ಶಾಸಕರಿಗೆ ಎಚ್‌ಡಿಕೆ ಕುಮಾರಸ್ವಾಮಿ ಸ್ಪಂದಿಸುತ್ತಿಲ್ಲ: ಇಕ್ಬಾಲ್ ಅನ್ಸಾರಿ

ಇಕ್ಬಾಲ್ ಅನ್ಸಾರಿ (ಸಾಂದರ್ಭಿಕ ಚಿತ್ರ)
ಇಕ್ಬಾಲ್ ಅನ್ಸಾರಿ (ಸಾಂದರ್ಭಿಕ ಚಿತ್ರ)

ಕೊಪ್ಪಳ: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪಕ್ಷದ ಶಾಸಕರಿಗೆ ಸ್ಪಂದಿಸುತ್ತಿಲ್ಲ, ಅವರ ನೋವನ್ನು ಆಲಿಸುತ್ತಿಲ್ಲ ಎಂದು ಜೆಡಿಎಸ್‌ನ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಕಿಡಿಕಾರಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರು ಮೂರನೇ ಶಾಸಕ ಅನ್ಸಾರಿ. ಈ ಮೊದಲು ಜಮೀರ್ ಅಹಮದ್ ಹಾಗೂ ಬಸವರಾಜ ಹೊರಟ್ಟಿ ಪಕ್ಷದ ವರಿಷ್ಠರ ವಿರುದ್ಧ ಅತೃಪ್ತಿ ಹೊರಗೆಡವಿದ್ದರು. ಕೊಪ್ಪಳ ಸಮೀಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನ್ಸಾರಿ, ನಾಯಕರ ತಪ್ಪು ನಿರ್ಧಾರಗಳು ಪಕ್ಷಕ್ಕೆ ಸಂಕಷ್ಟ ತಂದಿದೆ ಎನ್ನುವ ಧಾಟಿಯಲ್ಲಿ ಮಾತನಾಡಿದರು.

ಸಮಸ್ಯೆ ಆಲಿಸುವುದಿಲ್ಲ: ವಿಧಾನ ಮಂಡಲ ಅಧಿವೇಶನಕ್ಕೆ ಹೋದಾಗ ಶಾಸಕರ ಯಾವ ಸಮಸ್ಯೆಯನ್ನೂ ಕುಮಾರಸ್ವಾಮಿ ಆಲಿಸುವುದಿಲ್ಲ. ಅವರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಪ್ರಶ್ನೆ ಮಾಡುವ ಗೋಜಿಗೂ ಹೋಗುವುದಿಲ್ಲ. ಅಷ್ಟೇ ಏಕೆ, ಜೆಡಿಎಸ್ ಶಾಸಕರನ್ನು ಸಿಎಂ ಬಳಿಗೆ ಕರೆದುಕೊಂಡು ಹೋಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ನೆರವಾಗುವ ಕಾಳಜಿಯೂ ಇಲ್ಲ. ನಾವೇ ನಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಿಕೊಳ್ಳಬೇಕು ಮತ್ತು ಅದಕ್ಕಾಗಿ ಸಿಎಂ ಮೊದಲಾದವರನ್ನು ಭೇಟಿಯಾಗಿ ಅನುದಾನ ತರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದರಿಂದ ನನ್ನ ಮೇಲೆ ಮುನಿಸಿಕೊಂಡವರಂತೆ ಸಂಪರ್ಕವನ್ನೇ ಮಾಡುತ್ತಿಲ್ಲ. ನಾವೇ ತಪ್ಪು ಮಾಡಿದ್ದೇವೆ ಎನ್ನುವಂತೆ ಮಾಡುತ್ತಿದ್ದಾರೆ. ಆದರೆ, ಅವರು ಕೋಮುವಾದಿ ಬಿಜೆಪಿಗೆ ಬೆಂಬಲ ನೀಡುತ್ತಾರೆ. ಆಗ ಯಾರನ್ನೂ ಕೇಳುವುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com