139 ನೈಸ್ ಕಡತ ಕಾಣೆ ನಿಜ

ನೈಸ್ ಯೋಜನೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ 139 ಕಡತಗಳು...
139 ನೈಸ್ ಕಡತ ಕಾಣೆ ನಿಜ

ವಿಧಾನಸಭೆ: ನೈಸ್ ಯೋಜನೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ 139 ಕಡತಗಳು ಕಾಣೆಯಾಗಿರುವುದು ನಿಜ. ಈ ಸಂಬಂಧ ಏಳು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಲೋಕೋಪಯೋಗಿ ಖಾತೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.

ಲಿಖಿತ ಉತ್ತರ ಒದಗಿಸಿರುವ ಸಚಿವ ಡಾ. ಎಚ್.ಸಿ ಮಹದೇವಪ್ಪ, ಒಟ್ಟು 139 ಕಡತಗಳು ಕಾಣೆಯಾಗಿವೆ. ಇದರಲ್ಲಿ 7 ಕಡತಗಳನ್ನು ಪತ್ತೆಹಚ್ಚಲಾಗಿದ್ದು, ಒಂದು ಕಡತವನ್ನು ನಾಶಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ನೈಸ್ ಯೋಜನೆಯ ಸಭೆ ಆಯೋಜಿಸಲು ಮತ್ತು ಸಮನ್ವಯತೆಗೆ ಇಲಾಖೆಯಲ್ಲಿ ಸಮನ್ವಯಾಕಾರಿ ಹುದ್ದೆ ಸೃಷ್ಟಿಸಲಾಗಿತ್ತು. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಉಪ ಜಂಟಿ ನಿರ್ದೇಶಕರ ವೃಂದದ ಅಧಿಕಾರಿಯನ್ನು ನೇಮಿಸಲಾಗಿತ್ತು. ಈ ಅಧಿಕಾರಿ ಕಚೇರಿ ಸಚಿವಾಲಯದ ವಿಧಿವಿಧಾನಗಳ ಅನ್ವಯ ಕಡತ ನಿರ್ವಹಣೆ ಮಾಡಿಲ್ಲ.

ಬದಲಿಗೆ ನಿರ್ದೇಶಕರ ಮಟ್ಟದ ಕಚೇರಿಯಂತೆ ಕಡತ ನಿರ್ವಹಣೆ ಮಾಡಿದ್ದು, ಕಡತಗಳ ಚಲನವಲನ ಪುಸ್ತಕ, ಕಡತ ನಾಶಗೊಳಿಸಿದ ಪಟ್ಟಿ, ರಿಜಿಸ್ಟರ್ ನಿರ್ವಹಿಸಿದಿಲ್ಲ. ಈ ಕಚೇರಿಯಲ್ಲಿ ಸಂ. ಪಿಡಬ್ಲ್ಯುಡಿ 155 ಸಿಆರ್‍ಎಂ 95 ಎಂಬ ಒಂದು ಕಡತದ ಸಂಖ್ಯೆಯನ್ನೇ ಹಲವು ವಿಷಯಗಳ ಕಡತಗಳಿಗೆ ಕಡತ ಸಂಖ್ಯೆ ನೀಡಿ ತೆರೆಯಲಾಗಿದೆ. ಹೀಗಾಗಿ ಇದೇ ಸಂಖ್ಯೆಯ ಸುಮಾರು 50ಕ್ಕೂ ಹೆಚ್ಚು ಕಡತಗಳು ಇವೆ ಎಂದು ಸಚಿವರು ವಿವರಿಸಿದರು.

ಯೋಜನೆಗೆ ಸಂಬಂಧಿಸಿದ ಫ್ರೇಮ್ ವರ್ಕ್ ಕರಾರು, ತಾಂತ್ರಿಕ ವರದಿ ಇತ್ಯಾದಿ ಕಡತಗಳು ಇದ್ದು, ಅದನ್ನು ಸದನ ಸಮಿತಿಗೆ ನೀಡಲಾಗಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ಪ್ರಕರಣದ ಆದೇಶಗಳ ಪ್ರತಿಗಳು ಕೆಐಡಿಬಿಯಲ್ಲಿ ಲಭ್ಯವಿದ್ದು, ಅವುಗಳನ್ನೂ ಸದನ ಸಮಿತಿಗೆ ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಏಳು ಅಧಿಕಾರಿಗಳಿಗೆ ನೋಟಿಸ್

ಲೋಕೋಪಯೋಗಿ ಇಲಾಖೆಯಲ್ಲಿ ಕಡತ ಕಾಣೆ ಆಗಿರುವ ಬಗ್ಗೆ ಏಳು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಯೋಜನಾ ಸಮನ್ವಯಾಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್. ಬಸವರಾಜು, ಎ.ಕೆ. ಸೋಮಣ್ಣ, ಡಾ.ಕೆ.ಎನ್. ಚಂದ್ರಶೇಖರ್, ಎಂ. ಶಶಿಧರ್, ಟಿ.ಬಿ. ರೇಣುಕಾಪ್ರಸಾದ್, ಮಸೂದ್ ಷರೀಫ್ ಮತ್ತು ಎಂ. ದೇವಿಪ್ರಸಾದ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಇದರಲ್ಲಿ ಎ. ಕೆ. ಸೋಮಣ್ಣ ಅವರು ಇನ್ನೂ ಉತ್ತರ ಸ್ವೀಕೃತವಾಗಿಲ್ಲ. ಎಂ. ಶಶಿಧರ್ ಅವರಿಗೆ ಕಳುಹಿಸಲಾದ ನೋಟಿಸು `ಅಡ್ರೆಸ್ ಲೆಫ್ಟ್' ಎಂದು ನಮೂದಿಸಿ ಹಿಂದುರುಗಿದೆ. ಸ್ವೀಕೃತ ಸಮಜಾಯಿಷಿಗಳನ್ನು ಪರಿಶೀಲಿಸಿ ನಿಯಮಗಳ ಅನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾ. ಎಚ್.ಸಿ. ಮಹದೇವಪ್ಪ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com