

ಲಕ್ನೋ: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನೇತೃತ್ವದಲ್ಲಿ ನಡೆದ ರೋಡ್‌ಶೋ ವೇಳೆ, ಬುಲ್ಡೋಜರ್ ಡಿಕ್ಕಿ ಹೊಡೆದ ಪರಿಣಾಮ 12 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ.
ಮೃತ ಬಾಲಕನನ್ನು ಚೌರಿ ಚೌರಾದ ರಾಜಧಾನಿ ಗ್ರಾಮದ ನಿವಾಸಿ ಆರ್ಯವರ್ಧನ್ ಸಿಂಗ್ ಎಂದು ಗುರುತಿಸಲಾಗಿದೆ. ಆತನ ತಂದೆ ಸ್ಥಳೀಯ ಬಿಜೆಪಿ ನಾಯಕರಾಗಿದ್ದಾರೆ. ಪಕ್ಷದ 'ಪಿಡಿಎ (PDA) ರಥಯಾತ್ರೆ'ಯ ವೇಳೆ ಕೂಡಾಘಾಟ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಈ ಘಟನೆಯು ರಾಜಕೀಯ ಕಾರ್ಯಕ್ರಮದಲ್ಲಿ ಮಾಡಲಾದ ವ್ಯವಸ್ಥೆಗಳು ಮತ್ತು ಜನಸಂದಣಿ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಾಲಕನ ತಂದೆ ಓಂಕಾರ್ ಸಿಂಗ್ ಅವರ ಪ್ರಕಾರ, ರ್ಯಾಲಿಯ ಮೇಲೆ ಬುಲ್ಡೋಜರ್ ಮೂಲಕ ಹೂವಿನ ದಳಗಳನ್ನು ಸುರಿಯಲಾಗುತ್ತಿತ್ತು. ಅಖಿಲೇಶ್ ಯಾದವ್ ಅವರ ಬೆಂಗಾವಲು ಪಡೆ ಮುಂದೆ ಸಾಗಿದ್ದಾಗ, ವೇಗವಾಗಿ ಬಂದ ಬುಲ್ಡೋಜರ್ ತನ್ನ ಮಗನಿಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು ಎಂದು ಅವರು ಆರೋಪಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಆರ್ಯವರ್ಧನ್ ರಸ್ತೆ ವಿಭಜಕಕ್ಕೆ ಅಪ್ಪಳಿಸಿದನು, ಇದರಿಂದ ಅವನ ತಲೆಯ ಹಿಂಭಾಗದಲ್ಲಿ ತೀವ್ರ ಗಾಯವಾಯಿತು. ನಂತರ ಅವನು ಮೃತಪಟ್ಟನ ಎಂದು ಹೇಳಿದ್ದಾರೆ.
ಈ ಘಟನೆಯು ರೋಡ್‌ಶೋ ವೇಳೆ ಸಾರ್ವಜನಿಕ ಸುರಕ್ಷತೆಗಾಗಿ ಮಾಡಲಾದ ವ್ಯವಸ್ಥೆಗಳ ಬಗ್ಗೆ, ವಿಶೇಷವಾಗಿ ಜನಸಂದಣಿಯ ನಡುವೆ ಭಾರಿ ವಾಹನಗಳ ಸಂಚಾರದ ಕುರಿತು ಪ್ರಶ್ನೆಗಳನ್ನು ಎತ್ತಿದೆ. ರ್ಯಾಲಿಯಲ್ಲಿ ಭಾಗವಹಿಸಿದ ವಾಹನಗಳ ಸಂಚಾರವನ್ನು ನಿಯಂತ್ರಿಸುವ ಜವಾಬ್ದಾರಿ ಯಾರದ್ದಾಗಿತ್ತು ಎಂದು ಪ್ರಶ್ನಿಸಿದ್ದಾರೆ.
ಈ ಘಟನೆಯ ನಂತರ, ಗೋರಖ್‌ಪುರ ಶಾಸಕ ಇಂಜಿನಿಯರ್ ಸರ್ವನ್ ನಿಶಾದ್ ಅವರು ಮೃತರ ಕುಟುಂಬವನ್ನು ಭೇಟಿಯಾಗಿ ಸಂತಾಪ ಸೂಚಿಸಿದರು. ಸಚಿವ ಡಾ. ಸಂಜಯ್ ನಿಶಾದ್ ಅವರು ಶಾಸಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಕುಟುಂಬಕ್ಕೆ ಅಗತ್ಯವಿರುವ ಎಲ್ಲ ರೀತಿಯ ನೆರವು ಸಿಗುವಂತೆ ನೋಡಿಕೊಳ್ಳಲು ಸೂಚಿಸಿದರು.
ಘಟನೆಯ ಬಗ್ಗೆ ಕೇಳಿದಾಗ, ತಮಗೆ ಬಾಲಕನ ಸಾವಿನ ಬಗ್ಗೆ ತಿಳಿದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದರು. ಆದಾಗ್ಯೂ, ರೋಡ್‌ಶೋಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ ಎಂದು ಅವರು ದೂಷಿಸಿದರು.
"ಈ ಘಟನೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅಲ್ಲದೆ, ಆಡಳಿತ ವರ್ಗ ಯಾವುದೇ ವ್ಯವಸ್ಥೆಗಳನ್ನು ಮಾಡಿರಲಿಲ್ಲ. ಜನರು ಬಿಜೆಪಿ ಸದಸ್ಯರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅವರು ಯಾರ ಮೇಲಾದರೂ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಾರೆ," ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥರು ಹೇಳಿದರು. ಪೊಲೀಸರು ಬುಲ್ಡೋಜರ್ ವಶಪಡಿಸಿಕೊಂಡಿದ್ದು, ಅದರ ಮಾಲೀಕರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.