

ನವದೆಹಲಿ: ಶೇ.7.8ರ ಜಿಡಿಪಿ ಬೆಳವಣಿಗೆ ಕುರಿತು ಟೀಕೆ ಮಾಡಿರುವ ಪ್ರತಿಪಕ್ಷ ನಾಯಕರು ಹಾಗೂ ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಗರ್ಗ್ ವಿರುದ್ಧ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ವಾಗ್ದಾಳಿ ನಡೆಸಿದರು. ಸೇಬು-ಸೇಬಿನೊಂದಿಗೆ ಹೋಲಿಕೆ ಮಾಡುವುದು ಹೇಗೆ ಎಂಬುದೇ ಅವರಿಗೆ ತಿಳಿದಿಲ್ಲ ಎಂದು ಟೀಕಿಸಿದ ಅವರು, ದೇಶದ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪರಿಷ್ಕೃತ ಜಿಡಿಪಿ ಸರಣಿಯ ಪ್ರಕಾರ, 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ವಾಸ್ತವಿಕವಾಗಿ ಶೇ.7.8ರಷ್ಟು ಬೆಳವಣಿಗೆ ದಾಖಲಿಸಿದೆ.
ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಮತ್ತು ಬಿಕ್ಕಟ್ಟುಗಳು ಮುಂದುವರಿದಿರುವ ಸಂದರ್ಭದಲ್ಲಿ ಭಾರತವು ಮರುಭೂಮಿಯಲ್ಲಿನ ಓಯಸಿಸ್‌ನಂತಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿದಿದೆ ಎಂದು ಗೋಯಲ್ ಹೇಳಿದರು.
ಟೀಕಾಕಾರರು ಏನು ಬೇಕಾದರೂ ಹೇಳಬಹುದು. ಆದರೆ ಶೇ.7.8ರ ಬೆಳವಣಿಗೆ ವಾಸ್ತವ. ದೂರದರ್ಶನದಲ್ಲಿ ಕೆಲವು ಪ್ರತಿಪಕ್ಷ ನಾಯಕರು ಮಾತನಾಡುವುದನ್ನು ನೋಡುತ್ತೇನೆ. ಅವರೊಂದಿಗೆ ಮಾಜಿ ಹಣಕಾಸು ಕಾರ್ಯದರ್ಶಿ ಅಥವಾ ಮಾಜಿ ಆರ್‌ಬಿಐ ಗವರ್ನರ್‌ಗಳನ್ನೂ ಸೇರಿಸಬಹುದು. ಇವರಿಬ್ಬರೂ ಭಾರತದಲ್ಲಿ ಅಥವಾ ಸರ್ಕಾರದಲ್ಲಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಸೂಕ್ತ ಕಾರಣಗಳೂ ಇದ್ದವು ಎಂದು ದೆಹಲಿಯಲ್ಲಿ ಸುದ್ದಿಗಾರರಿಗೆ ಹೇಳಿದರು.
ಸೇಬನ್ನು ಸೇಬಿನೊಂದಿಗೆ ಹೋಲಿಕೆ ಮಾಡುವುದು ಹೇಗೆ ಎಂಬುದೇ ಅವರಿಗೆ ತಿಳಿದಿಲ್ಲ. ಹಳೆಯ ಜಿಡಿಪಿ ಸರಣಿಯ ಬೆಳವಣಿಗೆ ದರವನ್ನು ಹೊಸ ಸರಣಿಯೊಂದಿಗೆ ಹೋಲಿಸುವ ಮೂಲಕ ಅವರು ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಹೊಸ ಸರಣಿಯಲ್ಲಿ ಮೂಲ ವರ್ಷವೇ ಬದಲಾಗಿದೆ ಎಂದು ಗೋಯಲ್ ಹೇಳಿದರು.
ಜಿಡಿಪಿ ಬೆಳವಣಿಗೆಯ ಅಂಕಿ-ಅಂಶಗಳಲ್ಲಿ ಲೋಪಗಳನ್ನು ಹುಡುಕಲು ಟೀಕಾಕಾರರು ಸರಿ, ಶೇ.7.8ರ ಬೆಳವಣಿಗೆಯಾಗಿದೆ. ಆದರೆ ಉದ್ಯೋಗಗಳು ಎಲ್ಲಿವೆ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಮಿಕರಿಗೆ ಬೇಡಿಕೆ, ವಿಶೇಷವಾಗಿ ಜವಳಿ ಕ್ಷೇತ್ರದಲ್ಲಿ, ಬಲವಾಗಿದೆ. ತಮಿಳುನಾಡಿನ ತಿರುಪ್ಪೂರಿನಲ್ಲಿ ಹೆಚ್ಚಿನ ಕಾರ್ಮಿಕರ ಅಗತ್ಯವಿದೆ ಎಂದು ಅಲ್ಲಿನ ಕೈಗಾರಿಕೆಗಳು ಮನವಿ ಮಾಡಿರುವುದನ್ನು ಉಲ್ಲೇಖಿಸಿದ ಅವರು, ತಿರುಪ್ಪೂರಿಗೆ ಒಂದು ಲಕ್ಷ ಜನರನ್ನು ಕಳುಹಿಸಿ. ನಾವು ಅವರಿಗೆ ಉದ್ಯೋಗ ಒದಗಿಸುತ್ತೇವೆ ಎಂದು ಹೇಳಿದರು.
ಟೀಕಾಕಾರರಿಗೆ ದೇಶದ ಉದ್ಯೋಗ ಸೃಷ್ಟಿಯ ವಾಸ್ತವವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಉದ್ಯೋಗವಿಲ್ಲದೆ ಉಳಿದಿರುವ ಏಕೈಕ ಜನರು ಅವರೇ ಎಂಬಂತೆ ಅವರು ವರ್ತಿಸುತ್ತಿದ್ದಾರೆ. ಅವರ ಬಳಿ ಉಳಿದಿರುವ ಏಕೈಕ ಕೆಲಸವೆಂದರೆ ದೂರದರ್ಶನದ ಚರ್ಚಾ ಕಾರ್ಯಕ್ರಮಗಳಲ್ಲಿ ಕುಳಿತುಕೊಂಡು ಒಂದು ವಾದವನ್ನು ಸೃಷ್ಟಿಸುವುದು ಅಥವಾ ಕಟ್ಟುಕಥೆ ಹೆಣೆಯುವುದು ಎಂದು ಟೀಕಿಸಿದರು.
ಕಳೆದ ವರ್ಷದ ಜಿಡಿಪಿಯನ್ನು ಸುಮಾರು 86 ಲಕ್ಷ ಕೋಟಿಯಿಂದ 80 ಲಕ್ಷ ಕೋಟಿಗೆ ಪರಿಷ್ಕರಿಸದೇ ಇದ್ದಿದ್ದರೆ, ಪ್ರಸಕ್ತ ಬೆಲೆಗಳಲ್ಲಿ ಜಿಡಿಪಿ ಬೆಳವಣಿಗೆ ಸುಮಾರು ಶೇ.2.6ರಷ್ಟಿರುತ್ತಿತ್ತು ಎಂದು ಸುಭಾಷ್ ಗರ್ಗ್ ಹೇಳಿದ್ದರು.
ಪ್ರತಿ ತಿಂಗಳು ಮತ್ತು ಪ್ರತಿ ತ್ರೈಮಾಸಿಕದಲ್ಲಿ ನಡೆಯುವ ಆರ್ಥಿಕ ಚಟುವಟಿಕೆಗಳನ್ನು ದಾಖಲಿಸುವ ವ್ಯವಸ್ಥೆ ಹಲವು ವರ್ಷಗಳಿಂದ ಜಾರಿಯಲ್ಲಿದೆ. ಹೀಗಾಗಿ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದೂ ಗರ್ಗ್ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಗೋಯಲ್, ಈ ಅಂಕಿ-ಅಂಶಗಳನ್ನು ನಾವು ರಾಜಕಾರಣಿಗಳು, ಸಚಿವರು ಅಥವಾ ಸಂಸದರು ಸೃಷ್ಟಿಸುವುದಿಲ್ಲ. ನೀವು (ಪ್ರತಿಪಕ್ಷ ನಾಯಕರು) ಇಂತಹ ನಕಾರಾತ್ಮಕ ಮನೋಭಾವದೊಂದಿಗೆ ಮುಂದೆ ಬಂದಾಗ, ಒಂದು ರೀತಿಯಲ್ಲಿ ನಿಮ್ಮನ್ನೇ ನೀವು ಕುಗ್ಗಿಸಿಕೊಳ್ಳುತ್ತಿದ್ದೀರಿ ಎಂದು ಹೇಳಿದರು.