
ವಿಧಾನಪರಿಷತ್: ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಮೀಟರ್ ಅಳವಡಿಸುವ ಪ್ರತಿಯೊಬ್ಬ ರೈತರೊಂದಿಗೂ ಒಡಂಬಡಿಕೆಗೆ ಸಹಿ ಹಾಕಿ, ಯಾವುದೇ ಕಾರಣಕ್ಕೂ ಬಿಲ್ ವಸೂಲಿ ಮಾಡುವುದಿಲ್ಲ ಎಂದು ಬರೆದುಕೊಡಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ವಿದ್ಯುತ್ ಕಳ್ಳತನ ನಿಯಂತ್ರಣ ಹಾಗೂ ಬೇಡಿಕೆ ಪ್ರಮಾಣ ತಿಳಿಯುವ ಉದ್ದೇಶದಿಂದ ಮೀಟರ್ ಅಳವಡಿಕೆಗೆ ಮುಂದಾಗಿದ್ದರೂ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಮೀಟರ್ ಅಳವಡಿಸಿದ ಮೇಲೂ ಸರ್ಕಾರ ಹಣ ವಸೂಲಿಗೆ ಮುಂದಾಗಬಹುದು ಎಂದು ರೈತ ಸಂಘಟನೆಗಳು ಆತಂಕ ವ್ಯಕ್ತಪಡಿಸುತ್ತಿವೆ. ಸರ್ಕಾರದ ಮುಂದೆ ಅಂತಹ ಯಾವುದೇ ಆಲೋಚನೆಯಿಲ್ಲ. ಜನಪ್ರತಿನಿಧಿಗಳು ಜನರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಬಿಜೆಪಿಯ ಜಿ.ಎಸ್ .ನ್ಯಾಮಗೌಡ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ರೈತರ ಪಂಪ್‍ಸೆಟ್‍ಗಳ ವಿದ್ಯುತ್‍ಗಾಗಿ ಪ್ರತಿವರ್ಷ ರು. 7200 ಕೋಟಿಯನ್ನು ಸರ್ಕಾರ ಖರ್ಚು ಮಾಡುತ್ತಿದೆ. ಸರ್ಕಾರದ ನಿರೀಕ್ಷೆಗಿಂತ ಹೆಚ್ಚಿನ ಹಣ ಈ ಯೋಜನೆಗಳಿಗೆ ವ್ಯಯವಾಗುತ್ತಿದೆ. ಕೃಷಿಯೇತರ ಚಟುವಟಿಕೆಗಳಿಗೂ ಈ ವಿದ್ಯುತ್ ಸಂಪರ್ಕ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳ್ಳತನಕ್ಕೆ ನಿಯಂತ್ರಣ ಹೇರಲೇಬೇಕು, ಜತೆಗೆ ಅರ್ಹ ರೈತರಿಗೆ ಮಾತ್ರ ಯೋಜನೆಯ ಲಾಭ ಸಿಗಬೇಕು ಎನ್ನುವುದು ಸರ್ಕಾರದ ಕಾಳಜಿ ಎಂದು ಅವರು ಹೇಳಿದರು. ಈ ಹಿಂದೆಯೂ ಸರ್ಕಾರ ಮೀಟರ್ ಅಳವಡಿಕೆ ಕಡ್ಡಾಯ ಮಾಡಿದ್ದಾಗ ರಾಜ್ಯಾದ್ಯಂತ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿ ದ್ದವು. ಅನಿವಾರ್ಯವಾಗಿ ತನ್ನ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿತ್ತು. ರೈತರ ಹೋರಾಟಕ್ಕೂ ಬೇರೆಯದೇ ಕಾರಣವಿದೆ. ವೈಯ ಕ್ತಿಕವಾಗಿ ರೈತರು ವಿರೋಧ ಮಾಡುತ್ತಿಲ್ಲ, ಸಂಘಟನೆಗಳು ಪ್ರತಿಷ್ಠೆ ಗಾಗಿ ವಿರೋಧಿಸುತ್ತಿವೆ ಎಂದು ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟರು.
ಕೃಷಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಬೇಡ ಎಂದು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೆ ಅಂತಹ ರೈತರಿಗೆ 24 ಗಂಟೆ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ಬದ್ಧವಾಗಿದೆ. ಅಂತಹ ಬಳಕೆದಾರರಿಗಾಗಿ ವಿಶೇಷ ವಿದ್ಯುತ್ ಲೈನ್‍ಗಳ ನಿರ್ಮಾಣ ಕ್ಕೆ ಸರ್ಕಾರ ತೀರ್ಮಾನಿಸಿದೆ. ವಾಣಿಜ್ಯ ಬೆಳೆಗಾರರಿಂದ ಈ ರೀತಿಯ ಬೇಡಿಕೆ ಬಂದಿದ್ದು 11 ಕೆವಿ ಮಾರ್ಗ ರಚನೆ ಹಾಗೂ ಮೂಲಭೂತ ಸೌಕರ್ಯದ ಒಟ್ಟು ಅಂದಾಜಿನ ಶೇ.25ರಷ್ಟು ಮೊತ್ತವನ್ನು ರೈತರು ತುಂಬಿಕೊಡಬೇಕು. ಆದರೆ ಈಗ ಉಚಿತ ವಿದ್ಯುತ್ ಯೋಜನೆಯಲ್ಲಿ ಕೇವಲ 7 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಶಿವಕುಮಾರ್ ತಿಳಿಸಿದರು.
ಪೂರ್ಣ ಪಾವತಿ ಮಾಡಿದ ಗ್ರಾ.ಪಂಗೆ ಶೇ.25 ರಿಯಾಯಿತಿ: ರಾಜ್ಯದ ನಾನಾ ಗ್ರಾಮ ಪಂಚಾಯಿತಿಗಳಿಂದ ಸರ್ಕಾರಕ್ಕೆ ರು. 3753.26 ಕೋಟಿ ವಿದ್ಯುತ್ ಬಿಲ್ ಬಾಕಿಯಿದೆ. ಸಂಪೂರ್ಣ ಬಾಕಿ ಮನ್ನಾ ಸಾಧ್ಯವಿಲ್ಲ. ಆದರೆ ಕೆಲ ಪ್ರಮಾಣವನ್ನು ಮನ್ನಾ ಮಾಡಲು ಚರ್ಚೆ ನಡೆಸಲಾಗುತ್ತಿದೆ. ಜತೆಗೆ ಶೇ.100ರಷ್ಟು ಬಿಲ್ ಪಾವತಿಸುವ ಗ್ರಾ.ಪಂಗಳಿಗೆ ಶೇ.25ರಷ್ಟು ರಿಯಾಯಿತಿ ನೀಡಲು ಸರ್ಕಾರ ತೀರ್ಮಾನಿಸಿದೆ. ಶೀಘ್ರದಲ್ಲೇ ಈ ಸಂಬಂಧ ಆದೇಶ ಹೊರ ಬೀಳಲಿದೆ ಎಂದು ಸಚಿವರು ತಿಳಿಸಿದರು. ಆದರೆ ಹಳೆ ಬಿಲ್ ಬಾಕಿ ಇದೆ ಎಂಬ ಕಾರಣಕ್ಕೆ ಹೊಸ ಸಂಪರ್ಕ ನೀಡದಿರುವ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿರುವ ಅವರು, ಹೊಸ ಸಂಪರ್ಕಕ್ಕೆ ಅವಕಾಶ ಕೊಡುವಂತೆ ಆದೇಶಿಸಿದರು.
ಪವನ ವಿದ್ಯುತ್ ಅಕ್ರಮಕ್ಕೆ ತಡೆ
ರಾಜ್ಯದಲ್ಲಿ 12,780 ಮೆ.ವ್ಯಾ ಪವನ ವಿದ್ಯುತ್ ಉತ್ಪಾದನೆಗೆ ಅನುಮತಿ ದೊರೆತಿದ್ದು, ಕೇವಲ 2617 ಮೆ.ವ್ಯಾ ಯೋಜನೆ ಜಾರಿಯಲ್ಲಿದೆ. ಈ ಅಕ್ರಮವನ್ನು ಸರ್ಕಾರ ಗಂಭೀರ ವಾಗಿ ಪರಿಗಣಿಸಿದ್ದು ಇನ್ನು ಪರವಾನಗಿ ಪಡೆದು 3 ವರ್ಷದೊಳಗೆ ವಿದ್ಯುತ್ ಉತ್ಪಾದನೆ ಪ್ರಾರಂಭಿಸದಿದ್ದರೆ ಪರವಾನಗಿ ರದ್ದುಗೊಳಿಸುತ್ತೇವೆ. ರಾಜ್ಯದಲ್ಲಿ ಒಟ್ಟು 20 ಸಾವಿರ ಮೆ.ವ್ಯಾ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಕೇಂದ್ರ ಆರಂಭಿಸಲು ಅವಕಾಶವಿದೆ. ಆದರೆ ಬಹುತೇಕ ಸಂಸ್ಥೆಗಳು ಪರವಾನಗಿ ಪಡೆದು ದಂಧೆ ನಡೆಸುತ್ತಿವೆ. ಇದನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸ ಲಾಗಿದೆ. ಈಗಾಗಲೇ ಸುಮಾರು 3500 ಪರವಾನಗಿ ರದ್ದುಗೊಳಿಸ ಲಾಗಿದೆ. ಆದರೆ ಭವಿಷ್ಯದಲ್ಲಿ ಇಂತಹ ದಂಧೆ ಗಳನ್ನು ನಿಯಂತ್ರಿಸುತ್ತೇವೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಗಣೇಶ್ ಕಾರ್ಣಿಕ್ ಅವರ ಪ್ರಶ್ನೆಗೆ ಸ್ಪಷ್ಟಪಡಿಸಿದರು
Advertisement