
ವಿಧಾನಪರಿಷತ್: `ನಮ್ಮೂರಿನ ರಸ್ತೆ ಹಾಳಾಗಿದೆ, ಬಂದು ಪರೀಕ್ಷಿಸಿ' ಎಂದು ದೂರು ನೀಡಬೇಕಾ? ನಿಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಕೆಲವೆಡೆ ದೂರು ನೀಡಿದವರಿಗೇ ಧಮಕಿ ಹಾಕಲಾಗಿದೆ. ಆದರೆ ಸದನದಲ್ಲಿ ಪ್ರಶ್ನಿಸಿದರೆ ದೂರೇ ಬಂದಿಲ್ಲ ಎನ್ನುತ್ತಿದ್ದೀರಿ? ಹಾಗಿದ್ದರೆ ರಾಜ್ಯದ ಯಾವುದೇ ಭಾಗದಲ್ಲಿ ಕಳಪೆ ರಸ್ತೆ ಕಾಮಗಾರಿಗಳು ನಡೆದಿಲ್ಲವೇ? ರಾಜ್ಯ ಸರ್ಕಾರ ಹಾಗೂ ಲೋಕೋಪಯೋಗಿ ಸಚಿವರನ್ನು ಬಿಜೆಪಿ ಸದಸ್ಯೆ ವಿಮಲಾ ಗೌಡ ತರಾಟೆಗೆ ತೆಗೆದುಕೊಂಡ ಪರಿಯಿದು. ಲೋಕೋಪಯೋಗಿ ಇಲಾಖೆ ಭ್ರಷ್ಟರ ಕೂಟವಾಗುತ್ತಿದೆ. ಆದರೆ ಮಾಹಿತಿ ಕೇಳಿದರೆ ಎಲ್ಲವನ್ನೂ ಮುಚ್ಚಿಡಲಾಗುತ್ತದೆ. ಒಮ್ಮೆ ಕರ್ನಾಟಕದಲ್ಲಿ ಸುತ್ತಾಡಿ ಬಂದರೆ ರಸ್ತೆಗಳ ಗುಣಮಟ್ಟ ತಿಳಿಯುತ್ತದೆ. ಆದರೆ ಕಳಪೆ ಕಾಮಗಾರಿಗಳು ನಡೆದ ದೂರು ಬಂದಿಲ್ಲ ಎಂದು ಅಧಿಕಾರಿಗಳು ಕೈಕಟ್ಟಿ ಕುಳಿತ್ತಿದ್ದಾರೆ. ಹಾಗಿದ್ದರೆ ರಸ್ತೆ ಗುಣಮಟ್ಟ ವಿಚಕ್ಷಣಾ ದಳ ಏನು ಮಾಡುತ್ತಿದೆ? ಒಂದೊಮ್ಮೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗಿದ್ದರೆ, ರಸ್ತೆಗಳೇಕೆ ಈ ಪ್ರಮಾಣದಲ್ಲಿ ಹದಗೆಟ್ಟಿವೆ ಎಂದು ಸರ್ಕಾರವನ್ನು ಅವರು ಪ್ರಶ್ನಿಸಿದರು.
ಪ್ರಶ್ನೋತ್ತರ ಸಮಯದಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಅನುಪಸ್ಥಿತಿಯಲ್ಲಿ ಸಮಾಜಕಲ್ಯಾಣ ಸಚಿವ ಎಚ್.ಆಂಜನೇಯ ಅವರನ್ನು ವಿಮಲಾ ಗೌಡ ಸೇರಿದಂತೆ ಪ್ರತಿಪಕ್ಷದ ಬಹುತೇಕ ಶಾಸಕರು ತರಾಟೆ ತೆಗೆದುಕೊಂಡರು. ಅಕ್ರಮಗಳು ಕಣ್ಣೆದುರಿಗೆ ಇದ್ದರೂ ದೂರು ನೀಡಲಿ ಎಂದು ಬಯಸುವುದು ಎಷ್ಟರ ಮಟ್ಟಿಗೆ ಸರಿ? ಮಾಧ್ಯಮಗಳಲ್ಲಿ ಬಂದ ಸರಣಿ ಲೇಖನಗಳನ್ನೇ ದೂರನ್ನಾಗಿ ಸ್ವೀಕರಿಸುವ ಸಾಮಾನ್ಯ ಜ್ಞಾನವವನ್ನೂ ಸರ್ಕಾರ ಕಳೆದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭ್ರಷ್ಟರ ರಕ್ಷಣೆಗೆ ನಿಂತ ಸರ್ಕಾರ: ಹಣ ದುರುಪಯೋಗ ಪ್ರಕರಣದಲ್ಲಿ ಲೋಕೋಪಯೋಗಿ ಇಲಾಖೆಯ 47 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದರೆ ಕೇವಲ 6 ಮಂದಿ ವಿರುದ್ಧ ತನಿಖೆ ಸಂಪೂರ್ಣವಾಗಿದೆ. ಉಳಿದವರ ವಿವರ ಕೇಳಿದರೆ ಮಾಹಿತಿ ಮುಚ್ಚಿಡಲಾಗುತ್ತಿದೆ. ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವ ಕೆಲಸವನ್ನು ಸರ್ಕಾರವೇ ಮಾಡುತ್ತಿದೆ. ಮತ್ತೊಂದೆಡೆ ಕೋಟಿ ಲೂಟಿ ಮಾಡಿದವರಿಗೆ ಬಡ್ತಿ ನೀಡಿ, ಸಾವಿರ ತಿಂದವರನ್ನು ಶಿಕ್ಷಿಸಲಾಗುತ್ತಿದೆ. ಇದು ರಾಜ್ಯ ಸರ್ಕಾರದ ಕಾರ್ಯವೈಖರಿ ಎಂದು ಜೆಡಿಎಸ್‍ನ ಬಸವರಾಜ್ ಹೊರಟ್ಟಿ ಆರೋಪಿಸಿದರು. ರಾಜ್ಯ ಸರ್ಕಾರವು ಅಸ್ಪಷ್ಟ ಉತ್ತರ ನೀಡಿದ ಹಿನ್ನೆಲೆಯಲ್ಲಿ ಮುಂದಿನ ವಾರ ಮತ್ತೊಮ್ಮೆ ಈ ಪ್ರಶ್ನೆಗೆ ಸಮರ್ಪಕ ಉತ್ತರ ನೀಡುವಂತೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸೂಚಿಸಿದರು.
ಮೈಸೂರು ಷಟ್ಪಥ ರಸ್ತೆ ಶೀಘ್ರ: ಮೈಸೂರು-ಬೆಂಗಳೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ. ಯೋ ಜನಾ ವರದಿ ತಯಾರಿಸಲು ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಆಗಸ್ಟ್ 2015ರೊಳಗೆ ಯೋಜನಾ ವರದಿ ರಾಜ್ಯ ಸರ್ಕಾರದ ಕೈ ಸೇರಲಿದೆ. ಬಳಿಕ ಕೇಂದ್ರ ಭೂಸಾರಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಯೋಜನೆ ಮುಂದುವರಿಸಲಾಗುತ್ತದೆ. ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಯಾವುದೇ ವಿಳಂಬ ಮಾಡುತ್ತಿಲ್ಲ ಎಂದು ಸಚಿವ ಆಂಜನೇಯ ಸ್ಪಷ್ಟಪಡಿಸಿದರು. ಈ ಕಾಮಗಾರಿಗೆ ಸಂಬಂಧಿಸಿ ಸರ್ಕಾರವನ್ನು ಪ್ರಶ್ನಿಸಿದ ಟಿ.ಎ.ಶರವಣ, ಮೈಸೂರು-ಬೆಂಗಳೂರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಆದರೆ ಸರ್ಕಾರವು ಷಟ್ಪಥ ರಸ್ತೆ ನಿರ್ಮಾ ಣಕ್ಕೆ ವಿಳಂಬ ಮಾಡುತ್ತಿದೆ. ಇದರಿಂದ ಆ ಭಾಗದ ಪ್ರವಾಸೋದ್ಯಮಕ್ಕೆ ಸಮಸ್ಯೆಯಾಗುವುದರ ಜತೆಗೆ ಸ್ಥಳೀಯರಿಗೂ ವಾಹನ ಚಾಲನೆ ಮಾಡುವುದು ಕಷ್ಟವಾಗುತ್ತಿದೆ.
ಹಂಪ್ಸ್ ಹಾರಿಸಿ ಬಿದ್ದ ಸಚಿವ ಆಂಜನೇಯ!
ಮೈಸೂರು-ಬೆಂಗಳೂರು ರಸ್ತೆಯಲ್ಲಿನ ಹಂಪ್ಸ್‍ಗಳನ್ನು ನಿಗದಿತ ಸಮಯದಲ್ಲಿ ತೆರವು ಮಾಡುವಂತೆ ಜೆ ಡಿ ಎಸ್ ನ ಶರವಣ ಸರ್ಕಾರವನ್ನು ಆಗ್ರಹಿಸಿದರು. ಆದರೆ ಎಂದಿನಂತೆ ತಮ್ಮ ಲಘು ಹಾಸ್ಯ ಶೈಲಿಯಲ್ಲಿ ಉತ್ತರಿಸಲು ಮುಂದಾದ ಸಚಿವ ಆಂಜನೇಯ ಹಂಪ್ಸ್ಗೆ ಸಂಬಂಧಿಸಿ ಹಾರಿಕೆ ಉತ್ತರ ನೀಡಲು ಹೋಗಿ ತಾವೇ ಬಿದ್ದರು. ಗರ್ಭಿಣಿ ಯರಿಗೆ ಓಡಾಡಲು ಕಷ್ಟವಾಗುತ್ತಿದೆ ಅಲ್ಲಿನ ಹಂಪ್ಸ್‍ಗಳು ಭಯಂಕರವಾಗಿವೆ ಎಂದು ಆತಂಕ ವ್ಯಕ್ತಪಡಿಸಿದ ಶಾಸಕರಿಗೆ ಪ್ರತಿಕ್ರಿಯೆ ನೀಡಿದ ಸಚಿವರು, `ಹಂಪ್ಸ್ ಇರುವಲ್ಲಿ ನಿಧಾನವಾಗಿ ಚಲಿಸಿ, ವೇಗವಾಗಿ ಹೋದರೆ ಕಾರಿನಲ್ಲೇ ಮಗು ಹುಟ್ಟಿದರೆ ಕಷ್ಟವಾಗುತ್ತದೆ' ಎಂದು ಹಾಸ್ಯ ಮಾಡಲು ಮುಂದಾದರು. ಇದಕ್ಕೆ ಪಕ್ಷ ಭೇದ ಮರೆತು ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಅವೈಜ್ಞಾನಿಕ ಹಂಪ್ಸ್ ನಿರ್ಮಾಣ ಕ್ಕೆ ಸುಪ್ರೀಂ ಕೋರ್ಟ್ ವಿರೋಧ ವ್ಯಕ್ತಪಡಿಸಿದೆ. ಹೀಗಿರುವಾಗ ಈ ರೀತಿಯ ಹೇಳಿಕೆಗಳು ಗೊಂದಲ ಸೃಷ್ಟಿಸುತ್ತವೆ. ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮುಚ್ಚಿಕೊಳ್ಳಲು ಇಂಥ ಹೇಳಿಕೆ ನೀಡಬಾರದು ಎಂದು ಸದಸ್ಯರು ಆಗ್ರಹಿಸಿದರು. ಸದಸ್ಯರ ಒತ್ತಾಯಕ್ಕೆ ಮಣಿದ ಸಚಿವರು, ಕೂಡಲೇ ಹಂಪ್ಸ್ ತೆರವಿಗೆ ಸೂಚಿಸ್ತುತೇನೆ ಎಂದು ಭರವಸೆ ನೀಡಿದರು.
Advertisement