ಮೇಕೆದಾಟು: ರಿವರ್ಸ್‍ ಗೇರ್‍ನಲ್ಲಿ ಸರ್ಕಾರ

ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯ ಸರ್ಕಾರ `ರಿವರ್ಸ್‍ಗೇರ್'ನಲ್ಲಿ ಹೊರಟಿದೆ ಎಂದು ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಬಸವರಾಜ ಬೊಮ್ಮಾಯಿ....
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯ ಸರ್ಕಾರ `ರಿವರ್ಸ್‍ಗೇರ್'ನಲ್ಲಿ ಹೊರಟಿದೆ ಎಂದು ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ಅಲ್ಲದೇ, ಈ ಹಿಂದೆ ಸಿದ್ಧವಾಗಿರುವ ಸಮಗ್ರ ಯೋಜನೆ ವರದಿಗೆ ಅಗತ್ಯಬಿದ್ದರೆ ಪರಿಷ್ಕರಿಸಿ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸುವಂತೆ ಸಲಹೆ ನೀಡಿದ್ದಾರೆ.

ಭಾನುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, `ಮೇಕೆದಾಟು ಯೋಜನೆ ಅನುಷ್ಠಾನ ವಿಚಾರದಲ್ಲಿ ನಮ್ಮ ಪಕ್ಷವು ಸರ್ಕಾರದ ಜತೆಗಿರುತ್ತದೆ. ಆದರೆ, ಸರ್ಕಾರ ಯೋಜನೆಯ ಅನುಷ್ಠಾನದ ವಿಚಾರದಲ್ಲಿ ಹೆಜ್ಜೆ ಹಿಂದಕ್ಕೆ ಇಟ್ಟು ತಡ ಮಾಡುವುದನ್ನು ಸಹಿಸುವುದಿಲ್ಲ' ಎಂದರು. ಯೋಜನೆ ಅನುಷ್ಠಾನಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳುವ ಜಲ ಸಂಪನ್ಮೂಲ ಸಚಿವರು, ಸಮಗ್ರ ಯೋಜನಾ ವರದಿಯೇ ಸಿದ್ಧವಾಗಿಲ್ಲ ಎಂದು ಇನ್ನೊಂದು ಕಡೆ ಹೇಳುತ್ತಾರೆ.

ಕೇಂದ್ರಕ್ಕೆ ನಿಯೋಗ ಕರೆದುಕೊಂಡುಹೋಗುವುದಾಗಿ ಸರ್ಕಾರ ಹೇಳುತ್ತಿದೆ, ವಾಸ್ತವವಾಗಿ ಕೇಂದ್ರಕ್ಕೆ ಪ್ರಸ್ತಾವವನ್ನೇ ಸಲ್ಲಿಸದೆ ಪ್ರಧಾನಿಗಳ ಬಳಿ ಹೋಗಿ ಏನೆಂದು ಮಾತನಾಡುತ್ತೀರಾ? ಎಂದು ತರಾಟೆಗೆ ತೆಗೆದುಕೊಂಡರು.

ಕರ್ನಾಟಕ ವಿದ್ಯುತ್ ನಿಗಮ 2012ರಲ್ಲಿ ಸಿದ್ಧಪಡಿಸಿರುವ ವಿಸ್ತೃತ ಯೋಜನಾ ವರದಿ (ಡಿಪಿಆರ್) ಬಳಸಿಕೊಂಡು ಅಗತ್ಯಬಿದ್ದರೆ ಅದನ್ನು ಪರಿಷ್ಕರಿಸಿ ಕೂಡಲೇ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ರಿಯಾಯಿತಿ ಪಡೆದಂತೆ ಈ ಯೋಜನೆಗೂ ಅನುಮತಿ ಪಡೆದುಕೊಳ್ಳಲು ಕ್ರಮಕ್ಕೆ ಮುಂದಾಗಬೇಕು. ನಂತರ ಅರಣ್ಯ ಇಲಾಖೆಯಿಂದ ಅನುಮತಿ ಪಡೆದುಕೊಂಡರೆ ಯೋಜನೆ ಆರಂಭಿಸಬಹುದು ಎಂದರು.

ವಸ್ತು ಸ್ಥಿತಿ ಬೇರೆಯದ್ದೇ ಇದೆ: ಜಲ ಸಂಪನ್ಮೂಲ ಸಚಿವರ ಮಾತುಗಳನ್ನು ಕೇಳಿದರೆ ನಾಳೆಯೇ ಯೋಜನೆಗೆ ಶಂಕುಸ್ಥಾಪನೆ ಆಗಿಬಿಡುತ್ತದೆ ಎಂಬಂತಿದೆ. ಆದರೆ, ವಸ್ತುಸ್ಥಿತಿಯೇ ಬೇರೆ ಇದೆ. ಡಿಪಿಆರ್ ಸಿದ್ಧಪಡಿಸಲು ಗ್ಲೋಬಲ್ ಟೆಂಡರ್ ಕರೆಯಲಾಗಿದೆ. ಇನ್ನು ಎಕ್ಸ್‍ಪ್ರೆಶನ್ ಆಫ್ ಇಂಟರೆಸ್ಟ್ ಏಪ್ರಿಲ್ 15ಕ್ಕೆ ಮುಗಿಯಬೇಕಾಗಿತ್ತು. ಇನ್ನೂ ಮುಗಿದಿಲ್ಲ. ಅಂದರೆ, ಇವೆಲ್ಲಾ ಪ್ರಕ್ರಿಯೆ ಮುಗಿದು ಡಿಪಿಆರ್ ಸಿದ್ದಪಡಿಸಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲು ಜನವರಿ ಒಳಗೆ ಸಾಧ್ಯವೇ ಇಲ್ಲ. ಹೀಗಾಗಿ 2012ರಲ್ಲಿ ಸಿದ್ಧವಾದ ಡಿಪಿಆರ್ ಅನ್ನೇ ಬಳಸಿಕೊಳ್ಳಬೇಕು. ಇನ್ನಷ್ಟು ತಡ ಮಾಡುವುದರಿಂದ ತಮಿಳುನಾಡಿಗೆ ಸಾಕಷ್ಟು ಅವಕಾಶ ಕೊಟ್ಟಂತಾಗುತ್ತದೆ. ಸಮಯ ವ್ಯರ್ಥ ಆಗುವ ಜತೆಗೆತಮಿಳುನಾಡಿಗೆ ತಗಾದೆ ತೆಗೆಯಲು, ಕಾನೂನಿನ ಅಡಚಣೆ ಮಾಡಲು, ರಾಜಕೀಯ ಒತ್ತಡ ಹೇರಲು ನಾವೇ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ರಾಜ್ಯದ ನಾಯಕ ವೀರಾವೇಶದ ಮಾತಿನಿಂದಲೇ ಎಚ್ಚೆತ್ತ ತಮಿಳುನಾಡಿನವರು ಕೇಂದ್ರಕ್ಕೆ ನಿಯೋಗ ಹೋಗಿದ್ದಾರೆ. ಇನ್ನು ಇಷ್ಟು ಸಮಯ ಕೊಟ್ಟರೆ ಸಾಕಷ್ಟು ಕಿತಾಪತಿ ತೆಗೆಯುತ್ತಾರೆ ಎಂದು ಅಭಿಪ್ರಾಯಪಟ್ಟರು.

2012ರಲ್ಲೇ ಡಿಪಿಆರ್ ರೆಡಿ!
ಮೇಕೆದಾಟು ಯೋಜನೆ ವಿಚಾರದಲ್ಲಿ ಸರ್ಕಾರ ಅನೇಕ ಸಂಗತಿಗಳನ್ನು ಬಹಿರಂಗಪಡಿಸಿಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದೆ. ಜಲಸಂಪನ್ಮೂಲ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಈ ಸಂಗತಿಗಳನ್ನು ಬಿಡಿಸಿಟ್ಟಿದ್ದಾರೆ.

ಮೇಕೆದಾಟು ಮತ್ತು ಶಿವನಸಮುದ್ರ ಈ ಎರಡೂ ಯೋಜನೆಗಳ ಮುಖಾಂತರ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶದಿಂದ ಮೊಟ್ಟ ಮೊದಲ ಬಾರಿಗೆ 1996ರಲ್ಲೇ ಕೆಪಿಸಿ ಯೋಜನೆ ಸಿದ್ಧಪಡಿಸಿತ್ತು.

ಈ ಮಧ್ಯೆ ಎನ್ ಎಚ್ ಸಿ (ನ್ಯಾಷನಲ್ ಹೈಡ್ರೋ ಪವರ್) ಮೇಕೆದಾಟು, ಶಿವನಸಮುದ್ರ ಸಮೇತವಾಗಿ 4 ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಪ್ರಸ್ತಾವ ಸಲ್ಲಿಸಿತ್ತು. ಈ ವಿದ್ಯುತ್ ಉತ್ಪಾದನೆ ತಮಿಳುನಾಡು, ಕರ್ನಾಟಕ ಮತ್ತು ಕೇಂದ್ರ ಸಮಾನವಾಗಿ ಹಂಚಿಕೊಳ್ಳುವ ಉದ್ದೇಶವಾಗಿತ್ತು. ತಮಿಳು ನಾಡು ಸರ್ಕಾರ ಒಪ್ಪದ್ದರಿಂದ ಈ ಪ್ರಸ್ತಾವ ಮುಂದುವರೆಯಲಿಲ್ಲ.

2009ರಲ್ಲಿ ಟ್ರಿಬ್ಯುಲ್ ಗೆ ಮಧ್ಯಂತರ ಅರ್ಜಿ ಸಲ್ಲಿಸಿರುವ ಕರ್ನಾಟಕವು ಮೇಕೆದಾಟು ಮತ್ತು ಶಿವ ಸಮುದ್ರ ಈ ಎರಡೂ ನಮ್ಮ ರಾಜ್ಯದ ಗಡಿ ಒಳಗೆ ಬರುತ್ತಿದ್ದು, ಕಾವೇರಿ ನೀರಿನ ಹಂಚಿಕೆ ತೀರ್ಮಾನವಾದಂತೆ ಈ ಎರಡೂ ಯೋಜನೆಗಳು ಕರ್ನಾಟಕ ರಾಜ್ಯವೇ ಕೈಗೆತ್ತಿಕೊಳ್ಳುವ ನಿರ್ಧಾರವನ್ನು ಸುಪ್ರಿಂ ಕೋರ್ಟ್ ಗೆ ತಿಳಿಸಿತ್ತು.

ಕೆಪಿಸಿ ಮೊದಲು ಸಿದ್ಧಪಡಿಸಿ ಯೋಜನೆಯಡಿಯಲ್ಲಿ 53.8 ಟಿಎಂಸಿ ನೀರನ್ನು ಸಂಗ್ರಹ ಮಾಡುವುದು ಗುರಿ ಇತ್ತು. ಈ ಅಣೆಕಟ್ಟು ಯೋಜನೆಯಲ್ಲಿ 4200 ಹೆಕ್ಟೇರ್ ಪ್ರದೇಶ ಅರಣ್ಯ ಭೂಮಿ ಮುಳುಗಡೆಯಾಗುತ್ತದೆ ಎಂದು ವಿವರಿಸಲಾಗಿತ್ತು.

2012ರ ಜುಲೈ 20ರಂದು ಜಲ ಸಂಪನ್ಮೂಲ ಸಚಿವರ ನೇತೃತ್ವದಲ್ಲಿ ನೀರಾವರಿ ಮತ್ತು ಕೆಪಿಸಿ ಅಧಿಕಾರಿಗಳ ಸಭೆ ನಡೆಸಿ ಡಿಪಿಆರ್ ಪುನರ್ ಪರಿಶೀಲನೆ ಮಾಡುವುದಕ್ಕಾಗಿ ಮತ್ತು ಅತ್ಯಂತ ಕಡಿಮೆ ಅರಣ್ಯ ಪ್ರದೇಶ ಮುಳುಗಡೆಯಾಗುವ ರೀತಿಯಲ್ಲಿ ಯೋಜನೆಯನ್ನು ಸಿದಟಛಿಪಡಿಸಬೇಕು ಮತ್ತು ಬೆಂಗಳೂರು ಸುತ್ತಮುತ್ತ ಪ್ರದೇಶಗಳಿಗೆ ಕುಡಿವ ನೀರಿನ ಅಂಶವನ್ನು ಸೇರಿಸಬೇಕೆಂದು ತೀರ್ಮಾನವಾಗಿತ್ತು.

2011ರ ಆಗಸ್ಟ್ 23ರಂದು ಕೆಪಿಸಿ ಮೂರು ಸ್ಥಳಗಳಲ್ಲಿ ಗುರುತಿಸಿತು. ಅದರಲ್ಲಿ ಜಲ ಸಂಪನ್ಮೂಲ ಇಲಾಖೆಯು 440 ಮೀಟರ್ ಎಫ್ಆರ್‍ಎಲ್ ಸ್ಥಳದಲ್ಲಿ 32.1 ಟಿಎಂಸಿ ನೀರನ್ನು ಸಂಗ್ರಹ ಮಾಡಿ ಅದರಲ್ಲಿ 16.1 ಟಿಎಂಸಿ ನೀರನ್ನು ಬೆಂಗಳೂರು ಸುತ್ತಮುತ್ತ ಕುಡಿವ ನೀರನ್ನು ಒದಗಿಸಬೇಕಾಗಿ ಯೋಜನೆಯನ್ನು ರೂಪಿಸಿತು.

2012ರ ಜೂನ್ 27ರಂದು ಕೆಪಿಸಿ ಡಿಪಿಆರ್ ಅನ್ನು ಸಿದ್ಧಪಡಿಸಿತ್ತು. ಇದನ್ನು ಆಗಲೇ ಇಂಟರ್ ಸ್ಟೇಟ್ ವಾಟರ್ ಮುಖ್ಯ ಎಂಜಿನಿಯರ್ ಗಳಿಗೆ ಕಳುಹಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com