ಪುತ್ರನ ಪರ ಬ್ಯಾಟಿಂಗ್‌ಗೆ ಇಳಿದ ದೇವೇಗೌಡ

Updated on: 

ಕ.ಪ್ರ. ವಾರ್ತೆ ರಾಮನಗರ ಮಾ.27-
ನಗರಸಭೆ ಚುನಾವಣೆ ಸೋಲಿನಿಂದ ಎಚ್ಚೆತ್ತಿರುವ ದಳಪತಿಗಳು ರಾಮನಗರದತ್ತ ಗಮನ ಕೇಂದ್ರೀಕರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಪ್ರವಾಸಕ್ಕೆ ತೆರಳುವ ಮುನ್ನ ಎರಡು ದಿನ ಸ್ವಕ್ಷೇತ್ರದಲ್ಲಿ ಠಿಕಾಣಿಗೆ ನಿರ್ಧರಿಸಿದ್ದಾರೆ. ಏತನ್ಮಧ್ಯೆ, ಪುತ್ರನ ಪರ ಖುದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬ್ಯಾಟಿಂಗ್‌ಗೆ ಇಳಿದಿದ್ದಾರೆ.
ಕುಮಾರಸ್ವಾಮಿ ನೇತೃತ್ವದ ಪಡೆ ಮಾ.28 ಮತ್ತು 29ರಂದು ರಾಮನಗರ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಗ್ರಾಮ ಸಂದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ. ಕುಮಾರಸ್ವಾಮಿಗಿಂತ ಹತ್ತು ವರ್ಷ ಮುಂಚೆ ಈ ಕ್ಷೇತ್ರ ಪ್ರತಿನಿಧಿಸಿದ್ದ ದೇವೇಗೌಡ ಅವರು ನಗರದಲ್ಲಿ ಬುಧವಾರ ಕಾರ್ಯಕರ್ತರ ತುರ್ತು ಸಭೆ ನಡೆಸಿ ರಣತಂತ್ರದ ಪಾಠ ಹೇಳಿಕೊಟ್ಟಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಿದ್ದೇ ಆದರೆ ನಮ್ಮ ಭಾಗದ ಏತ ನೀರಾವರಿ ಯೋಜನೆಗಳಿಗೆ ಮೊದಲು ಕಲ್ಲು ಬೀಳುತ್ತದೆ. ಹೊಸ ಯೋಜನೆಗಳ ಅನುಷ್ಠಾನವೂ ಆಗದು. ಕಡೆಗೆ, ಕಾವೇರಿ ಆಶ್ರಿತ ನಗರ, ಪಟ್ಟಣಗಳಿಗೆ ಕುಡಿಯುವ ನೀರಿನ ಪೂರೈಕೆ ಸ್ಥಗಿತದ ಆತಂಕ ಕೂಡ ನಮ್ಮನ್ನು ಕಾಡುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರ ಕನ್ನಡಿಗನೂ ಎಚ್ಚೆತ್ತುಕೊಳ್ಳಬೇಕು ಎಂದರು.
ಕಾವೇರಿ ನ್ಯಾಯಾಧೀಕರಣದ ಅಂತಿಮ ಆದೇಶದ ಅಧಿಸೂಚನೆ ಹೊರ ಬೀಳುವುದರ ವಿರುದ್ಧ ಕೇಂದ್ರದ ಯುಪಿಎ ಸರ್ಕಾರದಲ್ಲಿರುವ ರಾಜ್ಯ ಸಚಿವರು, ಬಿಜೆಪಿ ಸರ್ಕಾರ ಸೂಕ್ತ ಹೋರಾಟ ನಡೆಸಿಲ್ಲ. ಕರ್ನಾಟಕಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಉಭಯ ರಾಷ್ಟ್ರೀಯ ಪಕ್ಷಗಳಿಂದ ಘೋರ ಅನ್ಯಾಯವಾಗಿದೆ ಎಂದರು.

'ಕನ್ನಡಪ್ರಭ'ಕ್ಕೆ ಗೌಡರ ಮೆಚ್ಚುಗೆ
ಕಾವೇರಿ ವಿಷಯವನ್ನು ಎಳೆ ಎಳೆಯಾಗಿ ಬಿಡಿಸಿಡುವ ಮೂಲಕ ರಾಜ್ಯದ ಜನತೆಯ ಕಣ್ಣು ತೆರೆಸುವಲ್ಲಿ 'ಕನ್ನಡಪ್ರಭ' ಪತ್ರಿಕೆ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಜಲ ವಿವಾದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ, ಅದರ ವಿರುದ್ಧದ ಹೋರಾಟಕ್ಕೂ ಬೆಂಬಲ ನೀಡಿದೆ ಎಂದು ಪ್ರಶಂಸಿಸಿದರು. ಕಾವೇರಿ ವಿಷಯದಲ್ಲಿ ನಾವು ಸ್ವಾರ್ಥ ಸಾಧನೆಗೆ ಹೋದವರಲ್ಲ. ರಾಜ್ಯಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಧಾನಿ, ಕೇಂದ್ರ ಜಲ ಸಂಪನ್ಮೂಲ ಸಚಿವ, ರಾಜ್ಯದ ಮುಖ್ಯಮಂತ್ರಿಗಳನ್ನು ಖುದ್ದು ಭೇಟಿಯಾಗಿ ಹೋರಾಟ ನಡೆಸಿದ್ದೇವೆ. ಹಲವು ಮಾಧ್ಯಮಗಳಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ ಎಂದು ವಿಷಾದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com