ಕ.ಪ್ರ. ವಾರ್ತೆ ಬೀದರ್ ಮಾ.26-
ಜಾತಿ ಲೆಕ್ಕಾಚಾರದಿಂದಾಗುವ ಮತ ವಿಭಜನೆಯ ಮುನ್ಸೂಚನೆ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕೆಜೆಪಿಗೆ ದುಸ್ವಪ್ನವಾಗಿ ಕಾಡುತ್ತಿದ್ದರೆ, ಇಬ್ಬರ ಜಗಳ ಮೂರನೇಯವನಿಗೆ ಲಾಭ ಎಂಬಂತೆ ಕಾಂಗ್ರೆಸ್, ಜೆಡಿಎಸ್ ಲಾಭಕ್ಕಾಗಿ ಹವಣಿಸುತ್ತಿವೆ.
ಜಿಲ್ಲೆಯಲ್ಲಿ ಬೀದರ್, ಬೀದರ್ ದಕ್ಷಿಣ, ಭಾಲ್ಕಿ, ಔರಾದ್, ಹುಮನಾಬಾದ್ ಮತ್ತು ಬಸವಕಲ್ಯಾಣ ಸೇರಿ ಒಟ್ಟು 6 ವಿಧಾನಸಭಾ ಕ್ಷೇತ್ರಗಳಿವೆ. ಬಿಜೆಪಿಗೆ ಸೆಡ್ಡು ಹೊಡೆದಿರುವ ಕೆಜೆಪಿ 3ನೇ ಬಹುಸಂಖ್ಯಾತ ಲಿಂಗಾಯತ ಮತದಾರರ ಮೇಲೆ ಕಣ್ಣಿಟ್ಟಿದೆ. ಕಾಂಗ್ರೆಸ್, ಜೆಡಿಎಸ್ ಬಹುಸಂಖ್ಯಾತ ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರ ಮತ ಲೆಕ್ಕಾಚಾರದಲ್ಲಿ ತೊಡಗಿವೆ. ಬೀದರ್ ವಿಧಾನಸಭಾ ಕ್ಷೇತ್ರದಿಂದ ಹಾಲಿ ಕಾಂಗ್ರೆಸ್ ಶಾಸಕ ರಹೀಮ್ ಖಾನ್ ಸ್ಪರ್ಧೆಗಿಳಿದರೆ, ಬಿಜೆಪಿ ತೊರೆದ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಕೆಜೆಪಿ ಅಭ್ಯರ್ಥಿ. ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಘೋಷಣೆ ಆಗಿಲ್ಲವಾದ್ರೂ ಬಿಜೆಪಿಯ ಮತ ಬ್ಯಾಂಕ್ ಹೋಳಾದ್ರೆ ಕಾಂಗ್ರೆಸ್ಗೆ ಲಾಭ ಎಂಬ ಮಾತುಗಳಿವೆ.
ಜೆಡಿಎಸ್ಗೆ ಲಾಭ: ಬೀದರ್ ದಕ್ಷಿಣ ಕ್ಷೇತ್ರದಿಂದ ಶಾಸಕ ಜೆಡಿಎಸ್ನ ಬಂಡೆಪ್ಪ ಖಾಶೆಂಪೂರ್, ಕೆಜೆಪಿಯಿಂದ ಶೈಲೇಂದ್ರ ಬೆಲ್ದಾಳೆ ಅಭ್ಯರ್ಥಿ. ಕಾಂಗ್ರೆಸ್ನಿಂದ ಮೀನಾಕ್ಷಿ ಸಂಗ್ರಾಮ್ ಅಥವಾ ನೈಸ್ ಮುಖ್ಯಸ್ಥ ಅಶೋಕ ಖೇಣಿ (ಮಕ್ಕಳ ಪಕ್ಷ ಸ್ಥಾಪಿಸಿರುವ ಖೇಣಿ ಕಾಂಗ್ರೆಸ್ಗೆ ಹಾರುವ ಮಾತುಗಳು ಕೇಳಿ ಬಂದಿವೆ) ಕಣಕ್ಕಿಳಿಯಬಹುದು. ಖೇಣಿ ಕಣಕ್ಕಿಳಿಯದಿದ್ದರೆ ಬಿಜೆಪಿಯಿಂದ ಸಂಜಯ ಖೇಣಿ ಅಖಾಡಕ್ಕೆ ಇಳಿಯೋದು ಖಚಿತ. ಇಲ್ಲಿಯೂ ಲಿಂಗಾಯತ ಮತಗಳು ಹಂಚಿ ಹೋದಲ್ಲಿ ಜೆಡಿಎಸ್ಗೆ ಲಾಭ. ಹುಮನಾಬಾದ್ನಲ್ಲಿ ಜೆಡಿಎಸ್ನಿಂದ ಮಾಜಿ ಸಚಿವ ಮಿರಾಜುದ್ದೀನ್ ಪಟೇಲ್ ಸಹೋದರ ನಸೀಮುದ್ದೀನ್ ಪಟೇಲ್, ಕಾಂಗ್ರೆಸ್ನ ಹಾಲಿ ಶಾಸಕ ರಾಜಶೇಖರ ಪಾಟೀಲ್ ಪ್ರಮುಖ ಹುರಿಯಾಳುಗಳು. ಕೆಜೆಪಿಗೆ ಮೀರ್ ಅಶ್ರಫ್ ಅಲಿ ಅಭ್ಯರ್ಥಿ.
ಬದಲಾಗುವ ಚುನಾವಣಾ ರಂಗು: ಭಾಲ್ಕಿಯಲ್ಲಿ ಕಾಂಗ್ರೆಸ್ನ ಹಾಲಿ ಶಾಸಕ ಈಶ್ವರ ಖಂಡ್ರೆ, ಬಿಜೆಪಿಯಿಂದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮತ್ತೊಮ್ಮೆ ಕಣಕ್ಕಿಳಿದರೆ, ಜಿಪಂ ಮಾಜಿ ಸದಸ್ಯ ಡಿ.ಕೆ ಸಿದ್ರಾಮ್ ಕೆಜೆಪಿ ಅಭ್ಯರ್ಥಿ. ಔರಾದ್ನಲ್ಲಿ ಹಾಲಿ ಶಾಸಕ ಪ್ರಭು ಚವ್ಹಾಣ್ ಮತ್ತೊಂದು ಬಾರಿ ಅದೃಷ್ಟ ಪರೀಕ್ಷೆ ಬಯಸಿದ್ದಾರೆ.
ಆದರೆ ಮಾಜಿ ಶಾಸಕ, ರಾಜೇಂದ್ರ ವರ್ಮಾ ದಲಿತ ಸಮುದಾಯದ ಮತಗಳನ್ನು ಮುಂದಿಟ್ಟುಕೊಂಡು ಟಿಕೆಟ್ ತಮಗೆ ಬೇಕು ಎಂಬ ಒತ್ತಡವನ್ನು ಮುಖಂಡರ ಮುಂದಿಟ್ಟಿದ್ದಾರೆ. ಇಲ್ಲಿ ಕಾಂಗ್ರೆಸ್, ಕೆಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿ ಘೋಷಿಸಿಲ್ಲವಾದರೂ ವರ್ಮಾಗೆ ಟಿಕೆಟ್ ಸಿಗದಿದ್ದಲ್ಲಿ ಕೆಜೆಪಿಗೆ ಹಾರಿದ್ದೆಯಾದಲ್ಲಿ ಆಶ್ಚರ್ಯವಿಲ್ಲ. ಬಸವಕಲ್ಯಾಣದಲ್ಲಿ ಹಾಲಿ ಶಾಸಕ ಬಸವರಾಜ ಪಾಟೀಲ್ ಅಟ್ಟೂರ್ ಕೆಜೆಪಿಯಿಂದ ಸ್ಪರ್ಧಿಸುತ್ತಿದ್ದರೆ, ಜೆಡಿಎಸ್ನಿಂದ ಮಲ್ಲಿಕಾರ್ಜುನ ಖೂಬಾ ಮತ್ತು ಬಿಎಸ್ಆರ್ ಪಕ್ಷದ ಮಾರುತಿರಾವ್ ಮೂಳೆ ಪ್ರಬಲ ಪೈಪೋಟಿ ನೀಡಬಹುದು. ಬಿಜೆಪಿಯ ಟಿಕೆಟ್ಗಾಗಿ ಪ್ರಮುಖ ದಾವೇದಾರರು ಇನ್ನೂ ಮುಂದೆ ಬಾರದಿರುವದು ವಿಶೇಷ.
- ಅಪ್ಪಾರಾವ್ ಸೌದಿ