ಬೆಂಗಳೂರು: ಬಿಬಿಎಂಪಿ ಚುನಾವಣೆಯ ಜವಾಬ್ದಾರಿಯನ್ನು ಬೆಂಗಳೂರು ನಗರ ಪ್ರತಿನಿಧಿಸುವ ಐವರು ಸಚಿವರು ಮಾತ್ರ ವಹಿಸಿಕೊಳ್ಳಬೇಕೆಂಬ ವಾದದಲ್ಲಿ ಹುರುಳಿಲ್ಲ. ನಮ್ಮ ಕ್ಷೇತ್ರದ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳುತ್ತೇವೆ. ಉಳಿದ ಕ್ಷೇತ್ರಕ್ಕೂ ನಮಗೂ ಸಂಬಂಧವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಬೇಡ. ಬಿಎಂಪಿಯಲ್ಲಿ ಈ ವರ್ಷ ಕಾಂಗ್ರೆಸ್ ಮೇಯರ್ ಆಡಳಿತ ನಡೆಸುವುದು ನಿಶ್ಚಿತ. ಹೀಗಾಗಿ ಜವಾಬ್ದಾರಿಯನ್ನು ಬೇರೆಯವರ ಹೆಗಲಿಗೆ ವಹಿಸುವ ಪ್ರಶ್ನೆ ಉದ್ಭವಿಸುವುದೇ ಇಲ್ಲ ಎಂದು ಹೇಳಿದರು.
ಬಿಜೆಪಿ ನಡೆಸಿದ ಭ್ರಷ್ಟಾಚಾರದ ವಿರುದ್ಧ ಜನ ನಮಗೆ ಮತ ನೀಡುತ್ತಾರೆ. ಬೆಂಗಳೂರಿನಲ್ಲಿ ಯಾವ ಅಲೆಯೂ ಇಲ್ಲ. ಮೋದಿ ಎಲ್ಲಿದ್ದಾರೆ? ಅವರ ಪತ್ತೆಯೇ ಇಲ್ಲ. ದೇಶದಲ್ಲಿ ಇಷ್ಟೆಲ್ಲ ಹಗರಣ ನಡೆಯುತ್ತಿದ್ದರೂ ಅವರು ಮಾತ್ರ ಮೌನೇಂದ್ರರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. 1 ಕೋಟಿಗೂ ಹೆಚ್ಚು ಜನರು ವಾಸವಿದ್ದಾರೆ. ರಾಜ್ಯದ ರಾಜಧಾನಿಯಾಗಿರುವುದರಿಂದ ಬಿಬಿಎಂಪಿ ಚುನಾವಣೆಗೆ ವಿಶೇಷ ಅರ್ಥ ಬಂದಿದೆ. ಬಿಬಿಎಂಪಿಯಲ್ಲಿ ಬಿಜೆಪಿ ಮಾಡಿದ ತಪ್ಪು ಮತ್ತು ಅವ್ಯವಹಾರಕ್ಕೆ ರಾಜ್ಯ ಸರ್ಕಾರ ಕಾರಣ ಅಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಬಿಎಂಪಿಯಲ್ಲಿ ಯಾವುದೇ ಅವ್ಯವಹಾರ ನಡೆಯುವುದಕ್ಕೆ ನಾವು ಅವಕಾಶವನ್ನೇ ನೀಡಿಲ್ಲ. ಪೌರ ಕಾರ್ಮಿಕರ ಪಿಎಫ್ ಹಣವನ್ನೇ ದುರ್ಬಳಕೆ ಮಾಡಿಕೊಂಡವರಿಂದ ನಾವು ಪಾಠ ಕಲಿಯಬೇಕಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಂಗಳೂರು ನಗರಕ್ಕೆ ಸ್ಥಾನ ದೊರಕದೇ ಇರುವುದಕ್ಕೂ ಇವರ ದುರಾಡಳಿತವೇ ಕಾರಣ ಎಂದು ರಾಮಲಿಂಗಾರೆಡ್ಡಿ ಆಪಾದಿಸಿದರು
Advertisement