
ಬೆಂಗಳೂರು: ಭೂಸ್ವಾಧೀನ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವುದು ಸೇರಿದಂತೆ ನರೇಂದ್ರ ಮೋದಿ ಸರ್ಕಾರದ ರೈತ ವಿರೋಧಿ ನಿಲುವುಗಳನ್ನು ವಿರೋಧಿಸಿ ಮಾ .18ರಂದು ನವದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಸುವುದಾಗಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಹೇಳಿದರು. ದೇಶದ ಬಹುಸಂಖ್ಯಾತರಾದ ರೈತರನ್ನು ನಿರ್ಲಕ್ಷಿಸಿ ಯೋಜನೆಗಳನ್ನು ರೂಪಿಸುತ್ತಿರುವ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸಿ ನಡೆಸುತ್ತಿರುವ ಈ ಪ್ರತಿಭಟನೆಯಲ್ಲಿ 20ಕ್ಕೂ ಹೆಚ್ಚು ರಾಜ್ಯಗಳ ರೈತ ಪ್ರತಿನಿಧಿ ಗಳು ಸೇರಿದಂತೆ 2 ಲಕ್ಷ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರದ ನಿಲುವು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದ್ದು, ಕಾರ್ಪರೇಟ್ ಲಾಬಿಗೆ ಮಣಿದ ಸರ್ಕಾರ ರೈತ ಕುಲವನ್ನು ನಾಶ ಮಾಡಲು ಹೊರಟಿದೆ. ಯಾವುದೇ ಕಾರಣಕ್ಕೂ ಈ ಸುಗ್ರೀವಾಜ್ಞೆ ಜಾರಿಗೆ ತರಲು ಅವಕಾಶ ನೀಡುವುದಿಲ್ಲ. ಭೂಸ್ವಾಧೀನ ತಿದ್ದುಪಡಿ ಕಾಯ್ದೆಯ ಕುರಿತು ಫೆ.13ರಂದು ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಸಂವಾದ ಸಭೆ ನಡೆಸಿ, ಕರಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ಜತೆಗೆ ಈ ಸುಗ್ರೀವಾಜ್ಞೆ ಖಂಡಿಸುವಂತೆ ಒತ್ತಾಯಿಸಿ ರಾಜ್ಯದ ಎಲ್ಲ ಸಂಸದರ ನಿವಾಸದ ಎದುರು ಮಾ.1ರಂದು ಧರಣಿ ನಡೆಸಲಾಗುವುದು ಎಂದರು. 1991ರಿಂದ ಈವರೆಗೂ ದೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದನ್ನು ತಡೆಗಟ್ಟಲು ಸರ್ಕಾರ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರ ರಕ್ಷಣೆ ಹಾಗೂ ಆಹಾರ ಭದ್ರತೆಗಾಗಿ ಕೃತಿ ನೀತಿ ಹಾಗೂ ಸಾಲದ ನೀತಿಯನ್ನು ರೂಪಿಸಿಲ್ಲ. ಸ್ವಾಮಿನಾಥನ್ ವರದಿಯೂ ಜಾರಿಯಾಗಿಲ್ಲ. ಸಕ್ಕರೆ ನೀತಿ, ಇಳುವರಿ ಆಧರಿತ ಬೆಳೆಗೆ ಬೆಲೆ ನೀತಿ, ಬರ, ಪ್ರಕೃತಿ ವಿಕೋಪ, ಅತಿವೃಷ್ಟಿ ಅನಾವೃಷ್ಟಿಯಿಂದಾಗುವ ಅನಾಹುತಗಳಿಗೆ ಪರಿಹಾರ ಒದಗಿಸುವ ಬದಲು ಸಾಲ ಕಟ್ಟಲಾಗದ ರೈತರನ್ನು ಜೈಲಿಗೆ ಕಳುಹಿಸುತ್ತಿವೆ. ರೈತ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ಗಾಳಿ ಇಲ್ಲದ ಟೈರಿಗೆ ಗಾಳಿ ತುಂಬುವ ಕೆಲಸ: ರಾಜ್ಯ ಸರ್ಕಾರ ರೈತರ ವಿಚಾರದಲ್ಲಿ ಗಾಳಿ ಇಲ್ಲದ ಟೈರಿನಂತಾಗಿದೆ. ಹೀಗಾಗಿ ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅಧಿ ವೇಶನದಲ್ಲಿ ಚರ್ಚಿಸುವ ಮೂಲಕ ಗಾಳಿ ಇಲ್ಲದ ಟೈರಿಗೆ ಪಂಪ್ ಹೊಡೆಯುವ ಮೂಲಕ ಗಾಳಿ ತುಂಬುವ ಕೆಲಸಮಾಡುತ್ತೇನೆ ಎಂದರು.
Advertisement