆಯಲಾಗಿತ್ತು.
ಜೆಇಇ ಮುಖ್ಯ ಪರೀಕ್ಷೆಯ ಮೂಲಕ ಎನ್ಐಟಿ ಹಾಗೂ ಇತರ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಬಿಇ, ಬಿ.ಟೆಕ್, ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್ ಕೋರ್ಸ್ಗಳ ಪ್ರವೇಶ ನಿರ್ಧಾರವಾಗುತ್ತದೆ. ಈ ಪರೀಕ್ಷೆಯಲ್ಲಿ ಅಗ್ರ 2.5 ಲಕ್ಷ ಸ್ಥಾನ ಪಡೆಯುವ ಅಭ್ಯರ್ಥಿಗಳಿಗೆ ಐಐಟಿಗಳ ಪ್ರವೇಶದ್ವಾರವಾಗಿರುವ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ.
ಪ್ರಸ್ತುತ, 12ನೇ ತರಗತಿ ಉತ್ತೀರ್ಣರಾದ ಬಳಿಕ ವಿದ್ಯಾರ್ಥಿಗಳು ಸತತ ಮೂರು ವರ್ಷಗಳ ಕಾಲ ಜೆಇಇ ಮುಖ್ಯ ಪರೀಕ್ಷೆ ಬರೆಯಬಹುದು. ಆದರೆ, ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಎರಡು ವರ್ಷಗಳಲ್ಲಿ ಎರಡು ಬಾರಿ ಮಾತ್ರ ಅವಕಾಶವಿದೆ.
ಜೆಇಇ ಅಡ್ವಾನ್ಸ್ಡ್ನ ಮೂರನೇ ಪ್ರಯತ್ನಕ್ಕೆ ಅವಕಾಶ ನೀಡಬೇಕೆಂಬ ಅಭಿಯಾನದ ಮುಂಚೂಣಿಯಲ್ಲಿರುವ ವಿದ್ಯಾರ್ಥಿ ರಾಜ್ ಆರ್ಯನ್, ಪ್ರಸ್ತುತ ನೀತಿಯನ್ನು ಮರುಪರಿಶೀಲಿಸುವಂತೆ ಶಿಕ್ಷಣ ಸಚಿವಾಲಯ, ಐಐಟಿ ಕೌನ್ಸಿಲ್ ಮತ್ತು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಆಯೋಜಿಸುವ ಆಡಳಿತ ಮಂಡಳಿಯಾದ ಜಂಟಿ ಪ್ರವೇಶ ಮಂಡಳಿ (JAB)ಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ನೀತಿ ಬದಲಾವಣೆಗೆ ಒತ್ತಾಯಿಸಿ ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಶಿಕ್ಷಣ ಸಚಿವಾಲಯದ ಅಧಿಕಾರಿಗಳನ್ನು ಎರಡು ಬಾರಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದೇವೆ. ಈ ವಿಚಾರವಾಗಿ ಐಐಟಿ ದೆಹಲಿ ಅಧಿಕಾರಿಗಳನ್ನೂ ಭೇಟಿ ಮಾಡಿದ್ದೇವೆ. ಆಗ ಸುಮಾರು 10,000 ವಿದ್ಯಾರ್ಥಿಗಳು ಮನವಿಗೆ ಸಹಿ ಹಾಕಿದ್ದರು ಎಂದು ಆರ್ಯನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಪತ್ರಿಕೆ ಪ್ರತಿನಿಧಿಗೆ ತಿಳಿಸಿದ್ದಾರೆ.
ಮೇ 17ರಂದು ಎರಡು ಅವಧಿಗಳಲ್ಲಿ ನಡೆದ ಜೆಇಇ ಅಡ್ವಾನ್ಲ್ಡ್ ಪರೀಕ್ಷೆಗೆ ಒಟ್ಟು 1,79,694 ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪೈಕಿ 56,880 ಅಭ್ಯರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.
ಸಾವಿರಾರು ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಜೆಇಇ ಅಡ್ವಾನ್ಸ್ಡ್ ಕೇವಲ ಪರೀಕ್ಷೆಯಲ್ಲ. ಅದು ಅವರ ಭವಿಷ್ಯವನ್ನು ರೂಪಿಸಬಲ್ಲ ಅವಕಾಶವಾಗಿದೆ. ಆದರೆ, ಪ್ರಸ್ತುತ ಅರ್ಹತಾ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಸತತ ಎರಡು ವರ್ಷಗಳಲ್ಲಿ ಕೇವಲ ಎರಡು ಪ್ರಯತ್ನಗಳಿಗೆ ಮಾತ್ರ ಅವಕಾಶವಿದೆ. ಈ ನಿರ್ಬಂಧವನ್ನು ಗಂಭೀರವಾಗಿ ಮರುಪರಿಶೀಲಿಸಬೇಕು ಎಂಬ ಅಭಿಪ್ರಾಯದೊಂದಿಗೆ ವಿದ್ಯಾರ್ಥಿಗಳ ಚಳವಳಿ ಬೆಳೆಯುತ್ತಿದೆ ಎಂದು ಜಾರ್ಖಂಡ್ ಮೂಲದ ಆರ್ಯನ್ ಹೇಳಿದ್ದಾರೆ.
ಈ ಮನವಿಯಲ್ಲಿ ಎರಡು ಆಯ್ಕೆಗಳಲ್ಲಿ ಒಂದನ್ನು ಒಪ್ಪಿಕೊಳ್ಳುವಂತೆ ಕೋರಲಾಗಿದೆ. ಸತತ ಮೂರು ವರ್ಷಗಳಲ್ಲಿ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಅಥವಾ ಮೂರು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ.
ಇದು ಅರ್ಹತೆಯ ಮಾನದಂಡಗಳನ್ನು ದುರ್ಬಲಗೊಳಿಸುವ ಅಥವಾ ಶೈಕ್ಷಣಿಕ ಗುಣಮಟ್ಟವನ್ನು ತಗ್ಗಿಸುವ ಬೇಡಿಕೆಯಲ್ಲ. ಬದಲಾಗಿ, ಎಲ್ಲರಿಗೂ ನ್ಯಾಯಯುತವಾಗಿ ಅವಕಾಶ ಕಲ್ಪಿಸಬೇಕೆಂಬ ಮನವಿಯಾಗಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.
ಈ ಅಭಿಯಾನದ ಉದ್ದೇಶವನ್ನು ವಿವರಿಸಿರುವ ಮನವಿ ಪತ್ರದಲ್ಲಿ, ದೇಶಾದ್ಯಂತ ಅಭ್ಯರ್ಥಿಗಳ ಹಿನ್ನೆಲೆ ಮತ್ತು ಪರಿಸ್ಥಿತಿಗಳು ವಿಭಿನ್ನವಾಗಿವೆ ಎಂದು ಹೇಳಲಾಗಿದೆ.
ಬಡ ಕುಟುಂಬದ ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶಗಳು ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ, ಅನುಭವಿ ಮಾರ್ಗದರ್ಶಕರು, ವಿಶ್ವಾಸಾರ್ಹ ಅಧ್ಯಯನ ಸಾಮಗ್ರಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಆರಂಭಿಕ ಹಂತದಲ್ಲೇ ಅರಿವು ದೊರೆಯದಿರಬಹುದು. ಮತ್ತೊಂದೆಡೆ, ಕೆಲವು ವಿದ್ಯಾರ್ಥಿಗಳಿಗೆ ಹಲವು ವರ್ಷಗಳಿಂದ ಸೂಕ್ತ ಮಾರ್ಗದರ್ಶನ ಲಭ್ಯವಿರುತ್ತದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ಕೊರತೆ
ಅಭ್ಯರ್ಥಿಗಳ ಪರಿಸ್ಥಿತಿಗಳು ಭಿನ್ನವಾಗಿರುವುದರಿಂದ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ಬಡ ಕುಟುಂಬಗಳು, ಗ್ರಾಮೀಣ ಪ್ರದೇಶಗಳು ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ, ಅನುಭವಿ ಮಾರ್ಗದರ್ಶಕರು ಹಾಗೂ ವಿಶ್ವಾಸಾರ್ಹ ಅಧ್ಯಯನ ಸಾಮಗ್ರಿಗಳು ದೊರೆಯದಿರಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
2024ರಲ್ಲಿ ಮೂರು ಪ್ರಯತ್ನಗಳಿಗೆ ಅವಕಾಶ ಘೋಷಿಸಿ ಬಳಿಕ ಹಿಂಪಡೆದಿದ್ದ ಜಂಟಿ ಪ್ರವೇಶ ಮಂಡಳಿ
2024ರ ನವೆಂಬರ್ 5ರಂದು ಜೆಇಇ ಅಡ್ವಾನ್ಸ್ಡ್ 2025 ಪರೀಕ್ಷೆಗೆ ಸತತ ಮೂರು ವರ್ಷಗಳಲ್ಲಿ ಮೂರು ಬಾರಿ ಹಾಜರಾಗಲು ಅವಕಾಶ ನೀಡುವುದಾಗಿ ಜಂಟಿ ಪ್ರವೇಶ ಮಂಡಳಿ (JAB) ಘೋಷಿಸಿತ್ತು. ಆದರೆ, ನವೆಂಬರ್ 18ರಂದು ಈ ನಿರ್ಧಾರವನ್ನು ಹಿಂಪಡೆದು, ಹಿಂದಿನಂತೆ ಎರಡು ಪ್ರಯತ್ನಗಳ ನೀತಿಯನ್ನೇ ಮತ್ತೆ ಜಾರಿಗೆ ತಂದಿತ್ತು.