
ಬೆಳಗಾವಿ: ಕರ್ನಾಟಕದ ಗೌರವವನ್ನು ಹೆಚ್ಚಿಸಲು ಸರ್ಕಾರ ಲೋಕಾಯುಕ್ತ ಭಾಸ್ಕರ್‍ರಾವ್ ಅವರನ್ನು ತಕ್ಷಣವೇ ಕಿತ್ತು ಬಿಸಾಕಬೇಕು ಎಂದು ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಹೇಳಿದ್ದಾರೆ.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1983-84ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಭ್ರಷ್ಟಾಚಾರ ನಿಯಂತ್ರಿಸಲು ಲೋಕಾಯುಕ್ತ ಕಾಯ್ದೆ ರಚಿಸಲಾಯಿತು. ಈವರೆಗೂ ಲೋಕಾಯುಕ್ತದ ಪೊಲೀಸ್ ವಿಂಗ್‍ನಲ್ಲಿರುವ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ ಲೋಕಾಯುಕ್ತರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಆದರೂ, ಸರ್ಕಾರ ಯಾಕೆ ಲೋಕಾಯುಕ್ತ ಭಾಸ್ಕರ್ ರಾವ್ ಅವರನ್ನು ಕಿತ್ತು ಬಿಸಾಕುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲೂ ಶುದ್ಧ ಹಸ್ತರು. 40 ವರ್ಷಗಳ ರಾಜಕೀಯದ ಅನುಭವ ಅವರಿಗಿದೆ. ಆದರೂ, ಲೋಕಾಯುಕ್ತರನ್ನು ಕಿತ್ತು ಹಾಕಲು ಏಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ.
ಎಷ್ಟು ಬೇಗ ಸರ್ಕಾರ ಲೋಕಾಯುಕ್ತರನ್ನು ಕಿತ್ತು ಹಾಕುತ್ತದೆಯೋ ಅಷ್ಟು ಗೌರವ ಕರ್ನಾಟಕಕ್ಕೂ ಮತ್ತು ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೂ ಬರುತ್ತದೆ. ಇದನ್ನು ಮುಖ್ಯಮಂತ್ರಿಗಳು ಅರಿತುಕೊಳ್ಳಬೇಕು. ಭ್ರಷ್ಟಾಚಾರದ ಬೇರು ಗಟ್ಟಿಯಾಗುತ್ತಿರುವುದನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯಬಾರದು ಎಂದು ಸಿಂಧ್ಯಾ ಹೇಳಿದರು.
ಸಾಲಮನ್ನಾ ಮಾಡಿ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸಾಲಮನ್ನಾ ಮಾಡಿದ ಮಾತ್ರಕ್ಕೆ ರೈತರ ಆತ್ಮಹತ್ಯೆ ನಿಲ್ಲುವುದಿಲ್ಲ. ಸರ್ಕಾರಗಳು ಕೃಷಿಯನ್ನು ಕೈಗಾರಿಕೆ ಎಂದು ಪರಿಗಣಿಸಬೇಕು. ಹೊಸ ಆರ್ಥಿಕ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಎಯಿಂದ ಝಡ್‍ವರೆಗೆ ಇರುವ ಜನತಾ ರಂಗದಪಕ್ಷಗಳು ತಮ್ಮ ಕುಟುಂಬದ ಸಮಸ್ಯೆಗಳನ್ನು ನಿವಾರಿಸಿ
ಕೊಳ್ಳುವಲ್ಲಿಯೇಮಗ್ನವಾಗಿವೆ. ಅಲ್ಲದೇ, ದೇಶ, ರೈತರು, ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು, ಪರಿಹರಿಸಲು ಇವರಿಗೆ ಅಹಂ ಅಡ್ಡಿ ಬರುತ್ತಿದೆ ಎಂದು ಲೇವಡಿ ಮಾಡಿದರು.
Advertisement