

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜತೆ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಹೋಲಿಕೆ ಮಾಡಲಾರೆ, ಹೋಲಿಕೆ ಮಾಡುವುದೂ ಸಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಅನೌಪಚಾರಿಕವಾಗಿ ಮಾತನಾಡಿದ ಅವರು, ದೇವರಾಜ ಅರಸು ಜತೆ ಸಿದ್ಧರಾಮಯ್ಯ ಅವರನ್ನು ಹೋಲಿಸುವ ಪ್ರಯತ್ನ ಬೇಡ. ನಾವೆಲ್ಲರೂ ದೇವರಾಜ ಅರಸು ಅವರ ಸಾಮಾಜಿಕ ನ್ಯಾಯದ ಪ್ರಾಡೆಕ್ಟ್ ಗಳು. ಅರಸು ಸರ್ಕಾರಕ್ಕೂ ಸಿದ್ಧರಾಮಯ್ಯ ಅವರ ಸರ್ಕಾರಕ್ಕೂ ಹೋಲಿಕೆಯೇ ಇಲ್ಲ. ಅರಸು ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಅವರ 60 ವರ್ಷ ಹಿಂದಿನ ಆಡಳಿತಕ್ಕೆ ಹೊಂದಾಣಿಕೆ ಮಾಡುವುದು ಸರಿಯಲ್ಲ ಎಂದರು.