
ಬೆಂಗಳೂರು: ನ್ಯಾ . ವಿ. ಭಾಸ್ಕರ ರಾವ್ ಕುರ್ಚಿ ಖಾಲಿ ಮಾಡುವುದು ಸರ್ಕಾರಕ್ಕೆ ಇಷ್ಟವಿಲ್ಲವೆ? ಇಂಥದ್ದೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಹರಿದಾಡುತ್ತಿದೆ. ಲೋಕಾಯುಕ್ತರ ಪದಚ್ಯುತಿಗೆ ಸಂಬಂಧಿಸಿದಂತೆ ಅಗತ್ಯ ಕಾಯ್ದೆಗೆ ತಿದ್ದುಪಡಿ ತಂದು ಉಭಯ ಸದನಗಳಲ್ಲಿ ಅಂಗೀಕರಿಸಿಕೊಂಡರೂ ಕಾಯ್ದೆಗೆ ರಾಜ್ಯಪಾಲರ ಅಂಕಿತ ಇನ್ನೂ ಬಿದ್ದಿಲ್ಲ. ಈ ಮಧ್ಯೆ ಭಾಸ್ಕರರಾವ್ ದೀರ್ಘ ರಜೆ ಮೇಲೆ ತೆರಳಿದ್ದಾರೆ. ಹೀಗಾಗಿ ಹಾವೂ ಸಾಯಲಿಲ್ಲ ಕೋಲಲೂ ಮುರಿಯಲಿಲ್ಲ ಎಂಬಂತಾಗಿದೆ ಸರ್ಕಾರದ ನಡೆ.
ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿ ಭಾಸ್ಕರ ರಾವ್ ಪುತ್ರ ಅಶ್ವಿನ್ ರಾವ್ನನ್ನು ವಿಶೇಷ ತನಿಖಾ ದಳ ಬಂಧಿಸಿದ್ದರೂ ನೈತಿಕ ಹೊಣೆ ಹೊತ್ತು ಭಾಸ್ಕರ್ ರಾವ್ ರಾಜಿನಾಮೆ ಕೊಡುವ ಬದಲಿಗೆ ರಜೆ ಮೇಲೆ ತೆರಳಿದ್ದಾರೆ. ಸಾರ್ವಜನಿಕರಿಂದ ವ್ಯಕ್ತವಾದ ಟೀಕೆ ಆಕ್ರೋಶಗಳ ಜತೆಗೆ ರಾಜಿನಾಮೆ ಸಲ್ಲಿಸಬೇಕೆಂಬ ಒತ್ತಡ ಹಾಗೂ ಪುತ್ರನ ಬಂಧನದ ನಡುವೆ ಕಚೇರಿಗೆ ಆಗಮಿಸಿ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಲೋಕಾಯುಕ್ತರು ಯಾರಿಗೂ ಮುಖ ತೋರಿಸಲಾಗದೆ ರಜೆಯಲ್ಲಿದ್ದಾರೆ.
ಲೋಕಾಯುಕ್ತರು ಕಚೇರಿಗೆ ಬರುತ್ತಿಲ್ಲ, ಉಪ ಲೋಕಾಯುಕ್ತರಾಗಿದ್ದ ನ್ಯಾ. ಮಜಗಿ ನಿವೃತ್ತಿಗಿದ್ದಾರೆ. ಸದ್ಯಕ್ಕೆ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ.ಅಡಿ ಅವರೇ ಲೋಕಾಯುಕ್ತಕ್ಕೆ ಏಕ ಚಕ್ರಾಧಿಪತಿ. ಇಂತಹ ಪರಿಸ್ಥಿತಿಯಲ್ಲಿ ಲೋಕಾಯುಕ್ತರು ರಾಜಿನಾಮೆ ಸಲ್ಲಿಸಿದರೆ ಸರ್ಕಾರ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿಕೊಳ್ಳಬಹುದು ಎಂಬ ಆತಂಕ ಇದ್ದಂತೆ ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲವು ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ದೂರುಗಳ ಬಗ್ಗೆ ಭಾಸ್ಕರ್ ರಾವ್ ಏನೂ ಕ್ರಮ ಕೈಗೊಳ್ಳದೆ ಯಥಾಸ್ಥಿತಿ ಕಾಪಾಡಿಕೊಂಡು ಸರ್ಕಾರದ ಜತೆ ಒಂದು ರೀತಿ ಹೊಂದಾಣಿಕೆಯಲ್ಲಿದ್ದಾರೆ. ಇದು ಸರ್ಕಾರಕ್ಕೆ ಒಂದು ರೀತಿ ಅನುಕೂಲಕರ. ಅಷ್ಟೇ ಅಲ್ಲ ಆ ಹುದ್ದೆಯಲ್ಲಿ ಭಾಸ್ಕರ ರಾವ್ ಮುಂದುವರಿಯುವ ತನಕ ಸರ್ಕಾರವೂ `ಸೇಫ್ ' ಅವರೂ `ಸೇಫ್ ಎಂಬ ಲೆಕ್ಕಾಚಾರ ಇದ್ದಂತೆ ಇದೆ ಎಂಬ ಅನುಮಾನಗಳು ಮೂಡುತ್ತಿವೆ.
ಹಾಗಾಗಿಯೇ ಸರ್ಕಾರ ಲೋಕಾಯುಕ್ತ ಭಾಸ್ಕರ ರಾವ್ ಅವರನ್ನು ಮನೆಗೆ ಕಳುಹಿಸುವ ಯಾವುದೇ ತ್ವರಿತಗತಿ ಕ್ರಮಕ್ಕೆ ಮುಂದಾಗಲಿಲ್ಲ. ಸಾರ್ವಜನಿಕವಾಗಿ ಕಣ್ಣೊರೆಸುವ ತಂತ್ರವಾಗಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದು ಅಲ್ಪ ಬದಲಾವಣೆ ಮಾಡಿ ಕಾಯ್ದೆ ತಂದಿದ್ದೇವೆ ಎಂದು ಬೀಗತೊಡಗಿದೆ ಅಷ್ಟೆ.
ಆದರೆ, ಈಗ ಏನಾಗಿದೆ. ಸರ್ಕಾರದ ತಿದ್ದುಪಡಿ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿಲ್ಲ. ಒಂದು ವೇಳೆ ಅಂಕಿತ ಹಾಕಿದರೂ ಅದನ್ನು ಅನುಷ್ಠಾನಕ್ಕೆ ತರಲು ನಾಲ್ಕೈದು ತಿಂಗಳು ಸಮಯ ಬೇಕಾಗುತ್ತದೆ.
ಇನ್ನು ಅಧಿವೇಶನ ಸೇರುವುದು ಡಿಸೆಂಬರ್‍ನಲ್ಲಿ. ಬಹುಶಃ ಸೆಪ್ಟೆಂಬರ್‍ನಲ್ಲಿ ವಿಶೇಷ ಅಧಿವೇಶನ ನಡೆಯಬಹುದು ಅದು ಮತ್ತೊಮ್ಮೆ ಲೋಕಾಯುಕ್ತ ಸಂಸ್ಥೆಯ ವಿಚಾರವಾಗಿ ಅಷ್ಟೆ. ಆದರೆ, ಭ್ರಷ್ಟಾಚಾರ ಪ್ರಕರಣದಲ್ಲಿ ಭಾಸ್ಕರ್ ರಾವ್ ನೇರವಾಗಿ ಶಾಮೀಲಾಗಿದ್ದಾರೆ ಎಂಬುದಕ್ಕೆ ಯಾವ ಆರೋಪಗಳೂ ಇಲ್ಲ, ಪುರಾವೆಗಳೂ ಇಲ್ಲ. ರಾಜಿನಾಮೆ ಕೊಡಿ ಅಂಥ ಸೂಚಿಸಲು ಸರ್ಕಾರಕ್ಕೂ ಸಾಧ್ಯವಾಗುವುದಿಲ್ಲ. ಇನ್ನು ಪದಚ್ಯುತಿಗೊಳಿಸ ಬೇಕಾದರೆ ಆರೋಪಗಳಿರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಆರೋಪವೂ ಅವರ ವಿರುದಟಛಿ ದಾಖಲಾಗಿಲ್ಲ. ಹೈಕೋರ್ಟ್ ಆಗಲಿ, ಸುಪ್ರೀಂ ಕೋರ್ಟ್ ಆಗಲಿ ಅಥವಾ ಸರ್ಕಾರಕ್ಕಾದರೂ ರಾಜಿನಾಮೆ ಕೇಳುವ ಅಧಿಕಾರವಿಲ್ಲ. ಇರುವುದೇ ಒಂದು ಮಾರ್ಗವೆಂದರೆಕಾನೂನು ಪ್ರಕಾರ ಅವರನ್ನು ಕೆಳಗಿಳಿಸುವುದು. ಆದರೆ, ಅವರ ಮೇಲೆ ಆರೋಪಗಳೆಲ್ಲಿವೆ? ಹೀಗಾಗಿ ಸರ್ಕಾರವೂ ರಾಜಿನಾಮೆ ಕೇಳುವಂತಿಲ್ಲ, ಸ್ವತಃ ಭಾಸ್ಕರ್ ರಾವ್ ಕೂಡ ರಾಜಿನಾಮೆ ಕೊಡುತ್ತಿಲ್ಲ.
ಸಂಕಷ್ಟ ಮುಖ್ಯಮಂತ್ರಿಗಳಿಗೆ!
ಈ ಹುದ್ದೆಯಲ್ಲಿ ಮುಂದುವರಿಯುವ ತನಕ ಭಾಸ್ಕರ ರಾವ್ ಕೂಡ `ಸೇಫ್'. ಕಾರಣ ಆ ಹುದ್ದೆ ಯಿಂದ ಅವರಿಗೆ ತಮ್ಮದೇ ಆದ ಘನತೆ-ಗೌರವ, ಹಕ್ಕುಗಳಿವೆ, ಅವುಗಳನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ಒಂದು ವೇಳೆ ರಾಜಿನಾಮೆ ನೀಡಿದರೆ ಆಗ ಅವರೊಬ್ಬ ಮಾಜಿ ಲೋಕಾಯುಕ್ತ. ಆಗ ಯಾರಾದರೂ ದೂರು ದಾಖಲಿಸಿದರೆ ಅಲ್ಲಿಂದ ಭಾಸ್ಕರ ರಾವ್ ಸಂಕಷ್ಟಕ್ಕೆ ಸಿಲುಕಬಹುದು. ಇವೆಲ್ಲಾ ಗೊತ್ತಿದ್ದೇ ಸರ್ಕಾರ ಹಾಗೂ ಲೋಕಾಯುಕ್ತರು ನಾಟಕ ಆಡುತ್ತಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಒಂದು ವೇಳೆ ಭಾಸ್ಕರ್ ರಾವ್ ರಾಜಿನಾಮೆ ನೀಡಿದರೆ ಆಗ ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿಕೊಳ್ಳುವವರು ಭಾಸ್ಕರ ರಾವ್ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ. ಏಕೆಂದರೆ ಇಡೀ ಸಂಸ್ಥೆಯ ಅಧಿಕಾರ ವ್ಯಾಪ್ತಿ ಉಪ ಲೋಕಾಯುಕ್ತ ಸುಭಾಷ್ ಅಡಿ ಅವರ ಅ ಧಿಕಾರ ವ್ಯಾಪ್ತಿಗೆ
ಬರುವುದರಿಂದ ಅವರ ಹಾಗೂ ಸರ್ಕಾರದ ವಿರುದ್ಧ ಸಲ್ಲಿಕೆ ಆಗಿರುವ ದೂರುಗಳಿಗೆ ಎಲ್ಲಿ ಚಾಲನೆ ಬರುವುದೋ ಎಂಬ ಆತಂಕ ಸರ್ಕಾರಕ್ಕಿರುವುದರಿಂದಲೇ ಭಾಸ್ಕರ್ ರಾವ್ ಮುಂದುವರಿಯುವುದೇಸೂಕ್ತ ಎಂಬ ತೀರ್ಮಾನಕ್ಕೆ ಬಂದಂತೆ ಕಾಣುತ್ತಿದೆ.
Advertisement