

ಲಕ್ನೋ: ರಾಮ ಮಂದಿರ ಚಳುವಳಿಯ ಭಾಗವಾಗಿ ಅಯೋಧ್ಯೆಗೆ ತೆರಳಿದ್ದ ಕರ ಸೇವಕರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದು ಯಾರು ಎಂಬುದು ಶ್ರೀರಾಮನಿಗೆ ಗೊತ್ತು ಎಂದು ಬಿಜೆಪಿ ನಾಯಕಿ ನವನೀತ್ ರವಿ ರಾಣಾ ಕಿಡಿ ಕಾರಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಅಯೋಧ್ಯೆ ಭೇಟಿಯ ಪ್ರಸ್ತಾಪವನ್ನು ಟೀಕಿಸಿದ ಅವರು ರಾಮ ಮಂದಿರ ಚಳುವಳಿಯ ಭಾಗವಾಗಿ ಅಯೋಧ್ಯೆಗೆ ತೆರಳಿದ್ದ ಕರ ಸೇವಕರ ಮೇಲೆ ಗುಂಡು ಹಾರಿಸಲು ಮುಲಾಯಂ ಸಿಂಗ್ ಯಾದವ್ ಪೊಲೀಸರಿಗೆ ನಿರ್ದೇಶನ ನೀಡಿದ್ದರು, ಶ್ರೀರಾಮನ ಮೇಲಿನ ಭಕ್ತಿಯನ್ನು ಪ್ರದರ್ಶಿಸುವಾಗ ಅಖಿಲೇಶ್ ಯಾದವ್ ಈ ಘಟನೆಗಳನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.
ನಮ್ಮ ಕರಸೇವಕರ ಮೇಲೆ ಗುಂಡು ಹಾರಿಸಲು ಮುಲಾಯಂ ಸಿಂಗ್ ಯಾದವ್ ಆದೇಶ ನೀಡಿದ್ದರು ಎಂಬುದು ಸತ್ಯ. ರಾಮ ಮಂದಿರವನ್ನು ರಕ್ಷಿಸಲು ಈ ಕರ ಸೇವಕರು ಹೊರಟಿದ್ದಾಗ, ಅವರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದು ಇದೇ ನೇತಾಜಿ ಎಂಬುದನ್ನು ಅಖಿಲೇಶ್ ಯಾದವ್ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ರಾಣಾ ಹೇಳಿದರು.
ಅಖಿಲೇಶ್ ಯಾದವ್ ಅವರೇ, ಇಂದು ನೀವು ಶ್ರೀರಾಮನ ಮೇಲೆ ಎಷ್ಟೇ ಭಕ್ತಿಯನ್ನು ಪ್ರದರ್ಶಿಸಿದರೂ, ತಮ್ಮ ಸೇವಕರು ಮತ್ತು ಭಕ್ತರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದು ಯಾರು ಎಂಬುದು ಶ್ರೀರಾಮನಿಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದರು.
ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಯ ಬಗ್ಗೆ ರಾಜಕೀಯ ಭವಿಷ್ಯ ನುಡಿದ ರಾಣಾ, ಯೋಗಿ ಆದಿತ್ಯನಾಥ್ ಅವರು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರುತ್ತಾರೆ ಎಂದು ಹೇಳಿದರು. ಮುಂಬರುವ ಯುಪಿ ಚುನಾವಣೆಯಲ್ಲಿ ನೀವು (ಅಖಿಲೇಶ್ ಯಾದವ್) ಖಂಡಿತವಾಗಿಯೂ ಗೆಲ್ಲುವುದಿಲ್ಲ, ಬದಲಾಗಿ ಯೋಗಿ ಆದಿತ್ಯನಾಥ್ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ಅವರು ನುಡಿದರು.
ಅಖಿಲೇಶ್ ಯಾದವ್ ಅವರ ಅಯೋಧ್ಯೆ ಭೇಟಿಯ ಪ್ರಸ್ತಾಪದ ಸುತ್ತ ರಾಜಕೀಯ ಚರ್ಚೆಗಳು ನಡೆಯುತ್ತಿರುವಾಗಲೇ ರಾಣಾ ಈ ಹೇಳಿಕೆ ನೀಡಿದ್ದಾರೆ. ರಾಮ ಮಂದಿರ ಚಳುವಳಿಯ ಸಂದರ್ಭದಲ್ಲಿ ಸಮಾಜವಾದಿ ಪಕ್ಷವು ತೆಗೆದುಕೊಂಡಿದ್ದ ನಿಲುವಿನೊಂದಿಗೆ ಅವರು ಈ ಭೇಟಿಯನ್ನು ಜೋಡಿಸಿದ್ದಾರೆ.
ಇದಕ್ಕೂ ಮುನ್ನ ಭಾನುವಾರದಂದು, ಡಿಸೆಂಬರ್‌ನಲ್ಲಿ ಅಯೋಧ್ಯೆಗೆ ಭೇಟಿ ನೀಡಲು ಉದ್ದೇಶಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಟೀಕಿಸಿದ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಒಂದು ಕಾಲದಲ್ಲಿ 'ಸನಾತನ ಸಂಸ್ಕೃತಿ'ಯನ್ನು ವಿರೋಧಿಸಿದ್ದ ರಾಜಕೀಯ ನಾಯಕರು, ಈಗ ಚುನಾವಣಾ ಅಗತ್ಯಕ್ಕಾಗಿ ಶ್ರೀರಾಮನ ಮೊರೆ ಹೋಗುತ್ತಿದ್ದಾರೆ," ಎಂದು ಹೇಳಿದರು.