

ನವದೆಹಲಿ: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ’ ವಿಮಾನದಲ್ಲಿ ಸಹ-ಪೈಲಟ್ ನಡೆಸಿದ ದಾಳಿಯ ಪ್ರಯತ್ನವನ್ನು ವಿಫಲಗೊಳಿಸುವ ಮೂಲಕ 180 ಜನರ ಪ್ರಾಣ ಉಳಿಸಿದ ಭಾರತದ ಧೈರ್ಯಶಾಲಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದಾರೆ.
ಕ್ಯಾಪ್ಟನ್ ಮಚ್ಚಾರ್ ವಿಮಾನದಲ್ಲಿ ತಮಗಾದ ಅನುಭವದ ವಿವರಗಳನ್ನು ಪ್ರಧಾನಿ ಮೋದಿ ಜೊತೆ ಹಂಚಿಕೊಂಡರು.
ಆ ಘಟನೆಯ ಸಮಯದಲ್ಲಿ ತಮಗೆ ಧೈರ್ಯ ನೀಡಿದ ಅಂಶಗಳ ಬಗ್ಗೆಯೂ ಮಾತನಾಡಿದರು. ಪ್ರಧಾನ ಮಂತ್ರಿಯವರು ಅವರ ಧೈರ್ಯವನ್ನು ಶ್ಲಾಘಿಸಿದರು. ಪೈಲಟ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.
ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಯುಎಇಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಯುಎಇಯಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ತಿಳಿಸಿದ್ದಾರೆ.
ಗುರುವಾರವಷ್ಟೇ ಪ್ರಧಾನಿಯವರು ಮಚ್ಚಾರ್ ಅವರನ್ನು "ಹೀರೋ" (ನಾಯಕ) ಎಂದು ಬಣ್ಣಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದರೂ ಮತ್ತು ಗಂಭೀರ ಅಪಾಯವನ್ನು ಎದುರಿಸುತ್ತಿದ್ದರೂ, ಇತರರ ಪ್ರಾಣ ರಕ್ಷಿಸಲು ಪೈಲಟ್ ಅಪಾರ ಧೈರ್ಯ ಮತ್ತು ದೃಢಸಂಕಲ್ಪವನ್ನು ತೋರಿದ್ದರು ಎಂದು ಅವರು ಹೇಳಿದರು.
ಅವರ ಶೌರ್ಯವು ನೂರಾರು ಜೀವಗಳನ್ನು ಉಳಿಸಲು ಮತ್ತು ದೊಡ್ಡ ದುರಂತವನ್ನು ತಪ್ಪಿಸಲು ಸಹಾಯ ಮಾಡಿತು," ಎಂದು ಕೇಂದ್ರ ಲೋಕಸೇವಾ ಆಯೋಗ ಶತಮಾನೋತ್ಸವ ಸಮಾರಂಭದಲ್ಲಿ ಮೋದಿ ಹೇಳಿದ್ದರು.
"ಇಸ್ರೇಲ್ ಪ್ರಧಾನಿ (ಬೆಂಜಮಿನ್ ನೆತನ್ಯಾಹು) ಇಂದು ಹೇಳಿದಂತೆ, ಇವರು 9/11 ರಂತಹ ದಾಳಿಯನ್ನು ತಡೆಗಟ್ಟಿದ್ದಾರೆ. ಪ್ರತಿಯೊಬ್ಬ ಭಾರತೀಯನಿಗೂ ಸ್ಮಿತ್ ಅವರ ಧೈರ್ಯವು ಹೆಮ್ಮೆಯನ್ನು ತರುತ್ತದೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಅವರ ಮುಂದೆ ತಮ್ಮ ಸಂಕಷ್ಟದ ಅನುಭವವನ್ನು ವಿವರಿಸುವಾಗ ಫ್ಲೈದುಬೈ (Flydubai) ವಿಮಾನದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಭಾವುಕರಾದರು. ಅವರು, "ನೀವೇ ನನ್ನ ಅತಿದೊಡ್ಡ ಆದರ್ಶ. ಇಂದು ನೀವು ನನ್ನನ್ನು ಹುರಿದುಂಬಿಸುತ್ತಿರುವ ರೀತಿ ನನಗೆ ಹೆಮ್ಮೆ ತರುತ್ತಿದೆ. ನನಗೆ ಅನೇಕ ಗಾಯಗಳಾಗಿದ್ದರೂ, ನಾನು ಎದ್ದು ಕಾರ್ಯಪ್ರವೃತ್ತನಾಗಲೇಬೇಕೆಂದು ನನಗೆ ನಾನೇ ಹೇಳಿಕೊಂಡೆ. ಆ ಸಂದರ್ಭದಲ್ಲಿ, ಕಾಕ್‌ಪಿಟ್‌ನ ಬಾಗಿಲನ್ನು ತೆರೆಯಲು ನಾನು ನನ್ನನ್ನು ದೃಢಚಿತ್ತದಿಂದ ಪ್ರೇರೇಪಿಸಿಕೊಂಡೆ," ಎಂದು ಹೇಳಿದರು.
ಸಂಕಷ್ಟದ ಕಾಲದಲ್ಲಿ ನಾನು ಹನುಮಾನ್ ಚಾಲೀಸಾ ಪಠಿಸಿದೆ. ಭಗವಾನ್ ಹನುಮಂತ ನನಗೆ ಧೈರ್ಯ ನೀಡಿದನು ಎಂದು ಹೇಳಿಕೊಂಡಿದ್ದಾರೆ.
ಇಂಥ ಕಠಿಣ ಪರಿಸ್ಥಿತಿಯಲ್ಲಿ ನಾನು ಧೈರ್ಯ ಪ್ರದರ್ಶಿಸದಿದ್ದರೆ 180 ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಹೀಗಾಗಿ, ನಾನು ಗಂಭೀರವಾಗಿ ಗಾಯಗೊಂಡರೂ, ಪ್ರಯಾಣಿಕರ ಜೀವಕ್ಕೆ ಆಪತ್ತು ಎದುರಾಗಬಾರದು ಅಂತ ಧೈರ್ಯದಿಂದ ಹೋರಾಡಿದೆ ಎಂದು ಪೈಲಟ್ ತಿಳಿಸಿದರು.
ನಿಮ್ಮ ದೇಹದಲ್ಲಿ ಗಂಭೀರ ಗಾಯವಾಗಿತ್ತು. ನೀವು ಸ್ವತಃ ಜೀವನ್ಮರಣದ ಹೋರಾಟದಲ್ಲಿದ್ದಿರಿ. ಆ ಸಮಯದಲ್ಲಿ ನೀವು ನಿಮ್ಮ ಪ್ರಾಣದ ಬಗ್ಗೆ ಚಿಂತಿಸದೆ, ಎಲ್ಲಾ ಪ್ರಯಾಣಿಕರ ಜೀವಗಳ ಬಗ್ಗೆ ಕಾಳಜಿ ವಹಿಸಿದಿರಿ ಎಂದು ಆಸ್ಪತ್ರೆಯ ಹಾಸಿಗೆಯಿಂದಲೇ ಮಾತನಾಡಿದ ಕ್ಯಾಪ್ಟನ್ ಮಚ್ಚಾರ್ ಸಾಹಸವನ್ನು ಮೋದಿ ಕೊಂಡಾಡಿದರು.