ಡೀಸೆಲ್ ದರ ಇಳಿಕೆಯಿಂದ ಭಾರಿ ಉಳಿತಾಯ, ಆದರೂ ಬಸ್ ಪ್ರಯಾಣ ದರ ಮಾತ್ರ ಇಳಿಸೋಲ್ಲ

ಡೀಸೆಲ್ ದರ ಪದೇಪದೆ ಇಳಿಕೆಯಾಗುತ್ತಿದ್ದರೂ ಬಸ್ ಪ್ರಯಾಣ ದರ ಇಳಿಕೆ ಮಾಡಲಾಗುತ್ತಿಲ್ಲ ಎಂಬುದನ್ನು...
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ವಿಧಾನಪರಿಷತ್ತು: ಡೀಸೆಲ್ ದರ ಪದೇಪದೆ ಇಳಿಕೆಯಾಗುತ್ತಿದ್ದರೂ ಬಸ್ ಪ್ರಯಾಣ ದರ ಇಳಿಕೆ ಮಾಡಲಾಗುತ್ತಿಲ್ಲ ಎಂಬುದನ್ನು ಸರ್ಕಾರ ಸಮರ್ಥಿಸಿಕೊಂಡಿದೆಯಲ್ಲದೇ, ಇನ್ನೂ
ಪ್ರಯಾಣ ದರ ಇಳಿಸಿದರೆ ಸಾರಿಗೆ ನಿಗಮಗಳು ನಷ್ಟಕ್ಕೆ ಹೋಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಇ.ಕೃಷ್ಣಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವರು, ಡೀಸೆಲ್ ದರ ಲೀಟರ್‍ಗೆ 14 ರುಪಾಯಿ ಇಳಿಕೆ ಮಾಡಿದರೂ ವೆಚ್ಚ ಕಡಿಮೆ ಆಗಿಲ್ಲ. ಸಾಲದ ಪ್ರಮಾಣವೂ ಜಾಸ್ತಿ ಇದೆ. ಇಂತಹ ಸಂದರ್ಭದಲ್ಲಿ ಪ್ರಯಾಣ ದರ ಮತ್ತಷ್ಟು ಇಳಿಕೆ ಮಾಡಿದಲ್ಲಿ ಎಲ್ಲ ನಾಲ್ಕು ನಿಗಮಗಳು ನಷ್ಟಕ್ಕೆ ಹೋಗುತ್ತವೆ. ಸರ್ಕಾರ ಸಬ್ಸಿಡಿ ಕೊಟ್ಟಲ್ಲಿ ದರ ಇಳಿಕೆಗೆ ಗಮನ ನೀಡಲು ಸಾಧ್ಯ ಎಂದರು.

2008ರಲ್ಲಿ ಬಿಎಂಟಿಸಿ ನೌಕರರಿಗೆ ವೇತನಕ್ಕಾಗಿ ವೆಚ್ಚವಾಗಿರುವುದು 360 ಕೋಟಿ ರುಪಾಯಿ, ಇದು ಏಳು ವರ್ಷದಲ್ಲಿ 1045 ಕೋಟಿ ಆಗಿದೆ. ಅಂದರೆ, 745 ಕೋಟಿ ರುಪಾಯಿ ಹೆಚ್ಚಳವಾಗಿದೆ. ಡೀಸೆಲ್ ಕಡಿಮೆ ಆಗಿರುವುದರಿಂದ 232 ಕೋಟಿ ರುಪಾಯಿ ಉಳಿತಾಯವಾದರೂ ಸಿಬ್ಬಂದಿಗೆ ಸಮವಸ್ತ್ರ, ರೈನ್‍ಕೋಟ್, ಸಾಲದ ಬಡ್ಡಿ ಸೇರಿದಂತೆ ಇನ್ನಿತರೆ ವೆಚ್ಚ 473 ಕೋಟಿ ರುಪಾಯಿಗಳಷ್ಟಾಗುತ್ತಿದೆ. ಇದರ ಜತೆಗೆ 1400 ಕೋಟಿ ರುಪಾಯಿ ಸಾಲ ಇದೆ. ಇವೆಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ಸಾಲ ಮಾಡಿರುವುದು  ಬಸ್‍ಗಳ ಖರೀದಿಗೆ ಹೊರತು ಮತ್ತಾವುದೇ ಉದ್ದೇಶಕ್ಕಲ್ಲ. ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸಲು ಉತ್ತಮ ಬಸ್‍ಗಳನ್ನು ಒದಗಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಇ. ಕೃಷ್ಣಪ್ಪ ಮಾತನಾಡಿ ಕಳೆದ ಆರು ತಿಂಗಳಲ್ಲಿ  ಶೇ.29ರಷ್ಟು ಇಂಧನ ಬೆಲೆ ಇಳಿಕೆಯಾಗಿದೆ ಆದರೆ, ಪ್ರಯಾಣ ದರ ಇಳಿಕೆಯಾಗಿರುವುದು ಶೇ.1.4ರಿಂದ 1.6ರಷ್ಟು ಮಾತ್ರ. ಇದು ಒಂದು ರೀತಿ ಕಣ್ಣೊರೆಸುವ ತಂತ್ರ ಎಂದರು. ಇವರಿಗೆ ಬೆಂಬಲವಾಗಿ ದನಿಗೂಡಿಸಿದ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ, ಡೀಸೆಲ್ ದರ ಇಳಿಕೆದರೂ ಪ್ರಯಾಣದರ ಇಳಿಕೆಯಾಗಿಲ್ಲ.

ನಷ್ಟ ಅನುಭವಿಸಿರುವುದು ಬೇರೆ ವಿಷಯಕ್ಕೆ. ನಷ್ಟ ಭರ್ತಿ ಮಾಡಿಕೊಳ್ಳಲು ಬೇರೆ ಮಾರ್ಗ ಹುಡುಕಬೇಕು. ಅದನ್ನು ಬಿಟ್ಟು ಪ್ರಯಾಣಿಕರ ಮೇಲೆ ಹೊರೆ ಹೇರುವುದು ಯಾವ ನ್ಯಾಯ ಎಂದರಲ್ಲದೆ, ಈ ವಿಚಾರವಾಗಿ ಚರ್ಚೆ ಮಾಡಲು ಅರ್ಧ ಗಂಟೆ ಸಮಯ ಕೊಡಿ. ಬೇರೆ ನಿಯಮಾವಳಿ ಪ್ರಕಾರ ಚರ್ಚಿಸೋಣ ಎಂದಾಗ ಅದಕ್ಕೆ ಸಭಾಪತಿಗಳು ಒಪ್ಪಿಗೆ ನೀಡಿದರು.

ಕ್ಯಾಬ್‍ಗಳಿಗೆ ಶೀಘ್ರ ಕಡಿವಾಣ
ನಗರದ ವ್ಯಾಪ್ತಿಯಲ್ಲಿ ಕ್ಯಾಬ್‍ಗಳು, ಟೆಂಪೋಗಳು ಮತ್ತಿತರ ಖಾಸಗಿ ವಾಹನಗಳು ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದಕ್ಕೆ ಕಡಿವಾಣ ಹಾಕಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸದಸ್ಯ ಕೆ. ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಎಂಟಿಸಿ ಬಸ್‍ಗಳು ಸಂಚಾರ ಮಾಡುವ ಮಾರ್ಗದಲ್ಲಿ ಕ್ಯಾಬ್‍ಗಳು, ಟೆಂಪೋಗಳು ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದರಿಂದ ಬಿಎಂಟಿಸಿ ನಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಕಡಿವಾಣ ಹಾಕಲು ಬ್ರೇಕ್ ಇನ್ಸ್‍ಪೆಕ್ಟರ್‍ಗಳ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಅಧಿಕಾರಿಗಳು ನೇಮಕವಾದಲ್ಲಿ ಖಾಸಗಿ ವಾಹನಗಳು ಪ್ರಯಾಣಿಕರನ್ನು ಕರೆದೊಯ್ಯುವುದಕ್ಕೆ ಕಡಿವಾಣ ಹಾಕಬಹುದಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com