ಪ್ರತ್ಯೇಕ ರಾಜ್ಯ: ಒಡಕಿನ ಮಾತು ರಾಜಕೀಯ ಪ್ರೇರಿತ

ಪ್ರತ್ಯೇಕ ರಾಜ್ಯ ಕೇಳುವವರಿಗೆ ಕರ್ನಾಟಕ ಏಕೀಕರಣದ ಮಹತ್ವ ಗೊತ್ತಿಲ್ಲ. ಇದೆಲ್ಲವೂ ರಾಜಕೀಯ ಪ್ರೇರಿತ. ಸ್ವಾರ್ಥಕ್ಕಾಗಿ ನೀಡುತ್ತಿರುವ ಹೇಳಿಕೆ...
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ಪ್ರತ್ಯೇಕ ರಾಜ್ಯ ಕೇಳುವವರಿಗೆ ಕರ್ನಾಟಕ ಏಕೀಕರಣದ ಮಹತ್ವ ಗೊತ್ತಿಲ್ಲ. ಇದೆಲ್ಲವೂ ರಾಜಕೀಯ ಪ್ರೇರಿತ. ಸ್ವಾರ್ಥಕ್ಕಾಗಿ ನೀಡುತ್ತಿರುವ ಹೇಳಿಕೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಭಾನುವಾರ ಲಲಿತ್‍ಮಹಲ್ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತ್ಯೇಕ ರಾಜ್ಯ ಕೇಳುತ್ತಿರುವ ನಡಹಳ್ಳಿ ಇಷ್ಟು ದಿನ ಎಲ್ಲಿದ್ದರು? ಸಚಿವ ಸ್ಥಾನದ ಆಕಾಂಕ್ಷಿಗಳು ಏನೇ ಹೇಳಿಕೆ ನೀಡಬೇಕಿದ್ದರೂ ಪಕ್ಷದ ಒಳಗೆ ಮಾತನಾಡಬೇಕು. ಹೊರಗೆ ಅಲ್ಲ ಎಂಬುದನ್ನು ಪ್ರತಿಯೊಬ್ಪರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮೈಸೂರು ವಿಮಾನ ನಿಲ್ದಾಣದ ಬಳಿ ಕೆಳಸೇತುವೆ ನಿರ್ಮಿಸುವ ಸಂಬಂಧ ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಕೇಂದ್ರ ಇದಕ್ಕೆ ಒಪ್ಪಿಗೆ ನೀಡಿಲ್ಲ. ಸದ್ಯದಲ್ಲಿಯೇ ಈ ಸಮಸ್ಯೆನ್ನೂ ಇತ್ಯರ್ಥಪಡಿಸಲಾಗುವುದು. ಐಐಟಿಯನ್ನು ರಾಯಚೂರಿನಲ್ಲಿ ತೆರೆಯಬೇಕು ಎಂದು ಈ ಹಿಂದೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ತೀರ್ಮಾನಿಸಲಾಗಿತ್ತು. ಈಗ ಮತ್ತೆ ಹುಬ್ಬಳ್ಳಿ, ವಿಜಯಪುರ, ಮೈಸೂರು ಹೆಸರು ಕೇಳಿ ಬರುತ್ತಿದೆ. ಈ ಪೈಕಿ ಯಾವುದು ಸೂಕ್ತ ಸ್ಥಳ ಎಂದು ಗುರುತಿಸಲಾಗುತ್ತದೋ ಅಲ್ಲಿ ಐಐಟಿ ತೆರೆಯುವುದಾಗಿ ಎಂದರು.

ವೈಯಕ್ತಿಕ ಅಭಿಪ್ರಾಯ
ಮೈಸೂರು: ಪ್ರತ್ಯೇಕ ರಾಜ್ಯದ ಬಗ್ಗೆ ಆಡಳಿತ ಪಕ್ಷದ ಶಾಸಕರು ಪ್ರಸ್ತಾಪಿಸಿರುವುದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಪ್ರತ್ಯೇಕ ರಾಜ್ಯದ ಬೇಡಿಕೆ ಪ್ರಸ್ತಾವ ಸರಿಯಲ್ಲ ಎಂದು ಸಣ್ಣ ಕೈಗಾರಿಕಾ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರು ಕಾಂಗ್ರೆಸ್‍ನವರಾಗಿದ್ದರೂ ಅದು ಅವರ ವೈಯಕ್ತಿಕ ಹೇಳಿಕೆ. ಕೇವಲ ಒಬ್ಬರು, ಇಬ್ಬರು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಬಹುದು. ಆದರೆ, ರಾಜ್ಯ ಅಖಂಡ ಕರ್ನಾಟಕವಾಗಿಯೇ ಉಳಿಯಬೇಕು ಎಂಬುದು ಬಹುತೇಕರ ಬಯಕೆ. ಇದು ರಾಜ್ಯ ಸರ್ಕಾರದ ಉದ್ದೇಶವೂ ಆಗಿದೆ ಎಂದರು.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆಗಳನ್ನು ನೀಡಿದೆ. ಪ್ರತ್ಯೇಕ ರಾಜ್ಯದ ಬೇಡಿಕೆಯಲ್ಲಿ ಯಾವುದೇ ತಾತ್ವಿಕ ಹಾಗೂ ಜನಪರ ವಿಚಾರ ಇಲ್ಲ. ಇದು ಪಕ್ಷದ ಹೇಳಿಕೆ ಅಲ್ಲ ಹಾಗೂ ಉತ್ತರ ಕರ್ನಾಟಕ ಜನರ ಬೇಡಿಕೆಯೂ ಅಲ್ಲ. ಅಖಂಡ ಕರ್ನಾಟಕವಾಗಿದ್ದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ಗಡಿಪಾರು ಮಾಡಿ: ಪಾಪು
ಧಾರವಾಡ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎತ್ತುವರರನ್ನು ಗಡಿಪಾರು ಮಾಡಬೇಕೆಂದು ನಾಡೋಜ ಪಾಟೀಲ ಪುಟ್ಟಪ್ಪ ಆಗ್ರಹಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತ್ಯೇಕ ರಾಜ್ಯ ಬೇಕೆಂದು ಧ್ವನಿ ಎತ್ತಿದವರು ರಾಜ್ಯದಿಂದ ಹೊರಬರಬೇಕಾದಂತಹ ಸ್ಥಿತಿ ತಂದುಕೊಳ್ಳದಂತೆ ಇರಲಿ. ಸ್ವಾರ್ಥ ಸಾಧನೆಗಾಗಿ ರಾಜ್ಯದ ವಿಭಜನೆಯ ಚಿಂತನೆ ಹರಡುತ್ತಿರುವ ಉಮೇಶ ಕತ್ತಿ ಹಾಗೂ ಎ.ಎಸ್. ಪಾಟೀಲ ನಡಹಳ್ಳಿ ಅವರ ಹೇಳಿಕೆಗಳು ಅರ್ಥಹೀನ. ಹುಚ್ಚರಂತೆ ಈ ರೀತಿ ಹೇಳಿಕೆ ನೀಡಿದರೆ ರಾಜ್ಯ ವಿಭಜನೆ ಆಗದು. ಅದಕ್ಕೆ ಅವಕಾಶವನ್ನೂ ರಾಜ್ಯದ ಜನತೆ ನೀಡುವುದಿಲ್ಲ.

ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸದೇ ಹೋದರೆ ಗಡಿಪಾರು ಮಾಡಬೇಕಾಗುತ್ತದೆ ಎಂದು ಪಾಪು ಎಚ್ಚರಿಸಿದರು. ಅಭಿವೃದ್ಧಿ ಹೆಸರಿನಲ್ಲಿ ಪ್ರತ್ಯೇಕ ರಾಜ್ಯ ಕೇಳೋದು ಸೂಕ್ತವಲ್ಲ. ಹಲವು ವರ್ಷಗಳ ಕಾಲ ಶ್ರಮಪಟ್ಟು ಕಟ್ಟಿರುವ ಕರ್ನಾಟಕವನ್ನು ಒಡೆಯಲು ಯಾರಿಗೂ ಹಕ್ಕಿಲ್ಲ. ಅದರಲ್ಲೂ ಬೆಳಗಾವಿ ಗಡಿ ಭಾಗದ ಸಮಸ್ಯೆಗಳಿಗೆ ಒಂದು ದಿನವೂ ಧ್ವನಿ ಎತ್ತದ ಉಮೇಶ ಕತ್ತಿಗೆ ಯಾವ ನೈತಿಕತೆಯೂ ಇಲ್ಲ. ಪ್ರತ್ಯೇಕ ರಾಜ್ಯ ಭ್ರಮೆಯಿಂದ ಹೊರಬಂದರೆ ಉತ್ತಮ. ಇಲ್ಲವಾದರೆ ಆ ಭ್ರಮೆ ಬಿಡಿಸಲು ವಿದ್ಯಾವರ್ಧಕ ಸಂಘ ಸಿದ್ಧವಾಗ ಬೇಕಾಗುತ್ತದೆ. ರಾಜ್ಯ ಪ್ರತ್ಯೇಕತೆ ಬಗ್ಗೆ ಮಾತನಾಡುವರ ವಿರುದ್ಧ ವಿದ್ಯಾವರ್ಧಕ ಸಂಘದಿಂದಲೇ ಹೋರಾಟ ಮಾಡಲಾಗುವುದು ಎಂದರು.

ಗೋವಾದಲ್ಲಿ ಕನ್ನಡಿಗರನ್ನು ಒಕ್ಕಲೆಸಲು ಗೋವಾ ಸರ್ಕಾರ ಮುಂದಾಗಿದೆ. ಇದು ಸರಿಯಲ್ಲ. ಈ ನಿಟ್ಟಿನಲ್ಲಿ ಅಲ್ಲಿನ ಕನ್ನಡಿಗರ ಪೋಷಣೆಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಮುಂದಾಗಲಿದೆ. ರಾಜ್ಯ ಸರ್ಕಾರ ಕೂಡ ಗಮನ ನೀಡಬೇಕು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಅವರನ್ನು ನೇರವಾಗಿ ಭೇಟಿ ಮಾಡಿ ಗಮನ ಸೆಳೆಯಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com