

ನವದೆಹಲಿ: ಇತ್ತೀಚೆಗೆ ಬಿಡುಗಡೆಯಾದಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಎಂಬ ಪುಸ್ತಕದಲ್ಲಿ ವೀರ ಸಾವರ್ಕರ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾಗಿದೆ ಎಂದು ವೀರ ಸಾವರ್ಕರ್ ಅವರ ಮೊಮ್ಮಗ (grandnephew) ಸಾತ್ಯಕಿ ಸಾವರ್ಕರ್ ಗುರುವಾರ ಆರೋಪಿಸಿದ್ದಾರೆ.
ಈ ಕುರಿತು ತಮ್ಮ ಕಾನೂನು ತಂಡ ಮತ್ತು ವಕೀಲರೊಂದಿಗೆ ಸಮಾಲೋಚನೆ ನಡೆಸುತ್ತಿದ್ದು, ಆ ಹೇಳಿಕೆಗೆ ಯಾವುದೇ ಆಧಾರವಿಲ್ಲದಿರುವುದು ಕಂಡುಬಂದರೆ ಸೋನಿಯಾ ಗಾಂಧಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಈ ಕುರಿತು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಾತ್ಯಕಿ ಸಾವರ್ಕರ್, "ವೀರ ಸಾವರ್ಕರ್ ಅವರ ಕುರಿತು ಭಾಷಣ ನೀಡಲು ಕರ್ನಾಟಕದಲ್ಲಿ ಪ್ರವಾಸದಲ್ಲಿದ್ದ ಕಾರಣ, ನಾನು ಈ ಪುಸ್ತಕವನ್ನು ಸಂಪೂರ್ಣವಾಗಿ ಓದಿಲ್ಲ. ವೀರ ಸಾವರ್ಕರ್ ಅವರ ಹೆಸರನ್ನು ಉಲ್ಲೇಖಿಸಿರುವ ಕೆಲವು ಪುಟಗಳನ್ನು ಓದಿದ್ದೇನೆ, ಅದರಲ್ಲಿ ಒಂದೆರಡು ವಾಕ್ಯಗಳಿವೆ. ಆದರೆ, ಅವುಗಳಿಗೆ ಯಾವುದೇ ಆಧಾರ ಅಥವಾ ಉಲ್ಲೇಖಗಳನ್ನು ನೀಡಲಾಗಿಲ್ಲ ಎಂದು ಅವರು ಹೇಳಿದರು.
ಸೋನಿಯಾ ಗಾಂಧಿ ಅವರ ಹೇಳಿಕೆಗಳಿಗೆ ಯಾವುದೇ ವಾಸ್ತವಿಕ ಆಧಾರವಿಲ್ಲದಿದ್ದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸುವುದಾಗಿ ಮತ್ತು ಇದಕ್ಕಾಗಿ ತಮ್ಮ ಕಾನೂನು ತಂಡ ಹಾಗೂ ವಕೀಲರೊಂದಿಗೆ ಚರ್ಚಿಸುತ್ತಿರುವುದಾಗಿ ಅವರು ತಿಳಿಸಿದರು. ಸದ್ಯ ಈ ಕುರಿತು ಕಾನೂನು ತಂಡ ಮತ್ತು ವಕೀಲರೊಂದಿಗೆ ಚರ್ಚಿಸುತ್ತಿದ್ದೇನೆ. ಚರ್ಚೆಯ ನಂತರ, ಆ ಹೇಳಿಕೆಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕಂಡುಬಂದರೆ, ಸೋನಿಯಾ ಗಾಂಧಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನನಗೆ ಅವಕಾಶವಿದೆ ಎಂದು ಅವರು ಹೇಳಿದರು.
ಈ ಹಂತದಲ್ಲಿ ತಾವು ಪುಸ್ತಕ ಬ್ಯಾನ್ ಒತ್ತಾಯಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಸತ್ಯಕಿ ಸಾವರ್ಕರ್, ಕಾನೂನು ಕ್ರಮದ ಬಗ್ಗೆ ನಿರ್ಧರಿಸುವ ಮೊದಲು ತಾವು ಆ ಹೇಳಿಕೆಗಳನ್ನು ಮತ್ತು ಅದರಲ್ಲಿ ನೀಡಲಾದ ಉಲ್ಲೇಖಗಳನ್ನು ಪರಿಶೀಲಿಸುವುದಾಗಿ ಹೇಳಿದರು.
ನಾನು ಪುಸ್ತಕವನ್ನು ಸಂಪೂರ್ಣವಾಗಿ ಓದಿಲ್ಲದಿರುವುದರಿಂದ, ಇದು ಪುಸ್ತಕದ ಮೇಲೆ ನಿಷೇಧ ಹೇರುವ ಬೇಡಿಕೆಗೆ ಸಂಬಂಧಿಸಿದ್ದಲ್ಲ. ನಾನು ಅದರಲ್ಲಿರುವ ಹೇಳಿಕೆಗಳು ಮತ್ತು ಉಲ್ಲೇಖಗಳನ್ನು ಪರಿಶೀಲಿಸುತ್ತೇನೆ. ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುತ್ತೇನೆಯೇ ಹೊರತು, ಸದ್ಯಕ್ಕೆ ಯಾವುದೇ ನಿಷೇಧಕ್ಕೆ ಒತ್ತಾಯಿಸುವುದಿಲ್ಲ ಎಂದು ಅವರು ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಸೇನಾ ನಾಯಕ ಆನಂದ್ ದುಬೆ, ಸೋನಿಯಾ ಗಾಂಧಿ ಅವರ ಪುಸ್ತಕದಲ್ಲಿ ಸಾವರ್ಕರ್ ವಿರುದ್ಧ ಹೇಳಿಕೆಗಳಿವೆ. ಇದನ್ನು ತಮ್ಮ ಪಕ್ಷವು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.