

ಕೊಚ್ಚಿ: ಕೊಚ್ಚಿಯಿಂದ ಅಬುಧಾಬಿಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೋಯಿಂಗ್ 737 ವಿಮಾನ IX 415 ಎಂಜಿನ್ 1ರ ಆಯಿಲ್ ಪ್ರಮಾಣದಲ್ಲಿ ದಿಢೀರ್ ಕುಸಿತವಾಗಿದ್ದು, ಇದನ್ನು ಗಮನಿಸಿದ ಸಿಬ್ಬಂದಿ ತಕ್ಷಣವೇ ವಿಮಾನವನ್ನು ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ ತಂದು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ವಿಮಾನವು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಕಾಕ್‌ಪಿಟ್‌ನಲ್ಲಿ ಉಂಟಾದ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಮಾಹಿತಿ ಇರಲಿಲ್ಲ ಎಂದು ಎಎನ್ಐ ವರದಿ ಮಾಡಿದೆ.
ವರದಿಯ ಪ್ರಕಾರ, ವಿಮಾನವು ಹಾರಾಟ ಆರಂಭಿಸಿದ ಸುಮಾರು 50 ನಿಮಿಷಗಳ ನಂತರ ಮತ್ತು 36,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ, ಎಂಜಿನ್ 1 ರಲ್ಲಿನ ತೈಲ ಪ್ರಮಾಣವು ಅತೀ ವೇಗವಾಗಿ ಕುಸಿಯುತ್ತಿರುವುದನ್ನು ಪೈಲಟ್‌ಗಳು ಗಮನಿಸಿದ್ದಾರೆ. ತಕ್ಷಣವೇ ಸಿಬ್ಬಂದಿ FORDEC ಮೌಲ್ಯಮಾಪನವನ್ನು ನಡೆಸಿದರು ಮತ್ತು ತೈಲ ಪ್ರಮಾಣವು ಕಡಿಮೆಯಾಗುತ್ತಲೇ ಇದ್ದುದರಿಂದ, ಅಬುಧಾಬಿ ವಲಯವನ್ನು ತ್ಯಜಿಸಿ ಕೊಚ್ಚಿಗೆ ಹಿಂತಿರುಗಲು ನಿರ್ಧರಿಸಿದರು.
ಎಂಜಿನ್ ಆಯಿಲ್ ಪ್ರೆಶರ್ ‘ಡೆಂಜರ್ ಜೋನ್’ (Danger Zone) ತಲುಪುತ್ತಿದ್ದಂತೆ, ಮುನ್ನೆಚ್ಚರಿಕೆಯ ಕ್ರಮವಾಗಿ ಪೈಲಟ್‌ಗಳು ತಕ್ಷಣವೇ ಎಂಜಿನ್-1 ಅನ್ನು ಆಫ್ (Shut Down) ಮಾಡಿ, ವಿಮಾನವನ್ನು ಕೊಚ್ಚಿಯತ್ತ ಹಿಂತಿರುಗಿಸಿದ್ದಾರೆ.
ವಿಮಾನವು ಒಂದೇ ಎಂಜಿನ್ ಬೆಂಬಲದೊಂದಿಗೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಗಾಬರಿ ಉಂಟಾಗದಂತೆ ಪೈಲಟ್‌ಗಳು ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸಿದ್ದು, ವಿಮಾನ ಸುರಕ್ಷಿತವಾಗಿ ಇಳಿಯುವವರೆಗೂ ತಾಂತ್ರಿಕ ಸಮಸ್ಯೆಯ ಗಂಭೀರತೆಯ ಕುರಿತು ಪ್ರಯಾಣಿಕರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.