ಗುಲ್ಬರ್ಗದಲ್ಲಿ ಯಾರ ಚರಗ?

ಗುಲ್ಬರ್ಗ ಜಿಲ್ಲೆಯ 9 ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ, 3ರಲ್ಲಿ ಕಾಂಗ್ರೆಸ್, 2ರಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಈ ಬಾರಿ ಕೆಜೆಪಿ ರಂಗ ಪ್ರವೇಶದಿಂದ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಗುವ ಸಾದ್ಯತೆ ಇದೆ. ಅದೆಲ್ಲ ಏನು ಎಂದು ಅರಿಯಬೇಕಾದರೆ ಇದನ್ನು ಓದಿ...

ಅಫಜಲ್ಪುರಕ್ಕೆ ಯಾರು 'ಮಾಲೀಕ'ಯ್ಯ?
ಅಫಜಲ್ಪುರ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ಮಾಲೀಕಯ್ಯ ಗುತ್ತೇದಾರ. ಈ ಬಾರಿಯೂ ಅವರೇ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಿಂದ ಮಲ್ಲಿಕಾರ್ಜುನ ನಿಂಗದಳ್ಳಿ, ಅಶೋಕ ಬಗಲಿ, ಚಂದಮ್ಮ ಪಾಟೀಲ್, ಅವ್ವಣ್ಣ ಮ್ಯಾಕೇರಿ, ದಿಲೀಪ್ ಪಾಟೀಲ್ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ವಿಠ್ಠಲ್ ಹೇರೂರ್ ಸ್ಪರ್ಧಿಸುವ ಸಾಧ್ಯತೆ ಇದೆ. ಜೆಡಿಎಸ್‌ನಿಂದ ಗೋವಿಂದ ಭಟ್ ಹಾವನೂರ ಹೆಸರು ಕೇಳಿ ಬರುತ್ತಿದೆ. ಕೆಜೆಪಿಯಿಂದ ಕಳೆದ ಬಾರಿ ಬಿಜೆಪಿಯಿಂದ ಸೋತಿದ್ದ ಎಂ.ವೈ. ಪಾಟೀಲ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಮಾಲೀಕಯ್ಯ ಗುತ್ತೇದಾರ್ ವೈಯಕ್ತಿಕ ವರ್ಚಸ್ಸು ಹೊಂದಿದ್ದು ಪ್ಲಸ್ ಪಾಯಿಂಟ್. ಬಿಜೆಪಿಯಲ್ಲಿ ಅಭ್ಯರ್ಥಿಗಳ ಪಟ್ಟಿ ದೊಡ್ಡದಿದ್ದರೂ ಗೆಲವು ತಂದು ಕೊಡುವ ಅಭ್ಯರ್ಥಿಗಳ ಹುಡುಕಾಟ ಭರದಿಂದ ನಡೆದಿದೆ.

ದಕ್ಷಿಣದಲ್ಲಿ ಕೇಳುತಿದೆ 'ಅರುಣಾ'ರಾಗ
ಗುಲ್ಬರ್ಗ ದಕ್ಷಿಣ ಕ್ಷೇತ್ರದ ಹಾಲಿ ಶಾಸಕಿ ಜೆಡಿಎಸ್‌ನ ಅರುಣಾ ಪಾಟೀಲ್ ರೇವೂರ್. 2008ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಪತಿ ಚಂದ್ರಶೇಖರ ಪಾಟೀಲ್ ರೇವೂರ್ ನಿಧನದಿಂದ ತೆರವಾದ ಸ್ಥಾನಕ್ಕೆ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಅರುಣಾ ರೇವೂರ್ ಈ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸುವ ಬಗ್ಗೆ ನಿರ್ಧಾರವಾಗಿಲ್ಲ. ಕೆಜೆಪಿ ಸೇರುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಬಿಜೆಪಿಯಿಂದ ಶಶೀಲ್ ನಮೋಶಿ, ಕೆಜೆಪಿಯಿಂದ ಸತೀಶ ಗುತ್ತೇದಾರ್, ಸುಭಾಷ ಬಿರಾದಾರ್ ಹೆಸರು ಕೇಳಿ ಬರುತ್ತಿವೆ. ಕಾಂಗ್ರೆಸ್‌ನಿಂದ ಉದ್ಯಮಿ ಕೃಷ್ಣಾಜಿ ಕುಲ್ಕರ್ಣಿ, ಮಾಜಿ ಸಿಎಂ ವಿರೇಂದ್ರ ಪಾಟೀಲರ ಪುತ್ರ ಕೈಲಾಸ ಪಾಟೀಲ್, ಡಾ. ವಿಜಯ ಕಲ್ಮಣಕರ್ ಆಕಾಂಕ್ಷಿಗಳು. ಹೈ.ಕ. ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ್ ಹೆಸರು ಕೂಡ ಕೇಳಿ ಬರುತ್ತಿದೆ.

ಚಿಂಚೋಳಿ: ರಾಜಕೀಯ ಬಿರುಗಾಳಿ
ಚಿಂಚೋಳಿ ಮೀಸಲು ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಸುನೀಲ್ ವಲ್ಯಾಪುರೆ. ಈಗಾಗಲೇ ಬಿಜೆಪಿಗೆ ಗುಡ್‌ಬೈ ಹೇಳಿ ಕೆಜೆಪಿ ಸೇರಿ ಸ್ಪರ್ಧೆಗೆ ಅಣಿಯಾಗಿದ್ದಾರೆ. ಹೀಗಾಗಿ ಬಿಜೆಪಿಯಿಂದ ರಮೇಶ ಯಾಕಾಪೂರ, ಮೋತಿರಾಮ ನಾಯಕ ಹೆಸರು ಕೇಳಿ ಬರುತ್ತಿವೆ. ಕಾಂಗ್ರೆಸ್‌ನಿಂದ ಕಳೆದ ಬಾರಿ ಸೋತಿದ್ದ ಬಾಬುರಾವ್ ಚವ್ಹಾಣ, ಡಾ. ಉಮೇಶ ಜಾಧವ, ಭೀಮರಾವ ತೇಗಲತಿಪ್ಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಖರ್ಗೆ ಸ್ಪರ್ಧೆಯ ವದಂತಿಯೂ ಇದೆ. ಆದರೆ, ಇನ್ನೂ ಸ್ಪಷ್ಟವಾಗಿಲ್ಲ. ಜೆಡಿಎಸ್‌ನಿಂದ ಮಲ್ಲಿಕಾರ್ಜುನ ಗಾಜರೆ, ಗೋಪಾಲರಾವ ಕಟ್ಟಿಮನಿ, ಸುಭಾಷ ರಾಠೋಡ ಟಿಕೆಟ್‌ಗಾಗಿ ಹವಣಿಸುತ್ತಿದ್ದಾರೆ. ಬಿಎಸ್‌ಆರ್ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಒಂದು ವೇಳೆ ಖರ್ಗೆ 'ರಾಜ್ಯ'ಕಾರಣಕ್ಕೆ ಮರಳಿದರೆ ಉಳಿದ ಆಕಾಂಕ್ಷಿಗಳು ಹಿಂದೆ ಸರಿಯುವುದು ಗ್ಯಾರಂಟಿ.

ಈ ಬಾರಿಯಾರತ್ತ 'ಚಿತ್ತಾ'ಪುರ?
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸತತ 9 ಬಾರಿ ಗೆಲವು ತಂದು ಕೊಟ್ಟ ಚಿತ್ತಾಪುರ ಕ್ಷೇತ್ರ ಭದ್ರಕೋಟೆಯಾಗಿತ್ತು. ಆದರೆ, ಕಳೆದ ಬಾರಿ ಬಿಜೆಪಿಯ ವಾಲ್ಮೀಕಿ ನಾಯಕ ಗೆಲವು ಸಾಧಿಸಿ ಅಚ್ಚರಿ ಮೂಡಿಸಿದ್ದರು. ಆದರೆ, ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತವಾಗಿಲ್ಲ. ಕೆಜೆಪಿ ಸೇರಿದರೆ ಅವರೇ ಹುರಿಯಾಳು. ಹೀಗಾಗಿ ಬಿಜೆಪಿಯಿಂದ ರವಿ ಚವ್ವಾಣ, ಶಂಕರ ಚವ್ವಾಣ, ಧರ್ಮಣ್ಣ ಇಟಗಾ, ದೇವೆಂದ್ರಪ್ಪ ಕರದಾಳ ಹೆಸರು ಕೇಳಿ ಬರುತ್ತಿವೆ. ಕೆಜೆಪಿಯಲ್ಲೂ ವಿನೋದ ಕೆಬಿ ಟಿಕೆಟ್‌ಗಾಗಿ ಓಡಾಡುತ್ತಿದ್ದಾರೆ. ಕಾಂಗ್ರೆಸ್‌ನಿಂದ ಕಳೆದ ಬಾರಿ ಸೋತಿದ್ದ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಸ್ಪರ್ಧೆ ಖಚಿತವಾಗಿದ್ದರೂ ಸಿ. ಗುರುನಾಥ ಕೂಡ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಬಸವರಾಜ ಬೆಣ್ಣೂರಕರ, ಬಿಎಸ್‌ಅರ್‌ನಿಂದ ರಾಜು ಮುಕ್ಕಣ್ಣ ಸ್ಪರ್ಧಿಸುವ ಸಾಧ್ಯತೆ ಇದೆ.

ಸೇಡಂನಲ್ಲಿ ಚುನಾವಣಾ ಗರಂ
ಸಿಮೆಂಟ್ ನಗರ ಎಂದೇ ಖ್ಯಾತವಾಗಿರುವ ಸೇಡಂ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ಡಾ. ಶರಣಪ್ರಕಾಶ್ ಪಾಟೀಲ್. ಈ ಬಾರಿಯೂ ಕಾಂಗ್ರೆಸ್‌ನಿಂದ ಅವರೇ ಹುರಿಯಾಳು. ಬಿಜೆಪಿಯಿಂದ ಕಳೆದ ಬಾರಿ ಸೋತಿದ್ದ ರಾಜಕುಮಾರ್ ಪಾಟೀಲ್ ತೇಲ್ಕೂರ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್‌ನಿಂದ ಮಾತೃ ಪಕ್ಷಕ್ಕೆ ಮರಳಿರುವ ಮಾಜಿ ಉಪಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಮುಕ್ರಂಖಾನ್, ಉದ್ಯಮಿ ನರೇಶ್ ಮಲಕೂಡ ಹಾಗೂ ಕಾಂಗ್ರೆಸ್‌ನಿಂದ ಬಂದಿರುವ ಸತೀಶ ರೆಡ್ಡಿ ಹೆಸರು ಕೇಳಿ ಬರುತ್ತಿವೆ. ಕೆಜೆಪಿಯಿಂದ ವೈಜನಾಥ ಪಾಟೀಲ್ ಪುತ್ರ ಡಾ.ವಿಕ್ರಂ ಪಾಟೀಲ್ ಹೆಸರು ಕೇಳಿ ಬರುತ್ತಿದೆ. ಬಿಎಸ್‌ಆರ್ ಅಭ್ಯರ್ಥಿ ಹುಡುಕಾಟದಲ್ಲಿದೆ. ಪ್ರಮುಖ ಪಕ್ಷಗಳಲ್ಲಿ ಟಿಕೆಟ್ ಸಿಗದ ಅತೃಪ್ತರನ್ನು ಸೆಳೆಯಲು ತಂತ್ರ ರೂಪಿಸುತ್ತಿದೆ.

ಗ್ರಾಮೀಣದಲ್ಲಿ ಬೆಳಮಗಿ ಜಂಗಿ ಕುಸ್ತಿ
ಗುಲ್ಬರ್ಗ ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ರೇವುನಾಯಕ ಬೆಳಮಗಿ. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತವಾಗಿಲ್ಲ. ಒಂದು ವೇಳೆ ಕೆಜೆಪಿಗೆ ಹೋದರೆ ಅವರೇ ಆ ಪಕ್ಷದ ಅಭ್ಯರ್ಥಿ. ಬೆಳಮಗಿ ಅವರ ಪುತ್ರ ಗಣೇಶ್ ಅವರನ್ನು ಕಣಕ್ಕಿಳಿಸುವ ಕೆಲಸವೂ ನಡೆದಿದೆ. ಆದರೆ, ಯಾವ ಪಕ್ಷವೆಂದು ಇನ್ನೂ ನಿರ್ಧರಿತವಾಗಿಲ್ಲ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಜಿ ರಾಮಕೃಷ್ಣ, ಚಂದ್ರಿಕಾ ಪರಮೇಶ್ವರ, ಅಂಬಾರಾಯ ಅಷ್ಟಗಿ ಹೆಸರು ಕೇಳಿ ಬರುತ್ತಿವೆ. ಜೆಡಿಎಸ್‌ನಿಂದ ಡಿ.ಜಿ. ಸಾಗರ, ಚಂದ್ರಶೇಖರ ಬಬಲಾದ, ಸುರೇಶ ಭರಣಿ ಹೆಸರು ಚರ್ಚೆಯಲ್ಲಿವೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಬಾಬು ಹೊನ್ನಾ ನಾಯಕ ಸ್ಪರ್ಧೆ ಖಚಿತವಾಗಿದೆ. ಒಂದು ವೇಳೆ ಬೆಳಮಗಿ ಕೆಜೆಪಿ ಸೇರಿದರೆ ಬಿಜೆಪಿ ಪ್ರಬಲ ಅಭ್ಯರ್ಥಿ ಹುಡುಕಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಲಿದೆ.

ಜೇವರ್ಗಿಯಲ್ಲಿ ಯಾರಿಗೆ ಕುರ್ಚಿ?
ಮೂರು ದಶಕಗಳ ಕಾಲ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜೇವರ್ಗಿ ಕ್ಷೇತ್ರದಲ್ಲಿ ಕಳೆದ ಬಾರಿ ಧರಂಸಿಂಗ್ ಸೋಲುಂಡಿದ್ದು ಇತಿಹಾಸ. ಹಾಲಿ ಶಾಸಕ ಬಿಜೆಪಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ. ಈ ಬಾರಿಯೂ ಅವರೇ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಧರಂಸಿಂಗ್ ಪುತ್ರ ಡಾ.ಅಜಯ್ ಸಿಂಗ್ ಸ್ಪರ್ಧಿಸುವುದು ಬಹುತೇಕ ಖಚಿತ. ಜೆಡಿಎಸ್‌ನಲ್ಲಿ ಕೇದಾರಲಿಂಗಯ್ಯ ಹಿರೇಮಠ, ಅಶೋಕ ಸಾಹು ಗೋಗಿ, ಹುಸೇನ್ ಪಟೇಲ ಇಜೇರಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಬೈಲಪ್ಪ ನೆಲೋಗಿ, ಕೆಜೆಪಿಯಿಂದ ಸುರೇಶ ಸಜ್ಜನ ಸ್ಪರ್ಧಿಸುವ ಸಾಧ್ಯತೆ ಇದೆ. ಧರಂಸಿಂಗ್ ಸೋಲಿನ ನಂತರ ಕಾಂಗ್ರೆಸ್ ಕೊಂಚ ಕಳೆಗುಂದಿದ್ದು ಅದನ್ನು ಹೋಗಲಾಡಿಸಲು ಅವರ ಪುತ್ರ ಅಜಯ್ ಕಸರತ್ತು ನಡೆಸಿದ್ದಾರೆ. ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದಾರೆ.

ಆಳಂದದಲ್ಲಿ ಯಾರಿಗೆ ಆನಂದ?
ಆಳಂದ ಕ್ಷೇತ್ರದ ಹಾಲಿ ಶಾಸಕ ಜೆಡಿಎಸ್‌ನ ಸುಭಾಷ ಗುತ್ತೇದಾರ್. ಈ ಬಾರಿಯೂ ಜೆಡಿಎಸ್‌ನಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಬಿ.ಆರ್. ಪಾಟೀಲ್ ಕಾಂಗ್ರೆಸ್ ತೊರೆದು ಕೆಜೆಪಿ ಸೇರಿದ್ದಾರೆ. ಹೀಗಾಗಿ ಈ ಬಾರಿ ಕೆಜೆಪಿಯಿಂದ ಅವರೇ ಸ್ಪರ್ಧಿಸುವ ಸಾಧ್ಯತೆ ಇದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದ್ದಾರೆ.  ಬಿಜೆಪಿಯಿಂದ ಚಂದ್ರಶೇಖರ ಹಿರೇಮಠ ಹೆಸರು ಕೇಳಿ ಬರುತ್ತಿದೆ. ಆದರೆ, ಇನ್ನೂ ಪಕ್ಕಾ ಆಗಿಲ್ಲ. ಅಲ್ಲದೇ ಇವರು ಬಿಎಸ್‌ವೈ ಆಪ್ತರಾಗಿರುವುದರಿಂದ ಕೆಜೆಪಿ ಸೇರಿದರೂ ಅಶ್ಚರ್ಯವಿಲ್ಲ. ಒಂದು ವೇಳೆ ಹಿರೇಮಠ ಕೆಜೆಪಿ ಸೇರಿದರೆ ಅಲ್ಲೂ ಟಿಕೆಟ್‌ಗಾಗಿ ಪೈಪೋಟಿ ನಡೆಯಲಿದೆ. ಕಾಂಗ್ರೆಸ್‌ನಿಂದ ಶೇಗಜಿ, ಸೂರ್ಯಕಾಂತ ಕೋರಳ್ಳಿ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟದಲ್ಲಿದೆ.

ಗೆಲವಿನ 'ಉತ್ತರ'ಕ್ಕಾಗಿ ತಡಕಾಟ
ಗುಲ್ಬರ್ಗ ಉತ್ತರ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ಖಮರುಲ್ ಇಸ್ಲಾಂ. ಈ ಬಾರಿಯೂ ಅವರೇ ಕಾಂಗ್ರೆಸ್ ಹುರಿಯಾಳು. ಕೆಜೆಪಿಯಿಂದ ಹಿರಿಯ ವಕೀಲ ಉಸ್ತಾದ್ ಸಾದತ್ ಹುಸೇನ್ ಪುತ್ರ ಉಸ್ತಾದ್ ನಾಸೀರ್ ಹುಸೇನ್ ಸ್ಪರ್ಧೆ ಖಚಿತವಾಗಿದೆ. ಇದರಿಂದ ಉದ್ಯಮಿ ಬಿ.ಜಿ. ಪಾಟೀಲ್ ಅಸಮಾಧಾನಗೊಂಡಿದ್ದು ಸಂತೈಸುವ ಕೆಲಸ ನಡೆದಿದೆ. ಬಿಜೆಪಿಯಿಂದ ವಿಜಯಕುಮಾರ ಹಳಕಟ್ಟಿ, ಜೆಡಿಎಸ್‌ನಿಂದ ಮಾಜಿ ಮೇಯರ್ ಅಷ್ಪಾಕ್ ಚುಲಬುಲ್, ಮಿರ್ಜಾ ಕಾಸೀಂ ಬೇಗ್, ಜಾಫರ್ ಹೆಸರು ಚಾಲ್ತಿಯಲ್ಲಿವೆ. ಖಮರುಲ್ ಇಸ್ಲಾಂ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ಜತೆಗೆ ಕಾಂಗ್ರೆಸ್ ಎಂಬ ಪ್ರಬಲ ಪಕ್ಷದ ಚಿಹ್ನೆ ಬೇರೆ ಇದೆ. ಹೀಗಾಗಿ ಅವರಿಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಳ ಹುಡುಕಾಟ ಎಲ್ಲ ಪಕ್ಷಗಳಲ್ಲೂ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com