
ಬೆಂಗಳೂರು: ನಗರ ಪಾಲಿಕೆಗಳ ಚುನಾವಣೆ ಇತಿಹಾಸದಲ್ಲೇ ಮೊದಲ ಬಾರಿಗೆ ಜೆಡಿಎಸ್ ಏಕಕಾಲಕ್ಕೆ 120 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿ ಗಮನ ಸೆಳೆದಿದೆ. ಅಷ್ಟೇ ಅಲ್ಲ. ಮತದಾರರನ್ನು ಸೆಳೆಯಲು ಸಮಾವೇಶವನ್ನೂ ನಡೆಸಿ ಅಲ್ಲಿ ಎಲ್ಲಾ ಅಭ್ಯರ್ಥಿಗಳನ್ನೂ ಪ್ರದರ್ಶನ ಮಾಡಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದೆ.
ಈ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಪಟ್ಟಿಗಳ ಪ್ರಕಟದ ಹಂತಹಂತವಾಗಿ ಬಿಡುಗಡೆ ಮಾಡುತ್ತಿದ್ದ ಜೆಡಿಎಸ್ ಈ ಬಾರಿ ಹಿಂದಿನ ಎಲ್ಲಾ ಚುನಾವಣೆಗಳಿಗಿಂತ ಎಚ್ಚೆತ್ತು ಪಟ್ಟಿ ಸಿದ್ಧಪಡಿಸಿದೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದ ಎಲ್ಲಾ ಅಭ್ಯರ್ಥಿಗಳನ್ನು ಮತ್ತು ಅವರ ಬೆಂಬಲಿಗರನ್ನೂ ಕೂಡಿಸಿ ಸಮಾವೇಶ ನಡೆಸಲಾಯಿತು. ಈ ವೇಳೆ ಪಶ್ರದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಕಾರ್ಯಕರ್ತರು ಪಕ್ಷಕ್ಕೆ ಯಾವುದೇ ಕಾರಣಕ್ಕೂ ದ್ರೋಹ ಎಸಗಬಾರದು ಎಂದು ಹೇಳಿದರೇ, ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಟಿಕೆಟ್ ಪಡೆದ ಅಭ್ಯ ರ್ಥಿಗಳು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡ ಬೇಕು. ಜನಸ್ನೇಹಿ ಸದಸ್ಯರಾಗಬೇಕು ಎಂದರು. ಚುನಾವಣೆಯಲ್ಲಿ ಜಯಶೀಲನಾದರೆ ಪಾಲಿಕೆಯಲ್ಲಿ ಜನಸ್ನೇಹಿ ಮತ್ತು ಸ್ವಚ್ಛ ಆಡಳಿತ ನೀಡಲು ಬದ್ಧನಾಗಿದ್ದೇನೆ ಎಂದು ಎಲ್ಲಾ 120 ಅಭ್ಯರ್ಥಿಗಳಿಂದ ಹೇಳಿಸಿ ಪ್ರಮಾಣ ಮಾಡಿಸಿದ ಕುಮಾರಸ್ವಾಮಿ ಇಡೀ ಸಮಾವೇಶವನ್ನು ಬಿಬಿಎಂಪಿಯಲ್ಲಿ ಆಡಳಿತ ನಡೆಸಿದ ಬಿಜೆಪಿ ಟೀಕೆಗೆ ಬಳಸಿದರು. ಹಾಗೆಯೇ ಕಾಂಗ್ರೆಸ್ ನ ಎರಡು ವರ್ಷದ ಆಡಳಿತದಲ್ಲಿ ಬಿಬಿಎಂಪಿ ವಿಚಾರದಲ್ಲಿ ಕೈಗೊಂಡಿರುವ ಅಕ್ರಮ ನಿರ್ಧಾರಗಳು ಮತ್ತು ತಪ್ಪು ನಡೆಗಳನ್ನು ಕುಮಾರಸ್ವಾಮಿ ಪಟ್ಟಿ ಮಾಡಿದರು.
ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿ, ರಾಜ್ಯದಲ್ಲಿ ವ್ಯವಸ್ಥೆಯನ್ನು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹಾಳುಗೆಡವಿದೆ. ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದರ್ಶನವನ್ನು ಎರಡೂ ಪಕ್ಷಗಳು ಗಾಳಿಗೆ ತೂರಿ ಸಾಕಷ್ಟು ಅಕ್ರಮಗಳನ್ನು ನಡೆಸಿವೆ ಎಂದರು. ಆದರೆ, ಟಿಕೆಟ್ ಕೈತಪ್ಪಿರುವ ಕೆಲವು ಸ್ಥಳೀಯ ಮುಖಂಡರು ಸಮಾವೇಶದಲ್ಲೇ ಒಳಗೊಳಗೆ ಬುಸುಗುಟ್ಟುತ್ತಿದ್ದು ಅವರ ಅಸಮಾಧಾನ ಶುಕ್ರವಾರದ ನಂತರ ಹೊರ ಬರುವ ಸಾಧ್ಯತೆಗಳಿದೆ.
ಶಾಸಕರಾದ ಚಲುವರಾಯಸ್ವಾಮಿ ಜಮೀರ್ ಅಹಮದ್ ಖಾನ್, ಬಂಡೆಪ್ಪ ಕಾಶಂಪೂರ್, ಅಖಂಡ ಶ್ರೀನಿವಾಸ್ ಮತ್ತು ಮಾಜಿ ಕಾರ್ಪೋರೇಟರ್ ಗಳು ಇದ್ದರು.
Advertisement