ಟಿಕೆಟ್ ಸೇಲ್ ಆರೋಪ; ಕಾಂಗ್ರೆಸ್‍ನಲ್ಲಿ ಅತೃಪ್ತಿ ಸ್ಫೋಟ, ಪ್ರತಿಭಟನೆ

ಬಿಬಿಎಂಪಿ ಚುನಾವಣೆ ನಾಮಪತ್ರ ಸಲ್ಲಿಕೆಗೆ ಸೋಮವಾರ ಕಡೆಯ ದಿನವಾಗಿದ್ದರೂ ಆಡಳಿತರೂಢ ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ

ಬೆಂಗಳೂರು: ಬಿಬಿಎಂಪಿ ಚುನಾವಣೆ ನಾಮಪತ್ರ ಸಲ್ಲಿಕೆಗೆ ಸೋಮವಾರ ಕಡೆಯ ದಿನವಾಗಿದ್ದರೂ ಆಡಳಿತರೂಢ ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ ಗೊಂದಲ ಇನ್ನೂ ಮುಂದುವರಿದಿದ್ದು, ಟಿಕೆಟ್ ಮಾರಾಟದ ಗಂಭೀರ ಆರೋಪ ಎದುರಾಗಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಿಎಂ ಸಿದ್ದರಾ ಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹಾಗೂ ಬೆಂಗಳೂರು ನಗರ ಪ್ರತಿನಿಧಿಸುವ ಸಚಿವರ ಮಧ್ಯೆ ತೀವ್ರ ಭಿನ್ನಾಭಿಪ್ರಾಯ ಸೃಷ್ಟಿಯಾಗಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗಾಗಿ ಕೈ ಪಕ್ಷದ ನಾಯಕರು ಮತ್ತೆ ಬೆಂಗಳೂರು ಹೊರವಲಯದ ಖಾಸಗಿ ರೆಸಾರ್ಟ್‍ಗೆ ತೆರಳಿದ್ದಾರೆ. ಶನಿವಾರ  ತಡರಾತ್ರಿಯವರೆಗೆ ಸಭೆ ನಡೆದಿದ್ದರೂ ಅಂತಿಮ ತೀರ್ಮಾನಕ್ಕೆ ಬರುವುದಕ್ಕ ಸಾಧ್ಯವಾಗಿಲ್ಲ. ಹೀಗಾಗಿ ಕೊನೆ ಕ್ಷಣದಲ್ಲ  ಅಧಿಕೃತ ಅಭ್ಯರ್ಥಿಗಳಿಗೆ ಬಿಫಾರ್ಮ್ ಕೊಟ್ಟು ನಾಮಪತ್ರ ಸಲ್ಲಿಸುವಂತೆ ಸೂಚನೆ ನೀಡಲು ನಿರ್ಧರಿಸಲಾಗಿದೆ.

ಹೀಗಾಗಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‍ನಲ್ಲಿ ಮತ್ತೆ ಇತಿಹಾಸ ಮರುಕಳಿಸಿ ದಂತಾಗಿದೆ. ಕಳೆದ ಬಾರಿ ಬಿಬಿಎಂಪಿ ಚುನಾವಣೆಗೆ ಟಿಕೆಟ್ ನೀಡುವಾಗಲೂ ಇದೇ ಪರಿಸ್ಥಿತಿ ಸೃಷ್ಟಿಯಾಗಿತ್ತು. ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಆರ್.ವಿ.ದೇಶಪಾಂಡೆ ಮತ್ತು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ಮಧ್ಯೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಮ್ಮತಿ ಮೂಡಿರಲಿಲ್ಲ. ಹೀಗಾಗಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾಂಗ್ರೆಸ್ ಮುಖಂಡರೊಬ್ಬರಿಗೆ ಸೇರಿದ ರೆಸಾರ್ಟ್‍ನಲ್ಲಿ ಕೊನೆಯ ದಿನದವರೆಗೆ ಸಭೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಪಟ್ಟಿ ಪ್ರಕಟಿಸದೇ ಅಭ್ಯರ್ಥಿಗಳಿಗೆ ಬಿಫಾರ್ಮ ಕೊಟ್ಟು ಕಳುಹಿಸಿದ್ದರು. ಆಕಾಂಕ್ಷಿಗಳು ಗಲಾಟೆ ನಡೆಸಿದ್ದರಿಂದ ಪೊಲೀಸ್ ಭದ್ರತೆಯಲ್ಲಿ ನಾಯಕರು ಮನೆಗೆ ತೆರಳಿದ್ದರು.

ಈ ಬಾರಿಯೂ ಇದೇ ಸ್ಥಿತಿ ನಿರ್ಮಾಣವಾಗಬಹುದೆಂಬ ಭಯಕ್ಕೆ ಕೈ ಪಕ್ಷದ ಸಭೆ ನಗರದಿಂದ ತೀರಾ ಹೊರಕ್ಕೆ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೂ ದೂರ ಇರುವ ಖಾಸಗಿ ರೆಸಾರ್ಟ್‍ನಲ್ಲಿ ಆಯೋಜಿಸಲಾಗಿದೆ. ಅಂತಿಮ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ಬೆಂಗಳೂರು ನಗರವನ್ನು ಪ್ರತಿನಿಧಿಸುವ ಐವರು ಸಚಿವರು, ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳು ಮಾತ್ರ ಭಾಗವಹಿಸಿದ್ದಾರೆ.

103 ವಾರ್ಡ್ ಅಂತಿಮ: ಶನಿವಾರ ನಡೆದ ಸಭೆಯಲ್ಲಿ ಕೇವಲ 103 ಅಭ್ಯರ್ಥಿಗಳನ್ನು ಮಾತ್ರ ಅಂತಿಮಗೊಳಿಸಲು ಸಾಧ್ಯವಾಗಿದೆ. ಒಂದೇ ಹೆಸರಿದ್ದ ವಾರ್ಡ್‍ಗಳಿಗೆ ಸಂಬಂಧಿಸಿದ 53 ಹೆಸರುಗಳು ಮತ್ತು ಶುಕ್ರವಾರ ರಾತ್ರಿ ಅಂತಿಮಗೊಂಡ 50 ಹೆಸರುಗಳು ಸೇರಿ 103 ಅಭ್ಯರ್ಥಿಗಳ ಪಟ್ಟಿ ಮಾತ್ರ ಸಿದ್ದಗೊಂಡಿದೆ. ಇದು ಕಾಂಗ್ರೆಸ್ ಶಾಸಕರು ಇರುವ 12 ಕ್ಷೇತ್ರಗಳಿಗೆ ಸಂಬಂಧಿಸಿದ್ದು, ಇನ್ನುಳಿದ 16 ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ಕಾರ್ಯಕರ್ತರು
ಈಗಾಗಲೇ ಅಖಾಡದಲ್ಲಿ ಇದ್ದಾರೆ. ಆದರೆ ನಾವು ಅಧಿಕಾರದಲ್ಲಿದ್ದರೂ ಕೊನೆಯ ಕ್ಷಣದವರೆಗೆ ಗೊಂದಲ ಬಗೆಹರಿದಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಈ ವಿಚಾರದಲ್ಲಿ ಸೂಕ್ತ ಮುಂಜಾಗ್ರತೆ ವಹಿಸಿಲ್ಲ. ಹೀಗಾಗಿ ಮತದಾರರ ಎದುರು ನಾವು ಬೆತ್ತಲಾಗುವಂತಾಗಿದೆ ಎಂದು ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಮ್-ಸಿಎಂ ಬಿಕ್ಕಟ್ಟು:
ಕಾಂಗ್ರೆಸ್ ಮೂಲಗಳ ಪ್ರಕಾರ ಪಟ್ಟಿ ವಿಳಂಬವಾಗುವುದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಪರಮೇಶ್ವರ ಮಧ್ಯೆ ಟಿಕೆಟ್ ವಿಚಾರದಲ್ಲಿ ಸೃಷ್ಟಿಯಾದ  ಬಿಕ್ಕಟ್ಟೇ ಕಾರಣ. ಪಕ್ಷದ ವತಿಯಿಂದ ಪರಮೇಶ್ವರ ಮತ್ತು ತಮ್ಮ ಆಪ್ತ ಬಳಗದ ಮೂಲಕ ಸಿದ್ದರಾಮಯ್ಯನವರು ಪ್ರತ್ಯೇಕ ಪಟ್ಟಿ ಸಿದ್ದಪಡಿಸಿಕೊಂಡಿದ್ದು, ಪರಸ್ಪರ ಹೊಂದಾಣಿಕೆಯಾಗುತ್ತಿಲ್ಲ. ತಮ್ಮ ಆಪ್ತ ವರ್ಗ ಮತ್ತು ಗುಪ್ತಚರ ವರದಿ ಆಧರಿಸಿ ಸಿದ್ದರಾಮಯ್ಯನವರು ಸೂಚಿಸಿದ ಹೆಸರಿಗೆ ಪರಮೇಶ್ವರ ಒಪ್ಪಿಗೆ ಸೂಚಿಸುತ್ತಿಲ್ಲ. ಪರಮೇಶ್ವರ ಹೇಳಿದ ಹೆಸರಿನ ವ್ಯಕ್ತಿಗಳಿಗೆ ಗೆಲ್ಲುವ ಅರ್ಹತೆ ಇಲ್ಲ ಎಂಬುದು ಸಿದ್ದರಾಮಯ್ಯನವರ ವಾದ. ಆದಾಗಿಯೂ ಇದುವರೆಗೆ ಅಂತಿಮಗೊಳಿಸಿದ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಟಿಕೆಟ್ ಮಾರಾಟ
ಇದೆಲ್ಲದಕ್ಕಿಂತ ಮುಖ್ಯವಾಗಿ ಕೈ ಟಿಕೆಟ್ ಮಾರಾಟವಾಗಿದೆ ಎಂಬ ಗಂಭೀರ ಆರೋಪ ಈಗ ವ್ಯಕ್ತವಾಗುತ್ತಿದೆ. ಸುಮಾರು 30ಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿದ್ದು, ಇದಕ್ಕೆ ಉಭಯ ನಾಯಕರೂ ಹೊಣೆ ಎಂದು ಆಪಾದಿಸಲಾಗಿದೆ. ಪರಮ್ ಮನೆ ಎದುರು ಪ್ರತಿಭಟನೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಮನೆ ಹಾಗೂ ಕಚೇರಿ ಎದುರು ಜಯನಗರದ ಕಾಂಗ್ರೆಸ್ ಮುಖಂಡ ಸಂಜೀವಯ್ಯ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಜಯನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ.ಸಿ.ವೇಣುಗೋಪಾಲ್ ಅವರೇ ತಮಗೆ ಟಿಕೆಟ್ ಕೈ
ತಪ್ಪುವುದಕ್ಕೆ ಕಾರಣ ಎಂದು ಆರೋಪಿಸಿ ಅವರು ಪ್ರತಿಭಟನೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com