
ಬೆಂಗಳೂರು: ಮಾತೃಭಾಷಾ ಶಿಕ್ಷಣ ಕಡ್ಡಾಯಗೊಳಿಸುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ. ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ ವರ್ಷದಿಂದ ಮಾತೃಭಾಷಾ ಕಲಿಕೆ ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಪ್ರತ್ಯೇಕ ಕಾನೂನು ರಚಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಅಧಿವೇಶನದಲ್ಲೇ ವಿಧೇಯಕ ಮಂಡನೆಗೆ ಪ್ರಯತ್ನ ನಡೆಸಲಾಗುವುದು ಎಂದರು.
ಪರೀಕ್ಷೆ ಸಂದರ್ಭದಲ್ಲಿ ಸಾಮೂಹಿಕ ನಕಲು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪಿಯು ಪರೀಕ್ಷೆ ಸಂದರ್ಭದಲ್ಲಿ ನಕಲು ಪಿಡುಗುತಪ್ಪಿಸಲು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ
ಅಳವಡಿಸಲಾಗುವುದು ಎಂದು ಹೇಳಿದರು. ಕಡತ ವಿಲೇವಾರಿಯಲ್ಲಿ ನನ್ನ ಇಲಾಖೆ ಹಿಂದೆ ಬಿದ್ದಿಲ್ಲ. ಕಡತ ವಿಲೇವಾರಿಯಲ್ಲಿ ನಂಬರ್ ಒನ್ ನಾನೇ. ನಾನು 24 ಶೈಕ್ಷಣಿಕ
ಜಿಲ್ಲೆಗಳಲ್ಲಿ ಇದುವರೆಗೆ ಪ್ರವಾಸ ನಡೆಸಿದ್ದು, ಯಾವ ಕಡತವೂ ಇದುವರೆಗೆ ಬಾಕಿ ಇಲ್ಲ ಎಂದು ಹೇಳಿದರು. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅನಧಿ ಕೃತ ಶಾಲೆಗಳು ಇವೆ. ಇದನ್ನು ನಿಯಂತ್ರಿಸುವುದಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಯಾದಗಿರಿಯ ಶಾಲೆಯಲ್ಲಿ ಅನ್ನಕ್ಕಾಗಿ ಮಕ್ಕಳ ಗೋಳು ಪ್ರಕರಣದ ಬಗ್ಗೆ ಡಿಡಿಪಿಐ ಹಾಗೂ ಬಿಇಓಗಳಿಂದ ವರದಿ ಕೇಳಲಾಗಿದೆ ಎಂದರು.
ತೊಗಾಡಿಯಾ ಮಹಾತ್ಮರೇ?
ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಷಣ ಕೇಳುವುದಕ್ಕೆ ವಿಎಚ್‍ಪಿ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಮಹಾತ್ಮರೇ ಎಂದು ಸಚಿವ ಕಿಮ್ಮನೆ ರತ್ನಾಕರ ಪ್ರಶ್ನಿಸಿದ್ದಾರೆ. ಪ್ರವೇಶ ನಿರ್ಬಂಧಿಸಿ ನ್ಯಾಯಾಲಯ ಆದೇಶ ನೀಡಿದ ಮೇಲೆ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಷಣ ಮಾಡುವುದಕ್ಕೆ ಅವಕಾಶವಿಲ್ಲ. ಅವರೇನು ಮಹಾತ್ಮರಲ್ಲ. ಬಿಜೆಪಿಯವರಿಗ್ಯಾಕೆ ಅವರ ಭಾಷಣಕೇಳುವ ಹುಚ್ಚು ಎಂದು ಪ್ರಶ್ನಿಸಿದ್ದಾರೆ.
Advertisement