ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ; ಬೆಳ್ಳಂಬೆಳಗ್ಗೆ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ; Video

2001ರ ಅಕ್ಟೋಬರ್ 7ರಿಂದ ಮೋದಿ ಅವರು ನಿರಂತರವಾಗಿ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿಗೆ ಮೂರು ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ನಂತರ ಮೂರು ಲೋಕಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಭಾರತದ ಪ್ರಧಾನಮಂತ್ರಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ.
ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ; ಬೆಳ್ಳಂಬೆಳಗ್ಗೆ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ; Video
Updated on: 

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಇಂದು ಬುಧವಾರ ದೆಹಲಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇಶಕ್ಕೆ ಅತ್ಯಂತ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುವ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದರು.

2001ರ ಅಕ್ಟೋಬರ್ 7ರಿಂದ ಮೋದಿ ಅವರು ನಿರಂತರವಾಗಿ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿಗೆ ಮೂರು ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ನಂತರ ಮೂರು ಲೋಕಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಭಾರತದ ಪ್ರಧಾನಮಂತ್ರಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ, ಇಂದು ದೆಹಲಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದೆ. ದೇಶಾದ್ಯಂತ ಇರುವ ನನ್ನ ಕುಟುಂಬದ ಎಲ್ಲ ಸದಸ್ಯರ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಗಣೇಶನನ್ನು ಪ್ರಾರ್ಥಿಸಿದೆ ಎಂದು ಹೇಳಿದ್ದಾರೆ.

‘ವಿಘ್ನಹರ್ತ’ನ ಕೃಪೆಯಿಂದ ಎಲ್ಲರಿಗೂ ಒಳಿತಾಗಲಿ ಹಾಗೂ ದೇಶವು ಅಭಿವೃದ್ಧಿಯ ಪಥದಲ್ಲಿ ನಿರಂತರವಾಗಿ ಮುನ್ನಡೆಯಲಿ ಎಂದು ಪ್ರಾರ್ಥಿಸಿರುವುದಾಗಿ ಪ್ರಧಾನಿ ತಿಳಿಸಿದ್ದಾರೆ.

ಸರ್ಕಾರದ ಮೂಲಗಳ ಪ್ರಕಾರ, ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸರೋಜಿನಿ ನಗರದಲ್ಲಿರುವ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮೋದಿ ಅವರು ದೇಶಕ್ಕೆ ಅತ್ಯಂತ ಸಮರ್ಪಣೆಯಿಂದ ಸೇವೆ ಸಲ್ಲಿಸುವ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದ್ದಾರೆ.

ಈ ಮಧ್ಯೆ, ಹಲವು ಕೇಂದ್ರ ಸಚಿವರು ಹಾಗೂ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಾಶಯ ಸಲ್ಲಿಸಿ, ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದಿಸಿದ್ದಾರೆ.

‘25 ವರ್ಷಗಳ ಸೇವೆ’ ಪೂರ್ಣಗೊಳಿಸಿದ ಮೋದಿಗೆ ನಾಯಕರ ಅಭಿನಂದನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಗುಜರಾತ್ ಮುಖ್ಯಮಂತ್ರಿಯಿಂದ ಪ್ರಧಾನಮಂತ್ರಿಯವರೆಗಿನ ಅವರ ಪಯಣವನ್ನು ಸ್ಮರಿಸಿದ್ದಾರೆ. ಆಡಳಿತ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿನ ಅವರ ಹಲವು ಉಪಕ್ರಮಗಳನ್ನು ಶಾ ಉಲ್ಲೇಖಿಸಿದ್ದಾರೆ.

ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಶಾ, ಸಮಾಜದ ವಿವಿಧ ವರ್ಗಗಳ ಕಲ್ಯಾಣಕ್ಕಾಗಿ ಮೋದಿ ಅವರ ಸೇವೆ, ಹೋರಾಟ ಮತ್ತು ಸಮರ್ಪಣೆಯನ್ನು ಬಣ್ಣಿಸಿದ್ದಾರೆ.

2001ರ ಅಕ್ಟೋಬರ್ 7ರಂದು ಇದೇ ದಿನ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅಂದಿನಿಂದ ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿ ಅವರ ನಿರಂತರ ಸೇವೆ, ಹೋರಾಟ ಮತ್ತು ಸಮರ್ಪಣೆಯ ಪಯಣವು ಬಡವರ ಕಲ್ಯಾಣ, ಮಹಿಳಾ ಸಬಲೀಕರಣ, ಯುವಕರ ಉನ್ನತಿ ಹಾಗೂ ಸಮಾಜದ ಪ್ರತಿಯೊಂದು ವರ್ಗದ ಸಮೃದ್ಧಿಯೊಂದಿಗೆ ಗುರುತಿಸಿಕೊಂಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಜನಕೇಂದ್ರಿತ ನೀತಿಗಳು, ಅವುಗಳ ಅನುಷ್ಠಾನ, ನಿರ್ಧಾರ ಕೈಗೊಳ್ಳುವಲ್ಲಿನ ದೃಢತೆ, ಪಾರದರ್ಶಕತೆ ಮತ್ತು ಫಲಿತಾಂಶದ ಭರವಸೆಯ ಮೂಲಕ ಮೋದಿ ಅವರು ತಮ್ಮ 25 ವರ್ಷಗಳ ‘ಸೇವಾ’ ಅವಧಿಯಲ್ಲಿ ಆಡಳಿತದ ವ್ಯಾಖ್ಯಾನವನ್ನೇ ಬದಲಿಸಿದ್ದಾರೆ ಎಂದು ಶಾ ಹೇಳಿದ್ದಾರೆ. ಇದರೊಂದಿಗೆ ಕಾರ್ಯಕ್ಷಮತೆಯ ರಾಜಕೀಯದ ಮಾದರಿಯನ್ನು ಸ್ಥಾಪಿಸಿದ್ದಾರೆ ಎಂದಿದ್ದಾರೆ.

ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಸ್ಮರಿಸಿದ ಶಾ, ಭೂಕಂಪದಿಂದ ನಲುಗಿದ್ದ ಕಚ್ ಪ್ರದೇಶವನ್ನು ಮೋದಿ ಪುನರ್ ನಿರ್ಮಿಸಿದರು, ಜ್ಯೋತಿಗ್ರಾಮ ಯೋಜನೆಯ ಮೂಲಕ ವಿದ್ಯುತ್ ಪೂರೈಕೆಯನ್ನು ವಿಸ್ತರಿಸಿದರು, ಸೌರಶಕ್ತಿ ಉಪಕ್ರಮಗಳು ಮತ್ತು ವೈಬ್ರೆಂಟ್ ಗುಜರಾತ್ ಮೂಲಕ ಹೂಡಿಕೆ ಹಾಗೂ ಕೈಗಾರಿಕೆಗಳಿಗೆ ಉತ್ತೇಜನ ನೀಡಿದರು ಮತ್ತು ಶೇ.8ಕ್ಕಿಂತ ಹೆಚ್ಚು ಕೃಷಿ ಬೆಳವಣಿಗೆ ಸಾಧಿಸಿದರು ಎಂದು ಹೇಳಿದ್ದಾರೆ.

ಮೋದಿ ಪ್ರಧಾನಿಯಾದ ಬಳಿಕ ಇದೇ ಆಡಳಿತದ ದೃಷ್ಟಿಕೋನವನ್ನು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ವಿಸ್ತರಿಸಲಾಯಿತು ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿಯಾಗಿ ಇದೇ ದೃಷ್ಟಿಕೋನ ಮತ್ತಷ್ಟು ವಿಸ್ತರಿಸಿತು. ಬಾಹ್ಯಾಕಾಶದಿಂದ ಸಾಗರದವರೆಗೆ, ಜಾಗತಿಕ ವೇದಿಕೆಗಳಿಂದ ಆಂತರಿಕ ಭದ್ರತೆಯವರೆಗೆ ಭಾರತ ಹೊಸ ಮೈಲಿಗಲ್ಲುಗಳನ್ನು ಸಾಧಿಸಿತು. ಜನರ ಜೀವನದಲ್ಲೂ ದೊಡ್ಡ ಬದಲಾವಣೆಯಾಯಿತು—25 ಕೋಟಿ ಜನರನ್ನು ಬಡತನದಿಂದ ಹೊರತರಲಾಯಿತು. ಕೋಟ್ಯಂತರ ಕುಟುಂಬಗಳಿಗೆ ಪಕ್ಕಾ ಮನೆಗಳು, ₹5 ಲಕ್ಷದವರೆಗೆ ಆರೋಗ್ಯ ರಕ್ಷಣೆ, ಉಜ್ವಲಾ ಗ್ಯಾಸ್ ಸಂಪರ್ಕ ಹಾಗೂ ಪ್ರತಿ ಮನೆಗೂ ನಲ್ಲಿ ನೀರಿನ ಸೌಲಭ್ಯ ದೊರೆಯಿತು.

ಮೋದಿ ಅವರು ಕೋಟ್ಯಂತರ ಭಾರತೀಯರಲ್ಲಿ ಆತ್ಮವಿಶ್ವಾಸ ಮೂಡಿಸಿ, ‘ವಿಕಸಿತ ಭಾರತ’ದ ಮಂತ್ರವನ್ನು ನೀಡಿದ್ದಾರೆ. 2047ರ ವೇಳೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ಮುಂಚೂಣಿ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪವನ್ನು ಮೂಡಿಸಿದ್ದಾರೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ; ಬೆಳ್ಳಂಬೆಳಗ್ಗೆ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ; Video
'ದೇಶವನ್ನು 'ಹೈಜಾಕ್' ಮಾಡಿದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು! Video

‘ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಅವಕಾಶ’ ಎಂದ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ಎಕ್ಸ್‌ನಲ್ಲಿ ಪ್ರಧಾನಿ ಮೋದಿ ಅವರ ಪಯಣವನ್ನು ಉಲ್ಲೇಖಿಸಿದ್ದಾರೆ. ಯಾವುದೇ ರಾಜಕೀಯ ಕುಟುಂಬ ಅಥವಾ ವಂಶಪಾರಂಪರ್ಯ ಹಿನ್ನೆಲೆಯಿಲ್ಲದೆ, ತಳಮಟ್ಟದ ಪಕ್ಷದ ಕಾರ್ಯಕರ್ತನಾಗಿ ಆರಂಭಿಸಿ ದೇಶದ ನಾಯಕತ್ವ ವಹಿಸಿರುವುದನ್ನು ಅವರು ಪ್ರಸ್ತಾಪಿಸಿದ್ದಾರೆ.

ಇಂದು, ಅಕ್ಟೋಬರ್ 7ರಂದು ಪ್ರಧಾನಿ ನರೇಂದ್ರ ಮೋದಿ ಅವರ ವೈವಿಧ್ಯಮಯ ಪಯಣವನ್ನು ನಾವು ಸ್ಮರಿಸುತ್ತೇವೆ. 25 ವರ್ಷಗಳ ಹಿಂದೆ ಇದೇ ದಿನ ಅವರು ಗುಜರಾತ್ ಮುಖ್ಯಮಂತ್ರಿಯ ಜವಾಬ್ದಾರಿ ವಹಿಸಿಕೊಂಡರು. ಅದಕ್ಕೂ ಮುನ್ನ ಅವರು ಯಾವುದೇ ಚುನಾಯಿತ ಹುದ್ದೆ ಹೊಂದಿರಲಿಲ್ಲ. ಸಮರ್ಪಣೆಯ ಮೂಲಕ ಸೇವೆ ಸಲ್ಲಿಸುತ್ತಾ, ಅನುಭವದಿಂದ ಕಲಿಯುತ್ತಾ ಮುನ್ನಡೆದರು ಎಂದು ಸೀತಾರಾಮನ್ ಹೇಳಿದ್ದಾರೆ.

ಸ್ವಾರ್ಥರಹಿತ ಸೇವೆ, ಭ್ರಷ್ಟಾಚಾರವಿಲ್ಲ, ಆಪ್ತರ ಬಳಗವಿಲ್ಲ. ಇಂದು ಅವರು ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ ಕುಟುಂಬ ಅಥವಾ ವಂಶಪಾರಂಪರ್ಯ ಹಿನ್ನೆಲೆ, ಹಣಕಾಸಿನ ಬಲ ಇಲ್ಲದಿದ್ದರೂ ಬಿಜೆಪಿಯಲ್ಲಿ ಒಬ್ಬ ಕಾರ್ಯಕರ್ತನಿಗೆ ಅವಕಾಶ ಸಿಗುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಬಲವಾದ ಸಂದೇಶ ಎಂದು ಹೇಳಿದ್ದಾರೆ.

ಯೋಗಿ ಆದಿತ್ಯನಾಥ್ ಅಭಿನಂದನೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಅವರ ಜೀವನ ಮತ್ತು ನಾಯಕತ್ವವು ಸಾರ್ವಜನಿಕ ಸೇವೆ ಹಾಗೂ ‘ರಾಷ್ಟ್ರ ಮೊದಲು’ ಎಂಬ ತತ್ವದ ಮೇಲಿನ ಅಚಲ ಬದ್ಧತೆಯಿಂದ ಕೂಡಿದೆ ಎಂದು ಹೇಳಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಯೋಗಿ ಆದಿತ್ಯನಾಥ್, ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ “25 ಅದ್ಭುತ ವರ್ಷಗಳನ್ನು” ಪೂರ್ಣಗೊಳಿಸಿರುವುದು ಎಲ್ಲರಿಗೂ ಅಪಾರ ಸಂತೋಷದ ವಿಷಯ ಎಂದು ಹೇಳಿದ್ದಾರೆ.

ಭಾರತದ ಗುರುತು, ಸ್ವಾಭಿಮಾನ ಮತ್ತು ಕೀರ್ತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಪ್ರಧಾನಿ ನಿರಂತರವಾಗಿ ಸಮರ್ಪಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೋದಿ ಅವರ 25 ವರ್ಷಗಳ ರಾಷ್ಟ್ರ ಸಮರ್ಪಣೆಯು ಸಾರ್ವಜನಿಕ ಸೇವೆಯ ಮೇಲಿನ ಅಚಲ ಬದ್ಧತೆ, ದೃಢ ಸಂಕಲ್ಪ, ದೂರದೃಷ್ಟಿಯ ನಾಯಕತ್ವ ಹಾಗೂ ರಾಷ್ಟ್ರವನ್ನು ಮೊದಲ ಸ್ಥಾನದಲ್ಲಿಡುವ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಯೋಗಿ ಹೇಳಿದ್ದಾರೆ.

ಪ್ರಧಾನಮಂತ್ರಿಯವರ ಜೀವನವು ಅಭಿವೃದ್ಧಿ ಹೊಂದಿದ, ಸ್ವಾವಲಂಬಿ ಮತ್ತು ಸಶಕ್ತ ಭಾರತ ನಿರ್ಮಾಣಕ್ಕೆ ದೇಶದ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.

ರಾಷ್ಟ್ರಕ್ಕೆ ನಿರಂತರ ಸೇವೆಯ ಹಾದಿಯಲ್ಲಿ 25 ವರ್ಷಗಳನ್ನು ಪೂರ್ಣಗೊಳಿಸಿದ ಪ್ರಧಾನಮಂತ್ರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಯೋಗಿ ಆದಿತ್ಯನಾಥ್ ಸಲ್ಲಿಸಿದ್ದಾರೆ.

‘ಸೇವೆಯನ್ನೇ ಪರಂಪರೆ, ಕರ್ತವ್ಯವನ್ನೇ ಭಕ್ತಿ’ ಎಂದ ದೆಹಲಿ ಸಿಎಂ

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕೂಡ ಸಾಮಾಜಿಕ ಜಾಲತಾಣದ ಮೂಲಕ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿಯವರ ಜೀವನದ ಪ್ರತಿದಿನವೂ ಭಾರತ ಮಾತೆಯ ವೈಭವಕ್ಕೆ ಸಮರ್ಪಿತವಾಗಿದೆ. ಗುಜರಾತ್‌ನ ಪವಿತ್ರ ನೆಲದಿಂದ ಹರಿದುಬಂದ ಈ ಸಾರ್ವಜನಿಕ ಸೇವೆಯ ಪ್ರವಾಹ ಇಂದು ಹಿಮಾಲಯದಿಂದ ಸಾಗರದವರೆಗೆ ಭಾರತದ ಜನರ ಹೃದಯ ಮತ್ತು ಮನಸ್ಸುಗಳನ್ನು ತಲುಪಿದೆ”ಎಂದು ಹೇಳಿದ್ದಾರೆ.

ಗ್ರಾಮಗಳು, ಬಡವರು, ರೈತರು, ಯುವಕರು ಮತ್ತು ಮಹಿಳಾ ಶಕ್ತಿಯ ಜೀವನದಲ್ಲಾದ ಪರಿವರ್ತನೆಯು ರಾಷ್ಟ್ರದ ಪುನರುತ್ಥಾನದ ಸುಂದರ ಕಥೆಯನ್ನು ಹೆಣೆಯುತ್ತಿದೆ ಎಂದು ಹೇಳಿದ್ದಾರೆ.

25 ವರ್ಷಗಳಲ್ಲಿ ಪ್ರಧಾನಮಂತ್ರಿಯವರು ಸೇವೆಯನ್ನು ಪರಂಪರೆಯಾಗಿ, ಕರ್ತವ್ಯವನ್ನು ಭಕ್ತಿಯಾಗಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಜೀವನದ ಗುರಿಯನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮೋದಿ ಅವರು ಭಾರತದ ಆತ್ಮವಿಶ್ವಾಸವನ್ನು ಜಾಗೃತಗೊಳಿಸಿ, ಸಾಂಸ್ಕೃತಿಕ ಪ್ರಜ್ಞೆಗೆ ಹೊಸ ಶಕ್ತಿ ತುಂಬಿದ್ದಾರೆ ಹಾಗೂ ಅಭಿವೃದ್ಧಿ ಹೊಂದಿದ ಮತ್ತು ವೈಭವಯುತ ಭಾರತದ ಸಂಕಲ್ಪವನ್ನು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಗಟ್ಟಿಯಾಗಿ ಬಿತ್ತಿದ್ದಾರೆ ಎಂದು ರೇಖಾ ಗುಪ್ತಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com