ಕ.ಪ್ರ. ವಾರ್ತೆ ಬೆಂಗಳೂರು ಮಾ.27-
ಬಿಜೆಪಿಯಿಂದ ಇನ್ನೂ ಕೆಲ ಶಾಸಕರು ಮತ್ತು ಸಚಿವರು ಬರುವ ನಿರೀಕ್ಷೆಯಲ್ಲಿರುವ ಕೆಜೆಪಿ ಚುನಾವಣೆ ರಣತಂತ್ರದಲ್ಲಿ ಬದಲಾವಣೆ ಮಾಡಿಕೊಂಡಿದೆ.
'ಇಲ್ಲ ಬಿಡಿ, ಇನ್ನು ಯಾವ ಸಚಿವರೂ ಹೋಗೋಲ್ಲ, ಶಾಸಕರೂ ಹೋಗಲ್ಲ. ಅದೆಲ್ಲ ಮಾಧ್ಯಮಗಳ ಊಹಾಪೋಹ' ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಉಪಮುಖ್ಯಮಂತ್ರಿಗಳೆಲ್ಲ ಹೇಳಿದ್ದೇ ಹೇಳಿದ್ದು. ಆದರೆ, ಅದು ಪ್ರತಿದಿನವೂ ಸುಳ್ಳೆಂದು ಸಾಬೀತಾಗುತ್ತಿದೆ. ನಾಲ್ವರು ಸಚಿವರು ಬೃಹತ್ ಸಮಾವೇಶದಲ್ಲಿ ಬಿಜೆಪಿ ತೊರೆಯಲು ಸನ್ನದ್ಧರಾಗಿದ್ದಾರೆ.
ಸಚಿವರಾದ ಮುರುಗೇಶ ನಿರಾಣಿ, ಉಮೇಶ್ ಕತ್ತಿ, ರೇಣುಕಾಚಾರ್ಯ, ಬಸವರಾಜ ಬೊಮ್ಮಾಯಿ ಅಂತೂ ಕೆಜೆಪಿಯ ಹೊಸಿಲು ಮೆಟ್ಟುತ್ತಿದ್ದಾರೆ. ಬಿಜೆಪಿ ಬಿಡುವ ಯಾವ ಮಾತನ್ನೂ ಆಡದೆ, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಇಲ್ಲೇ ಇರುವ ಭರವಸೆ ನೀಡುತ್ತಿದ್ದ ಇದೇ ಸಚಿವರು ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಇದು ನಿರೀಕ್ಷಿತವೇ. ಆದರೆ, ಈ ವಾಸ್ತವವನ್ನು ಬಿಜೆಪಿ ನಾಯಕರು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಆಂತರಿಕವಾಗಿ ಬಿ.ಎಸ್. ಯಡಿಯೂರಪ್ಪ ಬೆಂಬಲಿತ ಸಚಿವರು ಹಾಗೂ ಶಾಸಕರು ಯಾವತ್ತಾದರೂ ತಮಗೆ ಕೈ ಕೊಡುತ್ತಾರೆ ಎಂಬ ಅನುಮಾನ ಇದ್ದೇ ಇತ್ತು. ಇದನ್ನು ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಫಾರಂ ನೀಡುವ ಪ್ರಕ್ರಿಯೆಯಲ್ಲಿ ಆ ಅನುಮಾನವನ್ನು ಬಿಜೆಪಿ ನಾಯಕರು ಸ್ಪಷ್ಟವಾಗಿ ಅರಿವಾಗುವಂತೆಯೂ ಮಾಡಿದ್ದರು. ಈ ಸಚಿವರ ಆಪ್ತರ ಟಿಕೆಟ್ಗೆ ಕತ್ತರಿ ಹಾಕಿದ್ದರು. ಇದು ಈ ಸಚಿವರು ಬಿಜೆಪಿ ವಿರುದ್ಧ ಮಾತನಾಡಲು ಒಂದು ಅಸ್ತ್ರವಾಯಿತು ಅಷ್ಟೇ. ಅವರಿಗೊಂದು ಸಬೂಬು ಬೇಕಿತ್ತು, ಬಿಜೆಪಿಗೊಂದು ಸ್ಪಷ್ಟ ನಿಲುವು ಬೇಕಿತ್ತು. ಎರಡೂ ಆಗಿದ್ದು ಅವರವರ ಅನುಕೂಲಕ್ಕಷ್ಟೇ.
ಇನ್ನು ಬಿಜೆಪಿಯಿಂದ ನಾಲ್ವರು ಸಚಿವರು ಸೇರುವುದು ಸ್ಪಷ್ಟವಾಗುತ್ತಿರುವಂತೆ ಕೆಜೆಪಿಯಲ್ಲಿನ ವಾತಾವರಣ ಉತ್ಸಾಹ ಇಮ್ಮಡಿಯಾಗಿದೆ. ಈ ನಾಲ್ವರು ಸಚಿವರ ಪೈಕಿ ಇಬ್ಬರು ಸಚಿವರ ಜಿಲ್ಲೆಗಳಲ್ಲಿ ಒಂದೂ ಅಭ್ಯರ್ಥಿಯನ್ನು ಕೆಜೆಪಿಯ ಪ್ರಥಮ ಪಟ್ಟಿಯಲ್ಲಿ ಪ್ರಕಟಿಸಿರಲಿಲ್ಲ. ಈಗ ಅದೆಲ್ಲ ಉಮೇಶ್ ಕತ್ತಿ ಹಾಗೂ ಮುರುಗೇಶ ನಿರಾಣಿ ಜವಾಬ್ದಾರಿ. ಇನ್ನು ರೇಣುಕಾಚಾರ್ಯ ಅವರು ಕೆಜೆಪಿಯ ಅತ್ಯುತ್ತಮ ವಕ್ತಾರರಾಗುವುದರಲ್ಲಿ ಸಂಶಯವೇ ಇಲ್ಲ. ಈಗಾಗಲೇ ಒಂದು ಸ್ಯಾಂಪಲ್ ಅವರನ್ನು ಅವರು ಡಿ.ವಿ. ಸದಾನಂದಗೌಡರ ಮೇಲೆ ಕೆಜೆಪಿ ಸೇರುವ ಮುನ್ನವೇ ಬಳಸಿದ್ದಾರೆ. ಹೀಗಾಗಿ ಬಿಜೆಪಿ-ಕೆಜೆಪಿ ಬಹಿರಂಗ ಕೆಸರೆರಚಾಟವು ಮತ್ತೊಂದು ಮೇಲ್ಸ್ತರಕ್ಕೆ ತಲುಪುತ್ತದೆ.
ಕೆಜೆಪಿಗೆ ಬರುವುದು ನಾಲ್ಕೇ ಸಚಿವರೇ... ಇಲ್ಲ ಇದಕ್ಕೆ ಸ್ಪಷ್ಟ ಉತ್ತರ ಕೆಜೆಪಿಯಲ್ಲೂ ನೀಡುವವರಿಲ್ಲ. ಸಚಿವರಾದ ಮುರುಗೇಶ ನಿರಾಣಿ, ಉಮೇಶ್ ಕತ್ತಿ, ರೇಣುಕಾಚಾರ್ಯ, ಬಸವರಾಜ ಬೊಮ್ಮಾಯಿ ಬರುತ್ತಾರೆ ಎಂದು ಕೆಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರೇ ಹೇಳಿದ್ದಾರೆ. ಜತೆಗೆ ಇನ್ನಷ್ಟು ಶಾಸಕರೂ ಕೆಜೆಪಿಯೆಡೆಗೆ ಹರಿಯಲಿದ್ದಾರೆ.
ಹೌದು, ಇದರಲ್ಲಿ ಯಾವುದೇ ಸಂಶಯ ಇಲ್ಲ. ಆದರೆ ಸಂಖ್ಯೆ ಬಗ್ಗೆ ಮಾತ್ರ ಗೊಂದಲ ಇದೆ. ಸುಮಾರು 15 ಶಾಸಕರು ಈ ನಾಲ್ವರು ಸಚಿವರ ಹಿಂದೆ ಬರುತ್ತಾರೆ ಎಂಬುದೊಂದು ಲೆಕ್ಕಾಚಾರ. ಆದರೆ ಅವರ್ಯಾರು? ಅವರನ್ನು ಬಿಟ್ಟು ಇವರಾ? ಇಲ್ಲ, ಅದಕ್ಕೆ ಉತ್ತರ ನೀಡುತ್ತಿಲ್ಲ. ನಿನ್ನೆವರೆಗೂ ಬಿಜೆಪಿಗೆ ನಿಷ್ಠರಾಗಿದ್ದ ಸಚಿವರೇ ಇಂದು ಕೆಜೆಪಿ ಪಾಲಾಗಿದ್ದಾರೆ. ಇನ್ನು ಶಾಸಕರು ಯಾವ ಲೆಕ್ಕ ಎನ್ನಲಾಗುತ್ತಿದೆ.
ಹೋಳಿ ಹಬ್ಬದ ನಂತರ ಬಿಜೆಪಿಯಿಂದ ಸಾಕಷ್ಟು ಜನರು ಕೆಜೆಪಿಯತ್ತ ಹರಿದುಬರುತ್ತಾರೆ ಎಂಬ ಬಿ.ಎಸ್. ಯಡಿಯೂರಪ್ಪ ಅವರ ಮಾತು ಸಾಬೀತಾಗುತ್ತಿದೆ. ಅದಕ್ಕೇ ಬಿಜೆಪಿ ಕೂಡ ತಯಾರಿ ನಡೆಸಿಕೊಂಡೇ ಇದೆ. ಅದಕ್ಕೇ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದರೂ ಅದನ್ನು ಪ್ರಕಟಿಸುವ ಗೋಜಿಗೇ ಹೋಗಿಲ್ಲ. 'ಇನ್ನೆಷ್ಟು ದಿನ, ಹೋಗುವವರು ನಾಲ್ಕೈದು ದಿನದಲ್ಲಿ ಖಾಲಿ ಆಗುತ್ತಾರೆ. ನಂತರ ನಮ್ಮದೇ ರಣತಂತ್ರ' ಎಂದು ಬಿಜೆಪಿ ಸಭೆಗಳ ನಾಟಕವಾಡುತ್ತಿದೆ.
ವಿಧಾನಸಭೆ ಚುನಾವಣೆಯ ಮತದಾನದವರೆಗೆ ಕೆಜೆಪಿ ಹಾಗೂ ಬಿಜೆಪಿ ನಡುವೆ ಇಂತಹ ಅದೆಷ್ಟು ನಾಟಕಗಳ ಅಂಕ ಅನಾವರಣಗೊಳ್ಳುತ್ತದೋ? ಅದನ್ನೆಲ್ಲ ಕಾದು ನೋಡುವ ಅವಕಾಶ ಮತದಾರರಿಗಂತೂ ಇದ್ದೇ ಇದೆ. ಅಲ್ಲವೇ?
-ಕೆರೆ ಮಂಜುನಾಥ್