
ಚೆನ್ನೈ: ದಿಢೀರ್ ಆಸ್ಪತ್ರೆಗೆ ದಾಖಲಾಗಿರುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಅವರು ಎರಡು ದಿನಗಳಲ್ಲಿ ಮನೆಗೆ ತೆರಳುತ್ತಾರೆ ಎಂದು ಹಿರಿಯ ನಟ ದಾಖಲಾಗಿರುವ ಕಾರ್ಪೊರೇಟ್ ಆಸ್ಪತ್ರೆ ಮಂಗಳವಾರ ತಿಳಿಸಿದೆ.
ರಜಿನಿಕಾಂತ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ, ಅವರನ್ನು ಸೆಪ್ಟೆಂಬರ್ 30 ರಂದು ರಾತ್ರಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ರಜನಿಕಾಂತ್ ಅವರ ಹೃದಯದಿಂದ(ಮಹಾಪಧಮನಿಯ) ಹೊರಹೋಗುವ ಮುಖ್ಯ ರಕ್ತನಾಳದಲ್ಲಿ ಊತವಿತ್ತು. ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಿಲ್ಲ. ಟ್ರಾನ್ಸ್‌ಕ್ಯಾತಿಟರ್ ವಿಧಾನದಿಂದ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಸಾಯಿ ಸತೀಶ್ ಅವರು ಮಹಾಪಧಮನಿಯಲ್ಲಿ ಸ್ಟೆಂಟ್ ಹಾಕಿದ್ದಾರೆ. ಊತ ಸಂಪೂರ್ಣವಾಗಿ ಕಡಿಮೆ ಆಗಿದೆ. ಚಿಕಿತ್ಸೆ ಕೂಡ ಸಕ್ಸಸ್ ಆಗಿದೆ. ರಜನಿಕಾಂತ್ ಅವರ ಆರೋಗ್ಯ ಈಗ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಬುಲೆಟಿನ್ ತಿಳಿಸಿದೆ.
ಸದ್ಯ ಅಪೋಲೋ ಆಸ್ಪತ್ರೆಯಲ್ಲಿರುವ ರಜನಿಕಾಂತ್ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಎರಡು ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಆಸ್ಪತ್ರೆ ಹೇಳಿದೆ.
Advertisement