ಹಿರಿಯ ನಾಗರಿಕರಿಗೆ ಡಿ.6 ರಿಂದ ದಂತಭಾಗ್ಯ

ಉಚಿತ ಹಲ್ಲುಸೆಟ್ ನೀಡುವ ದಂತಭಾಗ್ಯ ...
ಸಿದ್ಧರಾಮಯ್ಯ
ಸಿದ್ಧರಾಮಯ್ಯ

ಬೆಂಗಳೂರು: ಹಿರಿಯ ನಾಗರಿಕರಿಗೆ ಉಚಿತ ಹಲ್ಲುಸೆಟ್ ನೀಡುವ ದಂತಭಾಗ್ಯ ಹಾಗೂ ಜಿಲ್ಲೆಗಳ ಒಂದು ತಾಲೂಕಿನಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯುವ ಯೋಜನೆಗೆ ಶನಿವಾರ ಚಾಲನೆ ದೊರೆಯಲಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಎರಡೂ ಯೋಜನೆಗಳಿಗೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಶನಿವಾರ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಂತಭಾಗ್ಯ ಯೋಜನೆಗಾಗಿ 52 ಖಾಸಗಿ ದಂತ ವೈದ್ಯಕೀಯ ಕಾಲೇಜುಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ವರ್ಷ 32 ಸಾವಿರ ಮಂದಿಗೆ ಹಲ್ಲುಸೆಟ್ ವಿತರಿಸುವ ಗುರಿ ಇದೆ. ರಾಜ್ಯದ 30 ಜಿಲ್ಲೆಗಳ ತಲಾ ಒಂದು ತಾಲೂಕಿನಲ್ಲಿ ರು. 28 ಲಕ್ಷ ವೆಚ್ಚದಲ್ಲಿ ಡಯಾಲಿಸಿಸ್ ಕೇಂದ್ರ ಪ್ರಾರಂಭವಾಗಲಿದ್ದು ಬಿಪಿಎಲ್ ಕುಟುಂಬದವರಿಗೆ ಉಚಿತ ಹಾಗೂ ಎಪಿಎಲ್ ಕುಟುಂಬದವರಿಗೆ 350 ರಿಂದ 400 ರುಪಾಯಿಗೆ ಡಯಾಲಿಸಿಸ್ ಸೇವೆ ದೊರೆಯಲಿದೆ. ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ದಂತ ಭಾಗ್ಯ  ಯೋಜನೆಯಲ್ಲಿ ಹಲ್ಲುಸೆಟ್ ಅಳವಡಿಕೆರು. 500ನೀಡಲಾಗುವುದು. ದಂತ ವೈದ್ಯಕೀಯ ಕಾಲೇಜು ಇಲ್ಲದ ಕಡೆ ಸರ್ಕಾರವೇ ಶಿಬಿರ ಆಯೋಜಿಸಿ ಹಲ್ಲುಸೆಟ್ ಅಳವಡಿಸಲಾಗುವುದು ಎಂದರು.

ದಕ್ಷಿಣ ಕನ್ನಡದ ಪುತ್ತೂರು, ಉಡುಪಿಯ ಕುಂದಾಪುರ, ಚಿಕ್ಕಮಗಳೂರಿನ ತರೀಕೆರೆ, ಚಿಕ್ಕಬಳ್ಳಾಪುರದ ಚಿಂತಾಮಣಿ, ಉತ್ತರ ಕನ್ನಡದ ದಾಂಡೇಲಿ, ಮೈಸೂರಿನ ಹುಣಸೂರಿನಲ್ಲಿ ಶನಿವಾರದಿಂದಲೇ ಡಯಾಲಿಸಿಸ್ ಕೇಂದ್ರಗಳು ಕಾರ್ಯ ನಿರ್ವಹಿಸಲಿದ್ದು, ಒಂದು ತಿಂಗಳಲ್ಲಿ ಎಲ್ಲ ಡಯಾಲಿಸಿಸ್ ಕೇಂದ್ರಗಳು ಕಾರ್ಯ ನಿರ್ವಹಿಸಬೇಕು ಎಂಬ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಗುತ್ತಿಗೆ ಆಧಾರದಲ್ಲಿ ನೇಮಕ
: ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಸ್ತ್ರೀರೋಗ  ತಜ್ಞರು ಹಾಗೂ ಅರವಳಿಕೆ ತಜ್ಞರನ್ನು ರು.1 ಲಕ್ಷ ಮಾಸಿಕ ಗೌರವಧನ ನೀಡಿ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ. ಮುಂದೆ ಕಣ್ಣು, ಕಿವಿ, ಮೂಗು ತಜ್ಞರನ್ನೂ ಇದೇ ಮಾದರಿಯಲ್ಲಿ ನೇಮಿಸಿಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ವೈದ್ಯರ ವಿರುದ್ಧ ಕ್ರಮ: ಈಗಾಗಲೇ ಶೇ.94ರಷ್ಟು ವೈದ್ಯರು ರಾಜಿನಾಮೆ ವಾಪಸ್ ಪಡೆದಿದ್ದಾರೆ. ಸರ್ಕಾರದ ವೆಚ್ಚದಲ್ಲಿ ಸ್ನಾತಕೋತ್ತರ ವೈದ್ಯ ಪದವಿ ಪೂರ್ಣಗೊಳಿಸಿ ಸೇವೆಗೆ  ಸೇರಿದ್ದ ಇಬ್ಬರು ರಾಜಿನಾಮೆ ಸಲ್ಲಿಸಿದ್ದಾರೆ. ಅವರು 10 ವರ್ಷ ಕಡ್ಡಾಯ ಸೇವೆ ಸಲ್ಲಿಸುತ್ತೇವೆ , ಇಲ್ಲದಿದ್ದರೆ ರು.25 ಲಕ್ಷ ದಂಡ ಪಾವತಿಸುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಹೀಗಾಗಿ, ವೇತನವಲ್ಲದೆ ತಲಾ ರು.25 ಲಕ್ಷ ದಂಡ ಪಾವತಿಸುತ್ತೀರೋ, ರಾಜಿನಾಮೆ ವಾಪಸ್ ಪಡೆದು 10 ವರ್ಷ ಸೇವೆ ಸಲ್ಲಿಸುತ್ತಿರೋ ಎಂಬುದನ್ನು ಸ್ಪಷ್ಟಪಡಿಸುವಂತೆ ಸೂಚಿಸಿ 15 ದಿನ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com