
ವಿಧಾನಸಭೆ: ಸದನದಲ್ಲಿ ಅಧಿಕಾರಿಗಳು ಹಾಗೂ ಸಚಿವರು ಇಲ್ಲ ಎಂಬ ಕಾರಣಕ್ಕಾಗಿ ವಿಧಾನಸಭೆ ಕಲಾಪವನ್ನು ಸುಮಾರು ಅರ್ಧ ಗಂಟೆ ಮುಂದೂಡಲಾಯಿತು.ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಲು ಆರಂಭಿಸಿದಾಗ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ಸೇರಿ ನಾಲ್ಕೈದು ಸಚಿವರಿದ್ದರು. ಅಧಿಕಾರಿಗಳ ಗ್ಯಾಲರಿಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿಗಳು ಬಿಟ್ಟರೆ ಇನ್ನಾರೂ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಇಲ್ಲ, ಸಚಿವರೂ ಇಲ್ಲ, ಅಧಿಕಾರಿಗಳೂ ಇಲ್ಲ ,ಮಂತ್ರಿಯವರೂ ಇಲ್ಲ. ಹೀಗೆ ಮಾಡಿದರೆ ಹೇಗೆ? ನೀವೇ ಈ ಕಡೆ ಇದ್ದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀರಿ. ಮಂತ್ರಿಗಳಿಗೆ ಬಿಡುವಾದಾಗ ನಾವು ಕಲಾಪ ನಡೆಸೋಣ ಬಿಡಿ. ಈಗ ಮುಂದಕ್ಕೆ ಹಾಕಿ ಬಿಡಿ ಎಂದು ಬಿಜೆಪಿಯ ಗೋವಿಂದ ಕಾರಜೋಳ, ಸುರೇಶ್‍ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಟಿ. ರವಿ, ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾ ಯಿ ದೂರಿದರು.
ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್‍ನ ರಮೇಶ್‍ಕುಮಾರ್, `ನಾವ್ಯಾರೂ ಇಲ್ಲಿ ಬಿಟ್ಟಿ ಬರೊಲ್ಲ. ಬೆಳಗ್ಗೆ ಬಂದು ಅಟೆಂಡೆನ್ಸ್‍ಗೆ ಸಹಿ ಮಾಡಿದರೆ, ಸಂಜೆ ಎಣಿಸಿಕೊಂಡು ಹೋಗುತ್ತೇವೆ. ಇದೇನು ಚಾರಿಟಬಲ್ ಟ್ರಸ್ಟ್ ಅಲ್ಲ. ಸದನಕ್ಕೆ ಬಾರದ ನಮಗೆ ನಾಚಿಕೆ ಆಗಬೇಕು. ಆತ್ಮಗೌರವವಾದರೂ ಇರಬೇಕು. ಡೆಡಿಕೇಷನ್ ಇಲ್ಲದಿದ್ದರೆ ಹೀಗೇ ಆಗುತ್ತದೆ. ಅಧಿ ಕಾರಿಗಳಲ್ಲಿ ಭಯ ಹೋಗಿದೆ ನಿಜ. ಏಕೆಂದರೆ ನಮ್ಮಲ್ಲಿ ಜವಾಬ್ದಾರಿ ಹೋಗಿದೆ' ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಸದನದಲ್ಲಿ ಮಂತ್ರಿ ಇಲ್ಲ, ಅಧಿಕಾರಿ ಇಲ್ಲ ಎಂದು ಆಗಾಗ ಹೇಳಲಾಗುತ್ತಿದೆ. ಇದು ನಿಜಕ್ಕೂ ನೋವು ತರುವಂತಹ ವಿಷಯ. ನಾವು ಇಲ್ಲಿಗೆ `ಫಾರ್ಮಾಲಿಟಿ' ಗೆ ಬಂದು ಹೋಗುತ್ತಿದ್ದೇವೆ. ಶಾಸಕರಿಗೆ `ಝೀರೊ' ನಾಲೆಡ್ಜ್. ಅವರಿಗೆ ಹಿರಿಯರು ನಾವು ಏನೂ ತಿಳಿಸುತ್ತಿಲ್ಲ. ನೋಡಿ, ಶಾಸಕರು ಎಷ್ಟು ಜನ ಇದ್ದಾರೆ ಎಂದು. ಹೀಗೆ ಮುಂದುವರಿದರೆ ಸದನದ ಅಸ್ತಿತ್ವದ ಪ್ರಶ್ನೆ ಬರುತ್ತದೆ. ಇದೆಲ್ಲವನ್ನು ಸರಿ ಮಾಡಲೇಬೇಕು ಸಭಾಧ್ಯಕ್ಷರೇ ಎಂದು ಸಲಹೆ ಮಾಡಿದರು. ಮಂತ್ರಿಗಳು ಅಂದರೆ ಏನು? ಅವರು ಯಾ ವ ಸದನದಲ್ಲಿರಬೇಕು ಎಂದು ಹಂಚಿಕೆ ಮಾಡಲಾಗಿರುತ್ತದೆ. ಇಲ್ಲೂ ಇಲ್ಲ ಅಲ್ಲೂ ಇಲ್ಲ ಅಂದ್ರೆ ಹೇಗೆ? ಎಲ್ಲಿ ಹೋಗ್ತಾರೆ? ಕೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಫೋಟೊ ಹಾಕಿ, ಟೀವಿಲಿ ತೋರಿಸಿ!
ಅಟೆಂಡೆನ್ಸ್ ನೋಡಿದರೆ 100% ಇರುತ್ತದೆ. ಆದರೆ ಸದನದಲ್ಲಿ ನೋಡಿದರೆ ಕುರ್ಚಿಗಳೆಲ್ಲ ಖಾಲಿ ಇರುತ್ತವೆ. ಹೊರಗೆ ಹಾಜರಿ ಹಾಕಿ ಒಳಗೆ ಇಲ್ಲದವರ ಖಾಲಿ ಕುರ್ಚಿಯ ಚಿತ್ರವನ್ನು ಮಾಧ್ಯಮದವನ್ನು ಪ್ರಕಟಿಸಿ ಅವರ ಹೆಸರೆಲ್ಲವನ್ನು ಬಹಿರಂಗಪಡಿಸಬೇಕು. ಆಗಲಾದರೂ ಇವರೆಲ್ಲ ಸರಿಹೋಗುತ್ತಾರೆನೋ? ಶಾಸಕರಿಗೆ ಕುಳಿತುಕೊಳ್ಳಲು ಏನು ಅಡ್ಡಿ ಎಂದು ಜೆಡಿಎಸ್‍ನ ಶಿವಲಿಂಗೇಗೌಡ ಪ್ರಶ್ನಿಸಿದರು. ಸಚಿವರು ಅಧಿಕಾರಿಗಳು ಇಲ್ಲ ಎಂದ ಮೇಲೆ ಹೇಗೆ ಮಾತನಾಡಲಿ ಎಂದು ಪ್ರತಿಪಕ್ಷ ನಾಯಕ ಶೆಟ್ಟರ್ ಪ್ರಶ್ನಿಸಿದರು. ಉಪ ಸ್ಪೀಕರ್ ಸದನವನ್ನು ಮುಂದೂಡಿದರು.
Advertisement