190ಕ್ಕೂ ಹೆಚ್ಚು ನಾಮಪತ್ರ

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆಯುವ ಚುನಾವಣೆಗೆ 190ಕ್ಕೂ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25  ಸ್ಥಾನಗಳಿಗೆ ನಡೆಯುವ ಚುನಾವಣೆಗೆ 190ಕ್ಕೂ ಹೆಚ್ಚು  ನಾಮಪತ್ರಗಳು ಸಲ್ಲಿಕೆಯಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಹರಸಾಹಸದೊಂದಿಗೆ ಅಭ್ಯರ್ಥಿಗಳನ್ನು  ಕಣಕ್ಕಿಳಿಸಿವೆ. ಹೀಗಿದ್ದರೂ ಮೂರು ಪಕ್ಷಗಳಿಗೂ ಬಂಡಾಯದ ಬಿಸಿ ತೀವ್ರವಾಗಿ ತಟ್ಟಿದೆ.  ವಿಶೇಷವಾಗಿ ಆಡಳಿತ ಪಕ್ಷ ಕಾಂಗ್ರೆಸ್‍ಗೆ ಬಂಡಾಯ ಅಭ್ಯರ್ಥಿಗಳು ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ. ಮೂರು ಪಕ್ಷಗಳಲ್ಲೂ ಆಕಾಂಕ್ಷಿಗಳು ಕೊನೆಯ ದಿನದವರೆಗೂ ಕಾದಿದ್ದು, ಟಿಕೆಟ್ ಕೈ ತಪ್ಪುತ್ತಿದ್ದಂತೆ ಬಂಡಾಯವಾಗಿ ಕಣಕ್ಕಿಳಿಯಲು ನಿರ್ಧರಿಸಿ ನಾಮಪತ್ರ  ಸಲ್ಲಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರಿಗೆ ದೊಡ್ಡ ತಲೆನೋವು ಶುರುವಾಗಿದ್ದು, ಮುಂದೆ ಬಂಡಾಯ ಅಭ್ಯರ್ಥಿಗಳನ್ನು ಕಣದಿಂದ ವಾಪಸ್ ತೆಗೆಸುವ ಎರಡನೇ ಸರ್ಕಸ್ ಮಾಡಬೇಕಾಗಿದೆ.
ಕಾಂಗ್ರೆಸ್‍ನಲ್ಲೇ ಹೆಚ್ಚು ಬಂಡಾಯ: ಹೆಚ್ಚು  ಬಂಡಾಯದ ಬಿಸಿಗೆ ತುತ್ತಾಗಿರುವ ಪಕ್ಷ ಕಾಂಗ್ರೆಸ್.  ಪ್ರಮುಖವಾಗಿ ರಾಜಧಾನಿ ಬೆಂಗಳೂರು ನಗರ ಜಿಲ್ಲೆ  ಕ್ಷೇತ್ರದಲ್ಲೇ ಹಾಲಿ ಪರಿಷತ್ ಸದಸ್ಯರೇ ಬಂಡಾಯದ  ಬಾವುಟ ಹಾರಿಸಿದ್ದಾರೆ. ಟಿಕೆಟಿ ನೀಡುವ ಭರವಸೆ ನೀಡಿ  ಕೊನೆ ಗಳಿಗೆಯಲ್ಲಿ ಎಂ. ನಾರಾಯಣಸ್ವಾಮಿಗೆ ಟಿಕೆಟ್  ನೀಡಲಾಗಿದೆ ಎಂದು ಕಾಂಗ್ರೆಸ್‍ನ ಹಾಲಿ ಸದಸ್ಯ ದಯಾನಂದ್ ಪಕ್ಷೇತರವಾಗಿ ನಾಮಪತ್ರ ಹಾಕಿದ್ದಾರೆ.  ಇದೇ ರೀತಿ ದಕ್ಷಿಣ ಕನ್ನಡ-ಉಡುಪಿ ಕ್ಷೇತ್ರದಿಂದ  ಸ್ಪರ್ಧೆ ಬಯಸಿ, ಟಿಕೆಟ್ ವಂಚಿತರಾಗಿರುವ ಮಾಜಿ  ಸಂಸದ ಜಯಪ್ರಕಾಶ್ ಹೆಗ್ಡೆ ಕೂಡ ಸ್ವತಂತ್ರ ಅಭ್ಯರ್ಥಿ ಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ವಿಚಿತ್ರವೆಂದರೆ,  ಇದೇ ಕ್ಷೇತ್ರದಲ್ಲಿ ಮತ್ತೊಬ್ಬ ಬಂಡಾಯ ಅಭ್ಯರ್ಥಿ  ಹರಿಕೃಷ್ಣ ಬಂಟ್ವಾಳ ನಾಮಪತ್ರ ಸಲ್ಲಿಸಿದ್ದಾರೆ. ಅಂದರೆ,  ಇಲ್ಲಿ ಕಾಂಗ್ರೆಸ್‍ನ ಅಧಿಕೃತ ಅಭ್ಯರ್ಥಿ ಪ್ರತಾಪ್‍ಚಂದ್ರ  ಶೆಟ್ಟಿ ವಿರುದ್ಧ ಇಬ್ಬರು ಬಂಡಾಯ ಅಭ್ಯರ್ಥಿಗಳು ಹೋರಾಟಕ್ಕೆ ಧುಮುಕಿದ್ದಾರೆ.
ಜೆಡಿಎಸ್‍ಗೂ ತಪ್ಪದ ಕಾಟ: ಇನ್ನು ಮೈಸೂರಿನಲ್ಲಿ  ಜೆಡಿಎಸ್‍ನ ಸಂದೇಶ ನಾಗರಾಜ್ ವಿರುದ್ಧ ಮಂಜು ನಾಥ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.  ಇದರಿಂದಾಗಿ ಜೆಡಿಎಸ್‍ಗೆ ಮಂಡ್ಯ, ಮೈಸೂರಿನಲ್ಲಿ  ಬಂಡಾಯಗಾರರ ಕಾಟ ಎದುರಾಗಿದೆ. 10 ಸ್ಥಾನಗಳಲ್ಲಿ ಗಂಭೀರ ಸ್ಪರ್ಧೆ ಎಂದಿದ್ದ ಜೆಡಿಎಸ್‍ನ ಹಿರಿಯ ನಾಯಕರು 19 ಸ್ಥಾನಗಳಿಗೆ ಉಮೇದುವಾರರನ್ನು ಹೋರಾಟಕ್ಕಿಳಿಸಿದ್ದಾರೆ. ಆದರೆ, ಅಧಿಕೃತವಾಗಿ ಪ್ರಕಟಿಸಿದ್ದ ಅಭ್ಯರ್ಥಿಗಳನ್ನು ಕೊನೆ ಗಳಿಗೆಯಲ್ಲಿ ಬದಲಿಸಿ ಪಕ್ಷದೊಳಗೇ ಶಾಸಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.  ಮಂಡ್ಯದಲ್ಲಿ ಹಾಲಿ ಸದಸ್ಯ ರಾಮಕೃಷ್ಣ ಅವರಿಗೆ ಕೊಟ್ಟಿದ್ದ ಟಿಕೆಟ್ ತಪ್ಪಿಸಿದ್ದರಿಂದ ತೀವ್ರ ಬಂಡಾಯ ಎದುರಿಸುವಂತಾಗಿದೆ. ಹಾಲಿ ಸದಸ್ಯ ರಾಮಕೃಷ್ಣ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಅವರಿಗೆ ಪಕ್ಷದ ಶಾಸಕರದೇ ಬೆಂಬಲ ಇದೆ ಎನ್ನಲಾಗುತ್ತಿದೆ. 
ಯತ್ನಾಳ್ ಬಂಡಾಯ: ಪ್ರತಿಪಕ್ಷ ಬಿಜೆಪಿ ಕೂಡ  ಬಂಡಾಯ ಶಮನದ ಕಸರತ್ತು ನಡೆಸಬೇಕಿದ್ದು, ಸದ್ಯಕ್ಕೆ  ವಿಜಯಪುರ ಕ್ಷೇತ್ರದಲ್ಲಿ ಹಿರಿಯ ನಾಯಕರೇ  ನಾಮಪತ್ರ ಸಲ್ಲಿಸಿ ಪಕ್ಷಕ್ಕೆ ಸವಾಲು ಹಾಕಿದ್ದಾರೆ. ಹಾಲಿ  ಸದಸ್ಯಜಿ.ಎಸ್. ನ್ಯಾಮಗೌಡ ಬದಲು ತಮಗೆ ಟಿಕೆಟ್  ನೀಡಬೇಕೆಂದು ಆಗ್ರಹಿಸಿದ್ದ ಬಸನಗೌಡ ಪಾಟೀಲ್  ಯತ್ನಾಳ್, ಟಿಕೆಟ್ ಕೈ ತಪ್ಪಿದ್ದಕ್ಕಾಗಿ ಬಂಡಾಯ  ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಒಟ್ಟಾರೆ ಎಲ್ಲಾ
ಪಕ್ಷಗಳಲ್ಲೂ ಬಂಡಾಯಗಾರರ ಬಗ್ಗೆ ತಲೆಕೆಡಿಸಿಕೊಳ್ಳುವಂತಾಗಿ  ದ್ದು, ಡಿ.11ರ ಒಳಗಾಗಿ ಅವರ ನಾಮಪತ್ರ  ವಾಪಸ್ ತೆಗೆಸಲು ಕಸರತ್ತು ಆರಂಭಿಸಬೇಕಿದೆ. ಆಯೋಗದ ಪರದಾಟ: ಪರಿಷತ್ ಚುನಾವಣೆಗೆ
ಸಲ್ಲಿಕೆಯಾಗಿರುವ ಒಟ್ಟಾರೆ ನಾಮಪತ್ರಗಳ ವಿವರ  ಸಂಗ್ರಹಿಸುವಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ  ಕಚೇರಿ ಪೇಚಿಗೆ ಸಿಲುಕಿದೆ.  ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಬುಧವಾರ  ಒಂದೇ ದಿನ 100ಕ್ಕೂ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಸ್ವೀಕರಿಸಿ ಮುಂದಿನ  ಪ್ರಕ್ರಿಯೆಗೆ ಅಣಿಗೊಳಿಸುವಲ್ಲಿ ಚುನಾವಣಾ ಆಯೋಗ  ಪರದಾಡಿಬಿಟ್ಟಿದೆ. ಇದರಿಂದಾಗಿ ಬುಧವಾರ ರಾತ್ರಿ 10  ಗಂಟೆಯಾದರೂ ಒಟ್ಟಾರೆ ಸಲ್ಲಿಕೆಯಾಗಿರುವ  ನಾಮಪತ್ರಗಳ ಅಧಿಕೃತ ಸಂಖ್ಯೆ ಪ್ರಕಟವಾಗಲಿಲ್ಲ. ಈ ಮಧ್ಯೆ ಆಯೋಗದ ಸಿಬ್ಬಂದಿ ಮಾಹಿತಿಯನ್ನು ತನ್ನ ಅಧಿಕೃತ ವೆಬ್‍ಸೈಟ್‍ನಲ್ಲೂ ಪ್ರಕಟಿಸದೆ  ಗೊಂದಲಕ್ಕೀಡಾದ ಕಾರಣ ರಾತ್ರಿಯಾದರೂ ಮಾಧ್ಯಮಗಳಿಗೆ ಮಾಹಿತಿ ಒದಗಿಸಲಿಲ್ಲ. ಇದರಿಂದ ನಾಮಪತ್ರಗಳ ಸಂಖ್ಯೆಯ ನಿಖರತೆ ಸ್ಪಷ್ಟವಾಗಲಿಲ್ಲ. ಯಾವ ಪಕ್ಷಗಳಿಂದ ಎಷ್ಟು ಮಂದಿ ಕಣಕ್ಕಿಳಿದಿದ್ದಾರೆ. ಯಾವ ಜಿಲ್ಲೆಗಳಿಂದ ಎಷ್ಟು ನಾಮಪತ್ರಗಳು ಸಲ್ಲಿಕೆಯಾಗಿವೆ ಎನ್ನುವ ವಿವರ ಕೂಡ ಲಭ್ಯವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com