

ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಜೈಲಿನಲ್ಲಿರುವ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ಎಂದು ಹೇಳುವ ಮೂಲಕ ಶಿವಸೇನೆ (ಯುಬಿಟಿ) ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ವಿವಾದ ಸೃಷ್ಟಿಸಿದ್ದಾರೆ.
ನಟ ಟೈಗರ್ ಶ್ರಾಫ್ ಅವರ ಮೇಲಿನ ಇತ್ತೀಚಿನ ಗುಂಡಿನ ದಾಳಿ ಹಾಗೂ ಸಲ್ಮಾನ್ ಖಾನ್ ಮತ್ತು ರೋಹಿತ್ ಶೆಟ್ಟಿ ಸೇರಿದಂತೆ ಬಾಲಿವುಡ್ ವ್ಯಕ್ತಿಗಳಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನೀಡಿದೆ ಎನ್ನಲಾದ ಬೆದರಿಕೆಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಆಪ್ತರಾಗಿರುವ ರಾವತ್, ಈ ಹೇಳಿಕೆ ನೀಡಿದ್ದಾರೆ.
ಮುಂಬೈನಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾವತ್, "ಲಾರೆನ್ಸ್ ಬಿಷ್ಣೋಯ್ ಎಂಬ ವ್ಯಕ್ತಿಯೇ ಇಲ್ಲ; ಅಮಿತ್ ಶಾ ಅವರೇ ಲಾರೆನ್ಸ್ ಬಿಷ್ಣೋಯ್ ಆಗಿದ್ದಾರೆ" ಎಂದು ಹೇಳಿದರು.
ಅಂತಾರಾಷ್ಟ್ರೀಯ ಅಪರಾಧ ಗ್ಯಾಂಗ್ ನೊಂದಿಗೆ ನಂಟು ಹೊಂದಿರುವ ಲಾರೆನ್ಸ್ ಬಿಷ್ಣೋಯ್, ಪ್ರಸ್ತುತ ಮಾದಕವಸ್ತು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾರೆ.
ರಾವತ್ ಅವರ ಹೇಳಿಕೆ ವಿರುದ್ಧ ಹಿರಿಯ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಬಂದರು ಮತ್ತು ಮೀನುಗಾರಿಕೆ ಸಚಿವ ನಿತೇಶ್ ರಾಣೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೈಲಿನ ಒಳಗೆ ಏನಾಗುತ್ತಿದೆ ಎಂಬುದು ರಾವತ್‌ಗೆ ಹೇಗೆ ಗೊತ್ತು? ಅವರು "ಸಬರಮತಿ ಜೈಲಿನಲ್ಲಿ ನೆಲ ಗುಡಿಸುತ್ತಿದ್ದರೇ?" ಎಂದು ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷದವರಿಗೆ ಅಮಿತ್ ಶಾ ಅವರಲ್ಲಿ ಬಿಷ್ಣೋಯ್ ಕಾಣುತ್ತಿದ್ದರೆ, ನಮಗೆ ಉದ್ಧವ್ ಠಾಕ್ರೆ ಅವರಲ್ಲಿ ದಾವೂದ್ ಇಬ್ರಾಹಿಂ ಕಾಣುತ್ತಾರೆ ಮತ್ತು ದಾವೂದ್ ಇಬ್ರಾಹಿಂ ಅವರಲ್ಲಿ ಉದ್ಧವ್ ಠಾಕ್ರೆ ಕಾಣುತ್ತಾರೆ. ಅಲ್ಲದೆ, ಶಿವಸೇನೆ (ಯುಬಿಟಿ) ದೇಶವಿರೋಧಿ ಶಕ್ತಿಗಳಿಗೆ, ಬಾಂಗ್ಲಾದೇಶದ ಅಕ್ರಮ ಒಳನುಸುಳುಕೋರರಿಗೆ ಮತ್ತು ರೋಹಿಂಗ್ಯಾಗಳಿಗೆ ರಾಜಕೀಯ ಆಶ್ರಯ ನೀಡುತ್ತಿದೆ ಎಂದು ರಾಣೆ ಆರೋಪಿಸಿದ್ದಾರೆ.