ರಾಜ್ಯದ ಮೊದಲ ಮಹಿಳಾ ಸ್ಪೀಕರ್ 'ಗುಂಡ್ಲುಪೇಟೆ ಅಮ್ಮ'

Updated on: 

ಚಾಮರಾಜನಗರ: ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿದ ನಂತರ ನಡೆದ ಚುನಾವಣೆ ಹೊರತುಪಡಿಸಿ ಒಟ್ಟು ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಸ್ಪೀಕರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ ಮಹಿಳೆಯೊಬ್ಬರಿದ್ದಾರೆ!
ಸಚಿವೆ, ರಾಜ್ಯದ ಮೊದಲ ಮಹಿಳಾ ಸ್ಪೀಕರ್ ಹಾಗೂ ಪ್ರತಿಪಕ್ಷ ನಾಯಕಿ ಆಗಿಯೂ ಕಾರ್ಯನಿರ್ವಹಿಸಿದ ಕಬ್ಬಳ್ಳಿ ಸುಬ್ಬಣ್ಣ ನಾಗರತ್ನಮ್ಮ ಬಹುಶಃ ಬದುಕಿದ್ದರೆ ಕರ್ನಾಟಕದ ಮೊದಲ ಮಹಿಳಾ ಮುಖ್ಯಮಂತ್ರಿಯೂ ಆಗಿರುತ್ತಿದ್ದರು ಎನ್ನುತ್ತಾರೆ ಈ ಭಾಗದ ಹಿರಿಯ ರಾಜಕಾರಣಿಗಳು. 1966ರಲ್ಲಿ ಶಾನ್ನೊ ದೇವಿ ಹರ್ಯಾಣ ವಿಧಾನಸಭೆಗೆ ಆಯ್ಕೆಯಾದ ಮೊದಲ ಮಹಿಳಾ ಸ್ಪೀಕರ್. ನಾಗರತ್ನಮ್ಮ ಎರಡನೆಯವರು.
ಹಿಂದಿನ ಮೈಸೂರು ಜಿಲ್ಲೆ ಗುಂಡ್ಲುಪೇಟೆ ಕ್ಷೇತ್ರದಿಂದ 7 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದ 'ಗುಂಡ್ಲುಪೇಟೆಯ ಅಮ್ಮ' ಎಂದೇ ಖ್ಯಾತರಾಗಿದ್ದ ಕೆ.ಎಸ್. ನಾಗರತ್ನಮ್ಮ ನಾಲ್ಕನೇ ಬಾರಿಗೆ ಆಯ್ಕೆಯಾದಾಗ 1972ರಿಂದ 1978ರವರೆಗೆ ಸ್ಪೀಕರ್ ಹುದ್ದೆಯನ್ನು ನಿಭಾಯಿಸಿದ್ದರು.
11ಕ್ಕೆ ಮದುವೆ, 24ಕ್ಕೆ ವಿದವೆ: ಬೆಂಗಳೂರಿನಲ್ಲಿ 1923 ನ.23ರಂದು ಹುಟ್ಟಿದ ನಾಗರತ್ನಮ್ಮ ಅವರಿಗೆ 11ನೇ ವಯಸ್ಸಿನಲ್ಲೇ ಗುಂಡ್ಲುಪೇಟೆ ತಾಲೂಕು ಕಬ್ಬಹಳ್ಳಿಯ ಸಾಹುಕರ್ ಕೆ.ಸಿ.ಸುಬ್ಬಣ್ಣರೊಂದಿಗೆ ವಿವಾಹವಾಗಿತ್ತು. 24ನೇ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡರು. ಬೆಂಗಳೂರಿನ ಯುರೋಪಿಯನ್ ಕಾನ್ವೆಂಟ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ಆಗಿನ ಕಾಲದಲ್ಲಿ ನಡೆಯುತ್ತಿದ್ದ ಕೇಂಬ್ರಿಡ್ಜ್ ಪರೀಕ್ಷೆಯಲ್ಲಿಯೂ ಪಾಸಾಗಿದ್ದರು. ಮೈಸೂರಿನ ಮಾತೃ ಮಂಡಳಿ ಸಂಸ್ಧೆಯ ಅಧ್ಯಕ್ಷರಾಗಿದ್ದರು. ಅಖಿಲ ಭಾರತ ಮಹಿಳಾ ಸಮ್ಮೇಳನದ ಮೈಸೂರು ವಲಯದ ಅಧ್ಯಕ್ಷರಾಗಿದ್ದರು. ಮೈಸೂರು ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್‌ನ ಉಪಾಧ್ಯಕ್ಷೆ, ಮೈಸೂರು ವಿವಿ ಸೆನೆಟ್ ಸದಸ್ಯೆ, ರಾಷ್ಟ್ರೀಯ ರೇಲ್ವೆ ಬಳಕೆದಾರರ ಸಮಿತಿ, ಕೇಂದ್ರ ರೇಷ್ಮೆ ಮಂಡಳಿ ಸ್ಥಾಯಿ ಸಮಿತಿ ಸದಸ್ಯೆಯಾಗಿ ಹಲವು ಹುದ್ದೆಗಳನ್ನು ಅಲಂಕರಿಸಿ, ಹಲವು ದೇಶಗಳಿಗೆ ಭೇಟಿ ನೀಡಿದ್ದ ಇವರು ಟೆನಿಸ್ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿಯೂ ಹೌದು.
ಎರಡನೇ ಚುನಾವಣೆಯಲ್ಲಿ ಆಯ್ಕೆ: 1957ರಲ್ಲಿ ಎರಡನೇ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಆಗಿನ ಕಾಂಗ್ರೆಸ್ ಅಭ್ಯರ್ಥಿಯನ್ನು 12 ಸಾವಿರ ಮತಗಳಿಂದ ಸೋಲಿಸಿದ ನಾಗರತ್ನಮ್ಮ ಪ್ರಥಮ ಯತ್ನದಲ್ಲೇ ಸಫಲರಾಗಿ ಕರ್ನಾಟಕದ ವಿಧಾನಸಭಾ ಸದಸ್ಯರಾಗಿದ್ದರು. ಆಗ ಅವರಿಗೆ 34 ವರ್ಷ. 1960ರ ದಶಕದಲ್ಲಿ ಎಸ್. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಾಗರತ್ನಮ್ಮ ಕಾಂಗ್ರೆಸ್ ಸೇರಿದರು. ನಂತರ 1962, 1967, 1972, 1983, 1985 ಮತ್ತು 1989 ಹೀಗೆ 7 ಬಾರಿ  ಗುಂಡ್ಲುಪೇಟೆ ಕ್ಷೇತ್ರದ ಶಾಸಕಿಯಾಗಿದ್ದರು.
1983ರಲ್ಲಿ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ನಾಗರತ್ನಮ್ಮ ಪ್ರತಿಪಕ್ಷ ನಾಯಕಿಯಾಗಿದ್ದರು. 1990ರಲ್ಲಿ ಎಸ್. ಬಂಗಾರಪ್ಪ ಅವರ ಸಚಿವ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗುವ ಮೂಲಕ ಮೈಸೂರಿನ ಮೊದಲ ಮಹಿಳಾ ಉಸ್ತುವಾರಿ ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದರು. ಸಚಿವರಾಗಿದ್ದಾಗಲೇ ನಿಧನರಾದರು.

ಅಮ್ಮನಿಗೊಮ್ಮೆ ಸೋಲು
'ಗುಂಡ್ಲುಪೇಟೆ ಅಮ್ಮ' ತುರ್ತು ಪರಿಸ್ಥಿತಿಯ ನಂತರ 1978ರಲ್ಲಿ ನಡೆದ ಚುನಾವಣೆಯಲ್ಲಿ ಹುಂಡೀಪುರದ ಎಚ್.ಕೆ. ಶಿವರುದ್ರಪ್ಪ ಅವರ ವಿರುದ್ಧ ಒಮ್ಮೆ ಸೋಲು ಅನುಭವಿಸಿದ್ದರು. ನಂತರ ಹಾಲಿ ಶಾಸಕ ಎಚ್.ಎಸ್. ಮಹದೇವ ಪ್ರಸಾದ್ ಮತ್ತವರ ತಂದೆ ಶ್ರೀಕಂಠಶೆಟ್ಟಿ ತಲಾ ಎರಡು ಬಾರಿ ಅಮ್ಮನ ವಿರುದ್ಧ ಸೋಲು ಅನುಭವಿಸಿದ್ದರು.

- ದೇವರಾಜು ಕಪ್ಪಸೋಗೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com