ಬಂಡೆ ಸಾವು: ಗುಂಡು ಹಾರಿಸಿರುವುದು ರೌಡಿ ಮುನ್ನಾ

ಗುಲ್ಬರ್ಗ ಜಿಲ್ಲೆ ಶೂಟೌಟ್ ಪ್ರಕರಣದಲ್ಲಿ ಪಿಎಸ್‍ಐ ಮಲ್ಲಿಕಾರ್ಜುನ ಬಂಡೆ ಮೃತಪಟ್ಟಿದ್ದು ಪೊಲೀಸ್ ಪಿಸ್ತೂಲ್‍ನಿಂದಲೇ...
ಕೆ.ಜೆ.ಜಾರ್ಜ್
ಕೆ.ಜೆ.ಜಾರ್ಜ್

ವಿಧಾನಪರಿಷತ್: ಗುಲ್ಬರ್ಗ ಜಿಲ್ಲೆ ಶೂಟೌಟ್ ಪ್ರಕರಣದಲ್ಲಿ ಪಿಎಸ್‍ಐ ಮಲ್ಲಿಕಾರ್ಜುನ ಬಂಡೆ ಮೃತಪಟ್ಟಿದ್ದು ಪೊಲೀಸ್ ಪಿಸ್ತೂಲ್‍ನಿಂದಲೇ, ಆದರೆ ಗುಂಡು ಹಾರಿಸಿದ್ದು ರೌಡಿ ಮುನ್ನಾ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ಬಂಡೆ ಪ್ರಕರಣ ಸಂಬಂಧ ಸಿಐಡಿ ವರದಿಯಲ್ಲೇನಿದೆ ಎಂಬ ಬಸವರಾಜ ಹೊರಟ್ಟಿಯವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು ಈ ವಿಷಯ ತಿಳಿಸಿದರಲ್ಲದೇ, ಪರಿಹಾರ ವಿಚಾರದಲ್ಲಿ ಸರ್ಕಾರದ ಕ್ರಮವನ್ನು ವಿವರಿಸಿದರು.

ಗೃಹ ಸಚಿವರ ವಿವರಣೆ: 2014ರ ಜ.24ರಂದು ಬಂಡೆ ಶೂಟೌಟ್ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳು, ಡಿಎನ್‍ಎ ತಜ್ಞರು, ಬ್ಯಾಲೆಸ್ಟಿಕ್ ತಜ್ಞರು, ಫೊರೆನ್ಸಿಕ್ ವರದಿ, ಸ್ಥಳ ತನಿಖೆ ಹಾಗೂ ಇನ್ನಿತರೆ ವಿವರಗಳನ್ನು ಸಮಗ್ರವಾಗಿ ಪರಿಶೀಲಿಸಿ ಸಿಐಡಿ ಸರ್ಕಾರಕ್ಕೆ ವರದಿ ನೀಡಿದೆ.

ಘಟನೆಯಲ್ಲಿ ಮೃತಪಟ್ಟ ಮುನ್ನ ಅಲಿಯಾಸ್ ಶೂಟರ್ ಮುನ್ನ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಠಾಣೆಗಳ ಸರಹದ್ದಿನಲ್ಲಿ ಕೊಲೆ, ಸುಲಿಗೆ, ದರೋಡೆ ಹಾಗೂ ಇತರೆ ಘೋರ ಅಪರಾಧಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿದ್ದು, ಮುಂಬೈ ಡೋಂಗ್ರಿ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದ. ಮುತ್ತೂಟ್ ಫೈನಾನ್ಸ್ ದರೋಡೆ ಪ್ರಕರಣದ ಆರೋಪಿಗಳ ಪತ್ತೆಯ ಬಗ್ಗೆ ಇನ್‍ಸ್ಪೆಕ್ಟರ್ ಕೆ.ಎಂ. ಸತೀಶ್, ಪಿಎಸ್‍ಐ ಮಲ್ಲಿಕಾರ್ಜುನ ಬಂಡೆ, ಹೇಮಂತ ಕುಮಾರ್, ಮುರಳಿ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಿರುವುದು ತನಿಖಾ ಕಾಲಕ್ಕೆ ಸಂಗ್ರಹಿಸಿದ ದಾಖಲೆಗಳಿಂದ ದೃಢಪಟ್ಟಿದೆ.

ತಂಡದ ಸದಸ್ಯರು ಜ.8ರಂದು ಘಟನೆಯಲ್ಲಿ ಹಾಜರಿದ್ದಿದ್ದು, ಘಟನೆಯ ನಂತರ ಹಿರಿಕಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿರುವುದು, ಆ ಎಲ್ಲ ಅಧಿಕಾರಿಗಳು ನೀಡಿರುವ ಹೇಳಿಕೆಗಳಿಂದ ಮತ್ತು ಅವರ ಮೊಬೈಲ್ ಟವರ್ ಲೊಕೇಷನ್‍ಗಳಿಂದ ಖಚಿತವಾಗಿ ದೆ. ಆರೋಪಿ ಮುನ್ನ ತನಿಖಾ ತಂಡದ ಮೇಲೆ ಹಾರಿಸಲು ಉಪಯೋಗಿಸಿದ ಪಿಸ್ತೂಲ್ ಕಂಟ್ರಿ ಮೇಡ್ ಎಂಬುದು ಬ್ಯಾಲೆಸ್ಟಿಕ್ ತಜ್ಞರು ದೃಢಪಡಿಸಿದ್ದಾರೆ. ಅದರಿಂದ ಗುಂಡುಗಳು ಸಿಡಿದ ಬಗ್ಗೆ ವಿದಿ ವಿಜ್ಞಾನ ಪ್ರಯೋಗಾಲಯದ ಬ್ಯಾಲೆಸ್ಟಿಕ್ ತಜ್ಞರು ಪರಿಶೀಲಿಸಿ ಮತ್ತು ಅದರ ಮೂಲಕ ಪ್ರಾಯೋಗಿಕವಾಗಿ ಗುಂಡು ಹಾರಿಸುವ ಮೂಲಕ ಅದು ಉಪಯೋಗಿಸುವ ಸ್ಥಿತಿಯಲ್ಲಿ ಇದ್ದಿದ್ದನ್ನು ತಜ್ಞರು ಖಚಿತಪಡಿಸಿದ್ದಾರೆ.

ಪ್ರಕರಣದ ತನಿಖಾ ಕಾಲಕ್ಕೆ ಕಂಟ್ರೋಲ್ ರೂಮಿನಿಂದ ಪಡೆದ ದಾಖಲಾತಿಗಳು ಮತ್ತು ವಿಎಚ್ ಎಫ್ ನಲ್ಲಿ ದಾಖಲಾಗಿರುವ ಸಂಭಾಷಣೆಗಳನ್ನು ಹಾಗೂ ಇನ್ನಿತರೆ ಪೊಲೀಸ್ ಅಧಿಕಾರಿಗಳ ಮೊಬೈಲ್ ಕರೆಗಳು ಮತ್ತು ಸಿಮ್ ಕಾರ್ಡ್‍ಗಳನ್ನು ಪರಿಶೀಲಿಸಲಾಗಿ, ಮೇಲಧಿಕಾರಿಗಳು ಕಂಟ್ರೋಲ್ ರೊಂನೊಂದಿಗೆ ವ್ಯವಹರಿಸಿರುವುದು ಟವರ್ ಲೊಕೇಷನ್‍ಗಳಿಂದ ಸ್ಪಷ್ಟವಾಗಿದೆ. ಘಟನೆ ಸಂದರ್ಭದಲ್ಲಿ ಪಿಸ್ತೂಲಿನಿಂದ ಹೊರಬಂದ ಗುಂಡುಗಳ ಪದಾರ್ಥಗಳ ಕುರಿತು ಹಾಗೂ ಗಾಯಾಳು ಮತ್ತು ಮೃತ ದೇಹಗಳ ಮೇಲೆ ಕಂಡುಬಂದಿದ್ದ ಗಾಯಗಳು (ಎಂಟ್ರಿ- ಎಕ್ಸಿಟ್) ಎನ್ನುವುದನ್ನು ರಾಯಚೂರು ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಫೋರೆನ್ಸಿಕ್ ತಜ್ಞರಾದ ಪ್ರೋ.ರಾಜೇಶ್ ಸಂಗ್ರಾಮ ಅವರು ತಮ್ಮ ವರದಿಯಲ್ಲಿ ನಮೂದಿಸಿದ್ದಾರೆ.

ಘಟನೆ ಕಾಲದಲ್ಲಿ ಬಂಡೆಯವರು ಇಲಾಖೆ ವತಿಯಿಂದ ಪಡೆದುಕೊಂಡಿದ್ದ ಸರ್ವಿಸ್ ರಿವಾಲ್ವರ್ ಅನ್ನು ತಮ್ಮ ಸ್ವಗೃಹದಲ್ಲಿ ಇಟ್ಟು ಹೋಗಿದ್ದರು ಎಂಬುದೂ ದಾಖಲಾಗಿದೆ. ಮುನ್ನಾನನ್ನು ತನಿಖಾ ತಂಡದವರು ಬಂಧಿಸಲು ಹೋದಾಗ ಆತನು ಅವರಿಂದ ತಪ್ಪಿಸಿಕೊಳ್ಳಲು ಹಲ್ಲೆ ಮಾಡಲು ಯತ್ನಿಸಿದ್ದಾನೆ. ಸರ್ಕಾರಿ ಕರ್ತವ್ಯಕ್ಕೆ ಅಡಚಣೆ ಮಾಡುವ ಜೊತೆಗೆ ತನಿಖಾಧಿಕಾರಿಗಳನ್ನು ಗಾಯಗೊಳಿಸಿ ಸಾಯಿಸಲು ಪ್ರಯತ್ನಿಸಿದಾಗ ತನಿಖಾ ತಂಡ ಗುಂಡುಗಳನ್ನು ಹಾರಿಸಿದೆ. ಈ ವೇಳೆ ಮುನ್ನಾ ಪೊಲೀಸ್ ತಂಡದಲ್ಲಿದ್ದ ಮುರಳಿಯವರ ಪಿಸ್ತೂಲನ್ನು ಕಿತ್ತುಕೊಂಡು ಬಂಡೆಯವರ ಮೇಲೆ ಗುಂಡು ಹಾರಿಸಿದ್ದಾನೆ. ಅಲ್ಲದೇ ಆತ ಹಾರಿಸಿದ ಗುಂಡಿಗೆ ಎಎಸ್‍ಐ ಉದ್ದಂಡಪ್ಪ ಅವರಿಗೂ ಗಂಭೀರ ಗಾಯಗಳಾಗಿತ್ತು.

ಆರೋಪಿ ಮುನ್ನಾನಿಗೂ ಪೊಲೀಸರು ತಿರುಗಿ ಹಾರಿಸಿದ ಗುಂಡು ಆತನ ತಲೆ, ಹೊಟ್ಟೆ ಹಾಗೂ ಕಾಲುಗಳಿಗೆ ಆದ ಗಾಯಗಳಿಂದ ಮೃತಪಟ್ಟನೆಂದು ಸಿಐಡಿ ತನಿಖೆಯಲ್ಲಿ ದೃಢಪಟ್ಟಿದೆ. ತನಿಖಾ ಕಾಲದಲ್ಲಿ ಮೂವರು ಸ್ಥಳೀಯ ತನಿಖಾಧಿಕಾರಿಗಳು ಮತ್ತು ಸಿಬ್ಬಂದಿ ದುರ್ನಡತೆ, ಕರ್ತವ್ಯ ನಿರ್ಲಕ್ಷ್ಯತೆ ಮತ್ತು ಬೇಜವಾಬಾಬ್ದಾರಿತನ ಪ್ರದರ್ಶಿಸಿರುವುದು ಸಿಐಡಿ ವರದಿಯಲ್ಲಿ ತಿಳಿಸಿದ್ದು, ಅವರ ಮೇಲೆ ಇಲಾಖೆ ವಿಚಾರಣೆಗೆ ಕ್ರಮ ಕೈಕೊಳ್ಳಲಾಗಿದೆ. ಸರ್ಕಾರ ಬಂಡೆ ಕುಟುಂಬಕ್ಕೆ ರು.55 ಲಕ್ಷ ನೀಡಿದೆ. ಒಂದು ನಿವೇಶನ ನೀಡುತ್ತಿದೆ. ಜತೆಗೆ ಅವರು ಮೃತಪಡುವ ದಿನಾಂಕದಂದು ಏನು ವೇತನ ಪಡೆಯುತ್ತಿದ್ದರೋ ಅದೇ ವೇತನವನ್ನು ಅವರ ನಿವೃತ್ತಿಯವರೆಗೂ ನೀಡಲು ನಿರ್ಧರಿಸಲಾಗಿದೆ .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com