ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಆಲೋಚನೆ ಹಾಗೂ ಸ್ಪಷ್ಟ ನಿಲುವು ಪ್ರತಿಫಲ ನೀಡಿತ್ತು. ನೇಗಿಲು ಹೊತ್ತ ರೈತನಿಗೆ ರಾಜ್ಯದ ಜನತೆ ಪ್ರಥಮ ಬಾರಿಗೆ ಸ್ಪಷ್ಟ ಬಹುಮತ ನೀಡಿದ್ದರು. ಈ ವಿಶ್ವಾಸಮತ ಗಳಿಸಲೆಂದೇ ಏಳನೇ ವಿಧಾನಸಭೆಯನ್ನು ಮೂರು ವರ್ಷದೊಳಗೆ ವಿಸರ್ಜನೆ ಮಾಡಲಾಗಿತ್ತು. 1985ರ ಮಾರ್ಚ್‌ನಲ್ಲಿ ನಡೆದ ಚುನಾವಣೆಯಲ್ಲಿ ಜನತಾಪಕ್ಷ 139 ಸ್ಥಾನಗಳಿಸುವ ಮೂಲಕ ಸ್ಪಷ್ಟ ಬಹುಮತ ಗಳಿಸಿತ್ತು. ರಾಮಕೃಷ್ಣ ಹೆಗಡೆ ಮಾರ್ಚ್ 8ರಂದು ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಆಡಳಿತಕ್ಕೆ ಒಂದು ಹೊಸ ವರ್ಚಸ್ಸು ಸಿಕ್ಕಿತ್ತು. ಹಲವು ಜನಪರ ಯೋಜನೆಗಳಿಗೆ ಒತ್ತು ಸಿಗುವ ಜತೆಗೆ, ಆಡಳಿತ ಸುಧಾರಣೆಯಲ್ಲಿ ಹೊಸ ಪ್ರಕ್ರಿಯೆಗಳೂ ಜಾರಿಯಾದವು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಹಕ್ಕುಗಳನ್ನು ಸಕಾರಾತ್ಮಕವಾಗಿ ಸ್ಥಾಪಿಸಲಾಯಿತು. ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಶಕ್ತಿ ನೀಡುವ ಜತೆಗೆ ಅವರಿಗೆ ಜವಾಬ್ದಾರಿ ನೀಡುವ ಕಾರ್ಯವೂ ಆಯಿತು. ಪಂಚಾಯತ್ ರಾಜ್ ಬಗ್ಗೆ ಶಾಸನ ರಚಿಸುವಲ್ಲಿ ಕರ್ನಾಟಕ ಪ್ರಥಮವಾಗಿ, ಮೂರನೇ ಸ್ತರದ ನಗರಗಳಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಹಾಗೂ ಆಡಳಿತಾತ್ಮಕ ಶಕ್ತಿಯನ್ನು ನೀಡಲಾಗಿತ್ತು. ಆಡಳಿತದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗೆ ಲೋಕಾಯುಕ್ತ ಸಂಸ್ಥೆ ಸ್ಥಾಪಿಸುವ ಶಾಸನವನ್ನು ಈ ಅವಧಿಯಲ್ಲಿ ಪರಿಚಯಿಸಲಾಗಿತ್ತು. ಅಲ್ಲದೆ, ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕಾಗಿ ಕನ್ನಡ ನಿಗಾ ಸಮಿತಿ ರಚಿಸಿ, ಅದರ ಅಧ್ಯಕ್ಷರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಲಾಗಿತ್ತು. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ದಕ್ಷ ಆಡಳಿತದಿಂದ ಅವರಿಗೆ ಅತ್ಯದ್ಭುತ ಜನಮನ್ನಣೆ ಹಾಗೂ ಜನಪ್ರಿಯತೆ ಲಭ್ಯವಾಗಿತ್ತು. ಆದರೆ ಅವರದೇ ಕುಟುಂಬ ವರ್ಗಾವಣೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಕಾಂಗ್ರೆಸ್ ಆಪಾದಿಸಿದಾಗ ಅದನ್ನು ಲೋಕಾಯುಕ್ತ ತನಿಖೆಗೆ ನೀಡಿದ್ದರು. 1986ರಲ್ಲಿ ಅರಾಕ್ ಬಾಟ್ಲಿಂಗ್ ಗುತ್ತಿಗೆ ನಿರ್ವಹಣೆ ಬಗ್ಗೆ ಸರ್ಕಾರದ ಮೇಲೆ ಹೈಕೋರ್ಟ್ ದೋಷಾರೋಪಣೆ ಮಾಡಿದಾಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಮೂರು ದಿನದ ನಂತರ ಎಲ್ಲರೂ ಸಮಾಧಾನಪಡಿಸಿದಾಗ ಮತ್ತೆ ಫೆಬ್ರವರಿ 16ರಂದು ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದರು. ಆದರೆ, 1988ರ ಆಗಸ್ಟ್‌ನಲ್ಲಿ ಪ್ರಮುಖ ರಾಜಕಾರಣಿಗಳ ದೂರವಾಣಿ ಕದ್ದಾಲಿಕೆ ಪ್ರಕರಣ ಇಡೀ ರಾಜ್ಯವನ್ನು ಆವರಿಸಿತು. ಇದರ ನೈತಿಕ ಜವಾಬ್ದಾರಿ ಹೊತ್ತ ರಾಮಕೃಷ್ಣ ಹೆಗಡೆ ಆಗಸ್ಟ್ 10ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆಗ ಎಸ್.ಆರ್. ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
- ಕೆರೆ ಮಂಜು
Advertisement